ಲಕ್ನೋ : ಮೊಘಲ್ ಸಾಮ್ರಾಜ್ಯದ ಕುರಿತಾದ ಅಧ್ಯಾಯಗಳನ್ನು ಸಿಬಿಎಸ್ಸಿ ಹಾಗೂ 12ನೇ ತರಗತಿಯ ಬೋರ್ಡ್ ಪಠ್ಯದಿಂದ ಉತ್ತರ ಪ್ರದೇಶ ಸರ್ಕಾರ ತೆಗೆದುಹಾಕಿದೆ.
ಶಾಲಾ ಶಿಕ್ಷಣದ ಕೇಂದ್ರ ಮತ್ತು ರಾಜ್ಯದ ಉನ್ನತ ಸಲಹಾ ಸಂಸ್ಥೆಯಾದ ಎನ್ಸಿಇಆರ್ಟಿ ಇತಿಹಾಸ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ನೂತನ ಪಠ್ಯ ಪುಸ್ತಕದಲ್ಲಿ 12ನೇ ತರಗತಿಯ ಮಧ್ಯಕಾಲೀನ ಇತಿಹಾಸ ಪಠ್ಯಪುಸ್ತಕಗಳಿಂದ ಕಿಂಗ್ಸ್ ಮತ್ತು ಕ್ರಾನಿಕಲ್ಸ್ ಹಾಗೂ ದಿ ಮೊಘಲ್ ಕೋರ್ಟ್ಸ್ ಅಧ್ಯಾಯಗಳನ್ನು ಕೈಬಿಟ್ಟಿದೆ.
ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳು ಹೊಸ 12ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳನ್ನು ಅಳವಡಿಸಿಕೊಳ್ಳಲಿವೆ. ಅದರಲ್ಲಿ ಮೊಘಲ್ ಇತಿಹಾಸದ ಪಠ್ಯಗಳನ್ನು ತೆಗೆದುಹಾಕಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ನಾವು ನಮ್ಮ ವಿದ್ಯಾರ್ಥಿಗಳಿಗೆ ಎನ್ಸಿಇಆರ್ಟಿ ಪುಸ್ತಕಗಳನ್ನು ಬಳಸಿ ಕಲಿಸುತ್ತೇವೆ. ಪರಿಷ್ಕೃತ ಆವೃತ್ತಿಯಲ್ಲಿ ಏನಿದೆಯೋ ಅದನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ.