ಭಾರತದ ಈ ಕಾಳಿ ದೇವಸ್ಥಾನದಲ್ಲಿ ಸಿಗುತ್ತೆ ನೂಡಲ್ಸ್ ಪ್ರಸಾದ!
ಗುರುವಾರ, 26 ಆಗಸ್ಟ್ 2021 (08:38 IST)
Kolkatas Kali Temple: ನಮ್ಮ ದೇಶದಲ್ಲಿ ವಿವಿಧ ಸಂಸ್ಕೃತಿ ಮತ್ತು ಸಮುದಾಯಗಳು ಇರುವುದರಿಂದ, ಆಯಾ ಪ್ರದೇಶಗಳ ಧಾರ್ಮಿಕ ಕೇಂದ್ರಗಳಲ್ಲಿ ವಿಭಿನ್ನ ರೀತಿಯ ಪ್ರಸಾದಗಳನ್ನು ನೀಡುತ್ತಾರೆ. ಉದಾಹರಣೆಗೆ, ಮಧುರೈಯ ಅಳಗರ್ ಕೋವಿಲ್ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ದೋಸೆಯನ್ನು ನೀಡಿದರೆ, ಉತ್ತರ ಪ್ರದೇಶದ ಕಬೀಬ್ಸ್ ಬಾಬಾ ದೇಗುಲದಲ್ಲಿ ಮದ್ಯವನ್ನು ಪ್ರಸಾದ ರೂಪದಲ್ಲಿ ನೀಡುತ್ತಾರೆ.
ಅದೇ ರೀತಿ ಕಲ್ಕತ್ತಾದ ದೇಗುಲ ಒಂದರಲ್ಲಿ, ನೂಡಲ್ಸ್ ಮತ್ತು ಚಾಪ್ಸ್ ಸೂಯಿಯನ್ನು ಪ್ರಸಾದ ರೂಪದಲ್ಲಿ ನೀಡುತ್ತಾರಂತೆ. ರಸಗುಲ್ಲಾದ ನಾಡಿನಲ್ಲಿ ಚೈನೀಸ್ ಪ್ರಸಾದ
ಅರೇ ಚೀನಾ, ಜಪಾನ್, ಕೊರಿಯಾ, ನೇಪಾಳ, ಟಿಬೇಟ್ ಅಥವಾ ನಮ್ಮ ಈಶಾನ್ಯ ಭಾರತದ ಧಾರ್ಮಿಕ ಕೇಂದ್ರಗಳಲ್ಲಿ ಇಂತದ್ದೊಂದು ಪ್ರಸಾದ ಸಿಕ್ಕಿದರೆ ಅಚ್ಚರಿ ಇಲ್ಲ, ಆದರೆ ರಸಗುಲ್ಲಾದ ನಾಡಿನಲ್ಲಿ ಚೈನೀಸ್ ಪ್ರಸಾದ ಸಿಗುವುದೆಂದರೆ ವಿಚಿತ್ರ ಅಂತೀರಾ? ಎಲ್ಲಾ ಚೀನಿಯರ ಪ್ರಭಾವ! ಏಕೆಂದರೆ ಇಂತಹ ವಿಶೇಷ ಪ್ರಸಾದ ಸಿಗುತ್ತಿರುವುದು ಚೈನೀಸ್ ಕಾಳಿ ದೇವಿಯ ಮಂದಿರದಲ್ಲಿ. ಕಲ್ಕತ್ತಾದ ಚೈನಾ ಟೌನ್ ಎಂದೇ ಜನಪ್ರಿಯ ಆಗಿರುವ ಕಲ್ಕತ್ತಾದ ಟಂಗ್ರಾ ಪ್ರದೇಶದಲ್ಲಿ ಮಹಾಕಾಳಿ ದೇವಿಯ ಈ ಮಂದಿರವಿದೆ.
ಈ ಪ್ರದೇಶದಲ್ಲಿ ಟಿಬೇಟಿಯನ್ ಮತ್ತು ಪೂರ್ವ ಏಷ್ಯಾದ ಸಂಸ್ಕೃತಿಯ ಮಿಶ್ರಣವನ್ನು ಟಂಗ್ರಾ ಪ್ರದೇಶದಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ವಾಸಿಸುವ ಜನರು ಅದನ್ನು ನಿರ್ವಹಿಸಿಕೊಂಡು ಮತ್ತು ರಕ್ಷಿಸಿಕೊಂಡು ಬಂದಿದ್ದಾರೆ. ಅದೇ ರೀತಿ ಅಲ್ಲಿರುವ ಮಹಾಕಾಳಿ ದೇಗುಲದಲ್ಲಿಯೂ ಕೂಡ ಅಲ್ಲಿನ ಜನರ ಸಂಸ್ಕೃತಿಯ ಪ್ರತಿಬಿಂಬವನ್ನು ಕಾಣಬಹುದು. ಅಂದರೆ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡೇ, ಅದಕ್ಕೆ ಚೈನೀಸ್ ಸಂಸ್ಕೃತಿಯ ಸ್ಪರ್ಷವನ್ನು ನೀಡುವ ಪ್ರಯತ್ನವನ್ನು ಅಲ್ಲಿನ ಜನರು ಮಾಡಿದ್ದಾರೆ. ಬಂಗಾಳಿ ಮತ್ತು ಚೈನೀಸ್ ಸಮಾಗಮ
ನೂಡಲ್ಸ್, ಚಾಪ್ ಸೂಯಿ, ಅನ್ನ ಮತ್ತು ತರಕಾರಿ ಖಾದ್ಯಗಳನ್ನು ಮಹಾಕಾಳಿ ದೇವಿಗೆ ಮೊದಲು ಅರ್ಪಿಸಿ, ನಂತರ ಅವೆಲ್ಲವನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಟಂಗ್ರಾ ಪ್ರದೇಶದಲ್ಲಿರುವ ಈ ಚೈನೀಸ್ ಕಾಳಿ ದೇಗುಲವನ್ನು 20 ವರ್ಷಗಳ ಹಿಂದೆ ಬಂಗಾಳಿ ಮತ್ತು ಚೈನೀಸ್ ಜನರ ಸಹಾಯದಿಂದ ನಿರ್ಮಿಸಲಾಗಿದೆ. ಅದಕ್ಕಿಂತ ಮೊದಲು ಸುಮಾರು 60 ವರ್ಷಗಳ ವರೆಗೆ ಹಿಂದೂಗಳು ಆ ಸ್ಥಳದಲ್ಲಿ ಪೂಜೆ ಮಾಡುತ್ತಿದ್ದರು. ಆಗ ಅಲ್ಲಿ ಮರ ಒಂದರ ಕೆಳಗೆ ಕುಂಕುಮವನ್ನು ಹಚ್ಚಿದ ಎರಡು ಕಲ್ಲುಗಳನ್ನು ಇಟ್ಟು ಪೂಜಿಸಲಾಗುತ್ತಿತ್ತು. ಚೈನೀಸ್ ದೇಗುಲದ ಮಹಿಮೆ!
ಚೀನೀಯರಿಗೆ ಈ ಸ್ಥಳ ಅಷ್ಟೊಂದು ಪೂಜನೀಯ ಆಗಿದ್ದು ಏಕೆಂಬುದಕ್ಕೆ ಒಂದು ಜನಪ್ರಿಯ ಹಿನ್ನೆಲೆ ಇದೆ. ಬಹಳ ಹಿಂದೆ 10 ವರ್ಷದ ಬಾಲಕನೊಬ್ಬ ಆನಾರೋಗ್ಯಕ್ಕೆ ಒಳಗಾದನಂತೆ. ಯಾವುದೇ ರೀತಿಯ ಚಿಕಿತ್ಸೆ ಕೊಡಿಸಿದರೂ ಆತ ಗುಣಮುಖನಾಗಲಿಲ್ಲ. ಆಗ ಆತನ ಹೆತ್ತವರು, ಆತನನ್ನು ಆ ಮರದ ಕೆಳಗೆ ಮಲಗಿಸಿ, ಹಲವು ರಾತ್ರಿಗಳ ಕಾಲ ಪ್ರಾರ್ಥಿಸಿದರಂತೆ. ಆ ಹುಡುಗ ಕ್ರಮೇಣ ಚೇತರಿಸಿಕೊಳ್ಳಲು ಆರಂಭಿಸಿದ. ಆಗಿನಿಂದ ಚೀನಿ ಸಮುದಾಯದವರಿಗೆ ಈ ಜಾಗ ಅತ್ಯಂತ ಮಹತ್ವದ್ದಾಗಿದೆ.