ವಿಶ್ವದ 9ನೇ ಅತಿ ಪ್ರಭಾವಿ ವ್ಯಕ್ತಿ ಸೋನಿಯಾ ಗಾಂಧಿ

ಗುರುವಾರ, 10 ಮಾರ್ಚ್ 2011 (12:17 IST)
ಹೀಗೆಂದು ಹೇಳಿರುವುದು ಅಮೆರಿಕಾದ ಜನಪ್ರಿಯ ಫೋರ್ಬ್ಸ್ ನಿಯತಕಾಲಿಕ. 2011ರ ಸಾಲಿನ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಪತ್ರಿಕೆ, ನಂ.1 ಸ್ಥಾನವನ್ನು ಚೀನಾ ಪ್ರಧಾನಿ ಹೂ ಜಿಂಟಾವೋ ಅವರಿಗೆ ನೀಡಿದ್ದರೆ, ಒಂಬತ್ತನೇ ಸ್ಥಾನದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಣಿಸಿಕೊಂಡಿದ್ದಾರೆ.

ಇಟಲಿ ಸಂಜಾತೆ, ವಿದೇಶಿ ಧರ್ಮ (ರೋಮನ್ ಕ್ಯಾಥೊಲಿಕ್) ಮತ್ತು ರಾಜಕೀಯ ಹಿಂಜರಿಕೆಗಳ ಹೊರತಾಗಿಯೂ ಸೋನಿಯಾ ಗಾಂಧಿ 120 ಕೋಟಿ ಭಾರತೀಯರ ನಡುವೆ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಇತ್ತೀಚೆಗಷ್ಟೇ ಆಡಳಿತಾರೂಢ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿ ಸತತ ನಾಲ್ಕನೇ ಬಾರಿ ಆಯ್ಕೆಯಾದವರು. ಆ ಮೂಲಕ ನೆಹರು-ಗಾಂಧಿ ಕುಟುಂಬ ರಾಜಕಾರಣದ ಪಡಿಯಚ್ಚನ್ನು ಆಕೆ ಗಟ್ಟಿಗೊಳಿಸಿದ್ದಾರೆ ಎಂದು ಪತ್ರಿಕೆ ಸೋನಿಯಾ ಗಾಂಧಿಯವರನ್ನು ಬಣ್ಣಿಸಿದೆ.

ಅತ್ಯುತ್ತಮ ಆರ್ಥಿಕ ತಜ್ಞ ಎಂದು ಹೆಸರು ಪಡೆದಿರುವ ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಆರಿಸಿರುವ ವಿಚಾರದಲ್ಲಿಯಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಪ್ರಶಂಸಿಸಲಾಗಿದೆ. ತನ್ನ 40ರ ಹರೆಯದ ಪುತ್ರ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿ ಸ್ಥಾನಕ್ಕೆ ಸಿದ್ಧಗೊಳಿಸುತ್ತಿರುವ ಅವರು ಪರಮಾಣು ಶಕ್ತ ರಾಷ್ಟ್ರದ ನೈಜ ಶಕ್ತಿ ಎಂದು ಫೋರ್ಬ್ಸ್ ಅಭಿಪ್ರಾಯಪಟ್ಟಿದೆ.

ವಿಶ್ವದ ಒಟ್ಟು ಜನಸಂಖ್ಯೆಯ ಐದನೇ ಒಂದರಷ್ಟನ್ನು ಹೊಂದಿರುವ ಚೀನಾ ಪ್ರಧಾನ ಮಂತ್ರಿ ಹೂ ಜಿಂಟಾವೋ ಅತಿ ಪ್ರಭಾವಿ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ನದಿಗಳ ದಿಕ್ಕುಗಳನ್ನು ಬದಲಾಯಿಸುವ, ನಗರಗಳನ್ನು ನಿರ್ಮಿಸುವ, ಎದುರಾಳಿಗಳನ್ನು ಜೈಲಿಗೆ ತಳ್ಳುವ ಮತ್ತು ಅಧಿಕಾರಿಗಳು, ನ್ಯಾಯಾಲಯಗಳು ಮಧ್ಯ ಪ್ರವೇಶಿಸದ ರೀತಿಯಲ್ಲಿ ಇಂಟರ್ನೆಟ್ ಸೆನ್ಸಾರ್ ಮಾಡುವ ಇತರ ದೇಶಗಳ ನಾಯಕರಿಗೆ ಸಾಧ್ಯವಾಗದ ಕಾರ್ಯಗಳನ್ನು ಜಿಂಟಾವೋ ಮಾಡಿದ್ದಾರೆ ಎಂದು ಹೊಗಳಲಾಗಿದೆ.

ಕಳೆದ ವರ್ಷದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಈ ಬಾರಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಸೌದಿ ಅರೇಬಿಯಾ ದೊರೆ ಅಬ್ದುಲ್ಲಾ ವಿಶ್ವದ ಮೂರನೇ ಪ್ರಭಾವಿ ವ್ಯಕ್ತಿ.

ನೆಹರು ನಂತರದ ಭಾರತದ ಶ್ರೇಷ್ಠ ಪ್ರಧಾನ ಮಂತ್ರಿ ಎಂದು ಹೇಳಿಸಿಕೊಳ್ಳುತ್ತಿರುವ ಮನಮೋಹನ್ ಸಿಂಗ್ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದ್ದಾರೆ. ಅತಿ ವೇಗದಲ್ಲಿ ವೃದ್ಧಿಯಾಗುತ್ತಿರುವ ಆರ್ಥಿಕತೆಯ ರೂವಾರಿ ಎಂದು ಅವರನ್ನು ಬಣ್ಣಿಸಲಾಗಿದೆ.

ರಿಯಲೆನ್ಸ್ ಇಂಡಸ್ಟ್ರೀಸ್ ಉದ್ಯಮಿ ಮುಖೇಶ್ ಅಂಬಾನಿ 34 ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಲಕ್ಷ್ಮಿ ಮಿತ್ತಲ್ 44ನೇ ಪ್ರಭಾವಿ ವ್ಯಕ್ತಿಗಳು. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಶ್ಫಕ್ ಫರ್ವೇಜ್ ಖಯಾನಿ 29ರಲ್ಲಿದ್ದಾರೆ. ಮೋಸ್ಟ್ ವಾಂಟೆಡ್ ಭಯೋತ್ಪಾದಕರಾದ ಒಸಾಮಾ ಬಿನ್ ಲಾಡೆನ್ 57 ಹಾಗೂ ದಾವೂದ್ ಇಬ್ರಾಹಿಂ 63ನೇ ಸ್ಥಾನಗಳಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ