ಆಸ್ಕರ್ ಪ್ರಶಸ್ತಿ: ಸೀನ್ ಪೆನ್ ಅತ್ಯುತ್ತಮ ನಟ

ಸೋಮವಾರ, 23 ಫೆಬ್ರವರಿ 2009 (12:36 IST)
81ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಭಾನುವಾರ ಕೊಡಾಕ್ ಚಿತ್ರಮಂದಿರದಲ್ಲಿ ನಡೆದಿದ್ದು, 'ಮಿಲ್ಕ್' ಚಿತ್ರದ ಅಭಿನಯಕ್ಕಾಗಿ ಅಮೆರಿಕದ ಸೀನ್ ಪೆನ್ ಅವರಿಗೆ 'ಅತ್ಯುತ್ತಮ ನಟ' ಪ್ರಶಸ್ತಿ ಲಭಿಸಿದೆ. ಹತ್ಯೆಗೀಡಾದ, ಸಾನ್‌ಫ್ರಾನ್ಸಿಸ್ಕೋದ ಸಲಿಂಗಕಾಮಿಗಳ ಹಕ್ಕು ಹೋರಾಟಗಾರ ಹಾರ್ವಿ ಮಿಲ್ಕ್ ಎಂಬ ಪಾತ್ರದ ಅಭಿನಯಕ್ಕಾಗಿ ಸೀನ್ ಪೆನ್ ಈ ಅವರಿಗೆ ಪ್ರಶಸ್ತಿ ಒಲಿದಿದೆ.

ಸೀನ್ ಪೆನ್ ಅವರಿಗೆ ಇದು ಎರಡನೇ ಆಸ್ಕರ್ ಪ್ರಶಸ್ತಿಯಾಗಿದ್ದು, 2004ರಲ್ಲಿ 'ಮಿಸ್ಟಿಕ್ ರಿವರ್' ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಆಸ್ಕರ್ ಲಭಿಸಿತ್ತು.

"ಈ ಆಸ್ಕರ್ ಪ್ರಶಸ್ತಿಯನ್ನು ನಾನು ನಿರೀಕ್ಷಿಸಲಿರಲಿಲ್ಲ. ಆದರೆ ಈ ಪ್ರಶಸ್ತಿಗಾಗಿ ನಾನು ತುಂಬಾ ಬೆವರಿಳಿಸಿದ್ದೇನೆ" ಎಂದು ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಪೆನ್ ಅಭಿಪ್ರಾಯಪಟ್ಟರು.

ಮಿಲ್ಕ್ ಚಿತ್ರದ ನಿರ್ದೇಶಕ ಗಸ್ ವಾನ್ ಸಾಂಟ್ ಮಾತನಾಡುತ್ತಾ "ಪೆನ್ ಅವರು ಚಿತ್ರದಲ್ಲಿನ ಅಭಿನಯಕ್ಕಾಗಿ ಭಾರೀ ಪೂರ್ವ ತಯಾರಿ ಮಾಡಿದ್ದರು" ಎಂದು ಹೇಳಿದರು.

ಆಸ್ಕರ್ ಪ್ರಶಸ್ತಿಗಾಗಿನ ಅತ್ಯುತ್ತಮ ನಟ ಪೈಪೋಟಿಯಲ್ಲಿ ಪೆನ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ 'ದಿ ರೆಸ್ಲರ್' ಚಿತ್ರದ ನಾಯಕ ಮಿಕ್ಕಿ ರೌಕೆ ಇದ್ದರು. ಆದರೆ ಅಂತಿಮ ಜಯ ಪೆನ್ ಅವರಿಗೆ ಒಲಿದಿದೆ.

ಹಾಲಿವುಡ್‌ನ ಗೌರವಾನ್ವಿತ ನಟನಾದ ಪೆನ್ ಈ ಮೊದಲು 'ಸ್ಕ್ರೀನ್ ಆಕ್ಟರ‌್ಸ್ ಗಿಲ್ಡ್ ಅವಾರ್ಡ್‌'ನ 'ಅತ್ಯುತ್ತಮ ನಾಯಕ ನಟ ಪ್ರಶಸ್ತಿ' ಗೆದ್ದುಕೊಂಡಿದ್ದರು. ಇದುವರೆಗೆ ಐದು ಬಾರಿ ಪೆನ್ ಅವರು ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ