ಕಥೆಗಾರ ವಿಕಾಸ್‌ಗೆ ಶ್ರೇಯಸ್ಸು: ಸೈಮನ್

ಸೋಮವಾರ, 23 ಫೆಬ್ರವರಿ 2009 (12:28 IST)
ಸ್ಲಂ ಡಾಗ್ ಮಿಲಿಯನೇರ್ ಚಿತ್ರ ಆಸ್ಕರ್ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದಿದೆ. ಇದು ಭಾರತೀಯ ರಾಜತಾಂತ್ರಿಕ ಅಧಿಕಾರಿ ವಿಕಾಸ್ ಸ್ವರೂಪ್ ಎಂಬವರ 'ಕ್ಯೂ & ಎ' ಎಂಬ ಕಾದಂಬರಿ ಆಧಾರಿತ ಕಥನ. ಈ ಚಿತ್ರಕ್ಕಾಗಿ ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ ಪ್ರಶಸ್ತಿ ಗಳಿಸಿಕೊಂಡ ಬ್ರಿಟಿಷ್ ಚಿತ್ರಕಥೆ ರಚನೆಕಾರ ಸೈಮನ್ ಬ್ಯೂಫೊಯ್ ಅವರು, ತಮಗೆ ದೊರೆತ ಪ್ರಶಸ್ತಿಯ ಗೌರವವು ಲೇಖಕ ವಿಕಾಸ್ ಸ್ವರೂಪ್‌ಗೆ ಸಲ್ಲಬೇಕು ಎನ್ನುತ್ತಾರೆ.

'ಇದೊಂದು ಅದ್ಭುತ ಗೌರವ. ವಿಕಾಸ್ ಸ್ವರೂಪ್‌ಗೆ ನನ್ನ ಅನಂತಾನಂತ ಕೃತಜ್ಞತೆಗಳು. ಅವರಿಲ್ಲದೆ, ಸ್ಲಂ ಡಾಗ್... ರೂಪುಗೊಳ್ಳುತ್ತಿರಲಿಲ್ಲ' ಎಂದು ಪ್ರಶಸ್ತಿ ಸ್ವೀಕರಿಸುತ್ತಾ ಸೈಮನ್ ಹೇಳಿದ್ದಾರೆ.

ಇದೇ ಚಿತ್ರಕ್ಕಾಗಿ ಸೈಮನ್ ಅವರು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಮತ್ತು ಬಾಫ್ತಾ ಪ್ರಶಸ್ತಿಗಳನ್ನೂ ಬಾಚಿಕೊಂಡಿರುವುದು ಇಲ್ಲಿ ಉಲ್ಲೇಖಾರ್ಹ. ಇದು ಸೈಮನ್‌ಗೆ ಪ್ರಪ್ರಥಮ ಆಸ್ಕರ್ ಕೂಡ ಹೌದು. ಈ ಹಿಂದೆ 1997ರಲ್ಲಿ 'ಫುಲ್ ಮಾಂಟಿ' ಚಿತ್ರಕ್ಕಾಗಿ ಮೂಲ ಚಿತ್ರಕಥೆ ವಿಭಾಗಕ್ಕೆ ಅವರ ಹೆಸರು ಆಸ್ಕರ್‌ಗೆ ನಾಮಕರಣಗೊಂಡಿತ್ತಾದರೂ, ಅವರಿಗೆ ಗೆದ್ದುಕೊಳ್ಳಲಾಗಿರಲಿಲ್ಲ.

ವೆಬ್ದುನಿಯಾವನ್ನು ಓದಿ