ಭಾರತದಲ್ಲಿ ಇತಿಹಾಸ ಬರೆದ ರೆಹೆಮಾನ್

ಸೋಮವಾರ, 23 ಫೆಬ್ರವರಿ 2009 (12:55 IST)
`ಜೈ ಹೋ...' ಅನ್ನುತ್ತಾ ಪ್ರತಿ ನೋಡುಗನನ್ನೂ ಮನಸ್ಸನ್ನೂ ಹೊಕ್ಕ, ಕುಳಿತಲ್ಲೇ ಕುಣಿಯುವಂತೆ ಮಾಡಿದ ಎ.ಆರ್.ರೆಹೆಮಾನ್ ಈಗ ಎರಡು ಆಸ್ಕರ್‌ಗಳನ್ನು ಬಾಚಿದ ಮೊದಲ ಭಾರತೀಯ ಹೆಗ್ಗಳಿಕೆಯೊಂದಿಗೆ ಇತಿಹಾಸ ಬರೆದಿದ್ದಾರೆ.

ಎಂಟು ಆಸ್ಕರ್‌ಗಳನ್ನು ಬಾಚಿಕೊಂಡ `ಸ್ಲಂಡಾಗ್' ಪ್ರಶಸ್ತಿಗಳ `ಮಿಲೇನಿಯರ್' ಆಯಿತು. ಆಸ್ಕರ‌್ ಪ್ರಶಸ್ತಿಯನ್ನು ಪಡೆಯಲು ವೇದಿಕೆ ಹತ್ತಿದಾಗ ರೆಹೆಮಾನ್ ಪುಳಕಿತರಾಗಿ, "ಇಲ್ಲಿಗೆ ಬರುವ ಮೊದಲು ನಾನು ಭಾವೋದ್ವೇಗಕ್ಕೊಳಗಾಗಿದ್ದೆ. ಜತೆಗೆ ತೀರಾ ದಿಗಿಲುಗೊಂಡಿದ್ದೆ. ಮದುವೆಯಾಗುವ ಸಂದರ್ಭ ಇರುವ ಸಣ್ಣ ಆತಂಕ ನನ್ನಲ್ಲಿತ್ತು. ಆದರೆ, `ಮೇರೇ ಪಾಸ್ ಮಾ ಹೇ...' ಎಂದು ಹಿಂದಿಯಲ್ಲಿ ಒಂದು ಮಾತಿದೆ. ಅಂದರೆ, ನಾನು ಏನೂ ಪಡೆಯದಿದ್ದರೂ, ನನ್ನ ಬಳಿ ನನ್ನ ಅಮ್ಮ ಇದ್ದಾಳೆ ಎಂದು ಈ ಮಾತಿನ ಅರ್ಥ. ನನ್ನನ್ನು ಪ್ರೋತ್ಸಾಹಿಸಲು ನನ್ನ ದಾರಿಯುದ್ದಕ್ಕೂ ನಿಂತ ಅಮ್ಮನಿಗೆ ನಾನು ಈ ಸಂದರ್ಭ ಧನ್ಯವಾದ ಹೇಳುತ್ತೇನೆ" ಎಂದು ಭಾವುಕರಾದರು 43ರ ಹರೆಯದ ರೆಹೆಮಾನ್.

ಆಸ್ಕರ್ ಪಡೆದ ರೆಹೆಮಾನ್ ವೇದಿಕೆಯನ್ನು ಎರಡನೇ ಬಾರಿಯೂ ಹತ್ತುವ ಅವಕಾಶ ಒಲಿಯಿತು. ಸುಖ್‌ವಿಂದರ್ ಸಿಂಗ್ ಹಾಗೂ ಮಹಾಲಕ್ಷ್ಮಿ ಅಯ್ಯರ್ ಹಾಡಿದ ಜೈ ಹೋ ಹಾಡಿಗೆ ಇನ್ನೊಂದು ವಿಭಾಗ `ಬೆಸ್ಟ್ ಒರಿಜಿನಲ್ ಸಾಂಗ್' ಎಂಬ ಪ್ರಶಸ್ತಿ. ಇದನ್ನು ರೆಹೆಮಾನ್ ಈ ಹಾಡಿನ ಗೀತರಚನೆಕಾರ ಗುಲ್ಜಾರ್ ಜತೆ ಹಂಚಿಕೊಂಡಿದ್ದಾರೆ.

"ಸ್ಲಂ ಡಾಗ್‌ ಕಥೆಯ ತಿರುಳು ಇರುವುದು ಆಶಾವಾದ ಹಾಗೂ ತವರಿನಲ್ಲಿ. ಬದುಕಿನ ಆಶಾವಾದದ ಶಕ್ತಿಯೇ ಇಲ್ಲಿ ಮೇಳೈಸುತ್ತದೆ. ದ್ವೇಷ ಹಾಗೂ ಪ್ರೀತಿ ಈ ಎರಡರ ಆಯ್ಕೆ ನನ್ನ ಜೀವನದಲ್ಲಿತ್ತು. ನಾನು ಪ್ರೀತಿಯನ್ನು ಆಯ್ಕೆ ಮಾಡಿಕೊಂಡೆ. ಆ ಪ್ರೀತಿಯೇ ನನ್ನನ್ನು ಇಲ್ಲಿಯವರೆಗೆ ತಂದಿದೆ" ಎನ್ನುತ್ತಾರೆ ರೆಹೆಮಾನ್.
PRPR
ಭಾರತದ ಇನ್ನೊಬ್ಬರಾದ ಕೇರಳ ಮೂಲದ ರೆಸಲ್ ಪೂಕುಟ್ಟಿ ಸೌಂಡ್ ಮಿಕ್ಸಿಂಗ್ ವಿಭಾಗದಲ್ಲಿ ಸ್ಲಂಡಾಗ್‌ನ ಮೂರನೇ ಆಸ್ಕರ್ ಬಾಚಿಕೊಂಡರು. ಭಾರತದ ಬಡ ಹುಡುಗಿಯ ಕಥಾನಕವುಳ್ಳ ಸಾಕ್ಷ್ಯಚಿತ್ರ `ಸ್ಮೈಲ್ ಪಿಂಕಿ' ಬೆಸ್ಟ್ ಶಾರ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿತು. ಇದರ ನಿರ್ದೇಶಕರು ಅಮೆರಿಕದ ಮೇಗನ್ ಮಿಲನ್.

ಬ್ರಿಟೀಷ್ ಚಿತ್ರಕಥೆಗಾರ ಸೈಮನ್ ಬ್ಯೂಫೋಯ್ ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಹಾಗೂ ಆಂತೋಣಿ ಡೋಡ್ ಮಾಂಟ್ಲೆ ಛಾಯಾಗ್ರಹಣಕ್ಕಾಗಿ ಬೆಸ್ಟ್ ಸಿನೆಮಾಟೋಗ್ರಫಿ ವಿಭಾಗಗಳಲ್ಲಿ ಸ್ಲಂಡಾಗ್‌ಗೆ ಆಸ್ಕರ್ ಮಳೆ ಸುರಿಸಲು ನೆರವಾದರು. ಹೀಗೆ, ಭಾರತದ ವಿಕಾಸ್ ಸ್ವರೂಪ್ ಅವರ ಕ್ಯು ಅಂಡ್ ಎ ಕಾದಂಬರಿ ಆಧಾರಿತ ಸಿನಿಮಾ ಸ್ಲಂ ಡಾಗ್ ಆ ಮೂಲಕ ವಿಶ್ವದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂಬ ಹೆಮ್ಮೆಗೆ ಪಾತ್ರವಾಗಿ ಇತಿಹಾಸ ನಿರ್ಮಿಸಿತು.

ಭಾರತದಲ್ಲಿ ಜೀವನ ಪಾಠ ಕಲಿತೆ: ಬ್ಯೂಫೋಯ

ಆಸ್ಕರ್ ಪಡೆಯುವಾಗ ಬ್ರಿಟೀಷ್ ಚಿತ್ರಕಥೆಗಾರ ಭಾರತವನ್ನು ಸ್ಮರಿಸಿದರು. "ಭಾರತದಲ್ಲಿ ನಾನು ಜೀವನದ ಪಾಠ ಕಲಿತೆ" ಎಂದ ಅವರು, "ಇದೊಂದು ಮಹತ್ತರ ಗೌರವ. ವಿಕಾಸ್ ಸ್ವರೂಪ್ ಇಲ್ಲದಿದ್ದರೆ ಸ್ಲಂಡಾಗ್ ಇರುತ್ತಿರಲಿಲ್ಲ. ವಿಕಾಸ್‌ಗೆ ನೂರು ವಂದನೆಗಳು. ಸ್ಲಂಡಾಗ್‌ನ ದೇವ್, ಲತಿಕಾ ಹಾಗೂ ಎಲ್ಲ ಸ್ಲಂ ಡಾಗ್ ಬಳಗಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ" ಎಂದರು ಬ್ಯೂಫೋಯ್.

ಈಗಾಗಲೇ ಸ್ಲಂಡಾಗ್‌ನ ಚಿತ್ರಕಥೆಗಾಗಿ ಗೋಲ್ಡನ್ ಗ್ಲೋಬ್ ಹಾಗೂ ಬಾಫ್ಟಾ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದ ಬ್ಯೂಪೋಯ್ ಮತ್ತೊಮ್ಮೆ ಆಸ್ಕರನ್ನೂ ಪಡೆದರು. 1997ರಲ್ಲಿ 'ಫುಲ್ ಮಾಂಟಿ' ಎಂಬ ಸಿನಿಮಾದ ಒರಿಜಿನಲ್ ಸ್ಕ್ರೀನ್‌ಪ್ಲೇ ವಿಭಾಗಕ್ಕೆ 1997ರಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದ ಬ್ಯೂಫೋಯ್ ಇದೇ ಮೊದಲ ಬಾರಿಗೆ ಆಸ್ಕರ್ ಗೆದ್ದಿದ್ದಾರೆ.