ರೆಹಮಾನ್, ಅನಿಲ್ ಕಪೂರ್ ವಿರುದ್ಧ ಮಾನನಷ್ಟ ಮೊಕದ್ದಮೆ

ಸೋಮವಾರ, 23 ಫೆಬ್ರವರಿ 2009 (12:52 IST)
ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡು ಇದೀಗ ಆಸ್ಕರ್ ನಿರೀಕ್ಷೆಯಲ್ಲಿರುವ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದಲ್ಲಿ ಭಾರತೀಯರನ್ನು ನಾಯಿಗಳು ಮತ್ತು ಕೊಳೆಗೇರಿ ವಾಸಿಗಳನ್ನು ಹೊಲಸು ನಾಯಿಗಳೆಂದು ಕರೆಯಲಾಗಿದೆ ಎಂದು ಆರೋಪಿಸಿ ಕೊಳೆಗೇರಿ ವಾಸಿಗಳ ಸಂಘಟನೆಯೊಂದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ನಟ ಅನಿಲ್ ಕಪೂರ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮುನ್ನ ಮಾತನಾಡಿದ ಕೊಳೆಗೇರಿ ವಾಸಿಗಳ ಜಂಟಿ ಕಾರ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ತಪೇಶ್ವರ್ ವಿಶ್ವಕರ್ಮ, "ಕೊಳೆಗೇರಿ ವಾಸಿಗಳು ಕೀಳಭಿರುಚಿ ಹೊಂದಿದ್ದಾರೆ ಎಂಬಂತೆ ಚಿತ್ರದಲ್ಲಿ ಬಿಂಬಿಸಲಾಗಿದೆ. 'ಸ್ಲಮ್‌ಡಾಗ್ ಮಿಲಿಯನೇರ್' ಎಂಬ ಹೆಸರೇ ಅವಹೇಳಕಾರಿ ಮತ್ತು ಆಕ್ಷೇಪಣೀಯ. ಇದು ಭಾರತೀಯರನ್ನು ನಾಯಿಗಳು ಮತ್ತು ಕೊಳೆಗೇರಿ ವಾಸಿಗಳನ್ನು ಹೊಲಸು ನಾಯಿಗಳು ಎಂದು ಕರೆಯುವಂತಿದೆ" ಎಂದು ಆರೋಪಿಸಿದ್ದಾರೆ.

'ಸ್ಲಮ್‌ಡಾಗ್ ಮಿಲಿಯನೇರ್' ಹೆಸರಿನ ಅರ್ಥ ಹಿಂದಿಯಲ್ಲಿ ಕೊಳೆಗೇರಿ ವಾಸಿಗಳ ಮಿಲಿಯನೇರ್ ನಾಯಿ ಎಂದು ಆರೋಪಿಸಿರುವ ವಿಶ್ವಕರ್ಮ, ಈ ಹೆಸರು ಮಾನವ ಹಕ್ಕುಗಳ ಮತ್ತು ಘನತೆಯ ಉಲ್ಲಂಘನೆ ಎಂಬುದು ಅವರ ಆರೋಪ.

ಚಿತ್ರದಲ್ಲಿ ಗೇಮ್ ಶೋ ನಡೆಸುವ ಪಾತ್ರದಲ್ಲಿ ನಟಿಸಿರುವ ಅನಿಲ್ ಕಪೂರ್ ಮತ್ತು ಸಂಗೀತ ನೀಡಿರುವ ಎ.ಆರ್. ರೆಹಮಾನ್ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗೆ ಮನವಿ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ಹಾಜರುಪಡಿಸುವಂತೆ ತಪೇಶ್ವರ್ ವಿಶ್ವಕರ್ಮರಿಗೆ ಮುಖ್ಯ ನ್ಯಾಯಮ‌ೂರ್ತಿ ರಾಘವೇಂದ್ರ ಕುಮಾರ್ ಸಿಂಗ್‌ ಆದೇಶಿಸಿದ್ದು, ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದ್ದಾರೆ.

ಮುಂಬೈ ಕೊಳಚೆ ಪ್ರದೇಶದ ಅನಾಥ ಹುಡುಗನೊಬ್ಬ ಶ್ರೀಮಂತನಾಗುವ ಕಥೆ ಹೊಂದಿರುವ 'ಸ್ಲಮ್‌ಡಾಗ್ ಮಿಲಿಯನೇರ್' ಈಗಾಗಲೇ ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಲ್ಲದೆ 11ನೇ ಬ್ರಿಟೀಷ್ ಅಕಾಡೆಮಿ ಆಫ್ ಫಿಲ್ಮ್ ಎಂಟ್ ಟೆಲಿವಿಷನ್ ಆರ್ಟ್ಸ್ ಪ್ರಶಸ್ತಿಗೂ ನಾಮಕರಣಗೊಂಡಿದೆ.

ವೆಬ್ದುನಿಯಾವನ್ನು ಓದಿ