ಸ್ವಾದಿಷ್ಠವಾದ ಬಾದಾಮ್ ಪೂರಿ

ಬುಧವಾರ, 13 ಫೆಬ್ರವರಿ 2019 (13:34 IST)
ತಯಾರಿಸಲು ಬೇಕಾಗುವ ಸಾಮಗ್ರಿಗಳು:
* 1 ಕಪ್ ಮೈದಾ ಹಿಟ್ಟು
* ಸಕ್ಕರೆ 1 ಕಪ್
* ನೀರು 1 ಕಪ್
* ತುಪ್ಪ/ಬೆಣ್ಣೆ 2 ಚಮಚ
* ಅಕ್ಕಿ ಹಿಟ್ಟು 1 ಚಮಚ
* ಒಣಕೊಬ್ಬರಿ ತುರಿ ಸ್ವಲ್ಪ
* ಏಲಕ್ಕಿ ಪುಡಿ, ಲವಂಗ ಮತ್ತು ಕೇಸರಿ ಸ್ವಲ್ಪ
* ನಿಂಬೆ ರಸ 1 ಟೀ ಚಮಚ
* ಚಿಟಿಕೆ ಉಪ್ಪು ಮತ್ತು ಸೋಡಾ
* ಎಣ್ಣೆ (ಕರಿಯಲು)
 
ಮೊದಲು ಸಕ್ಕರೆ ಪಾಕವನ್ನು ತಯಾರಿಸಿಕೊಳ್ಳೋಣ. 
 
 ಒಂದು ಕಪ್ ಸಕ್ಕರೆಗೆ ಒಂದು ಕಪ್ ನೀರನ್ನು ಹಾಕಿ ಒಂದೆಳೆ ಪಾಕವನ್ನು ತಯಾರಿಸಿಕೊಳ್ಳಬೇಕು. ಈ ಪಾಕಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಬೇಕು. ನಂತರ ಇದಕ್ಕೆ ಏಲಕ್ಕಿ ಪುಡಿ, ಕೇಸರಿ ದಳವನ್ನು ಹಾಕಿ ಆರಲು ಬಿಡಬೇಕು. 
 
ಬಾದಾಮ್ ಪೂರಿಯನ್ನು ತಯಾರಿಸುವ ವಿಧಾನ:
 
ಮೊದಲು ಒಂದು ಬೌಲ್‌ನಲ್ಲಿ ಮೈದಾ, ಅಡುಗೆ ಸೋಡಾ, ಉಪ್ಪು ಮತ್ತು ಒಂದು ಚಮಚ ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿ ಮೃದುವಾಗಿ ಹಿಟ್ಟನ್ನು ನಾದಿಕೊಳ್ಳಬೇಕು. ನಂತರ ಈ ಹಿಟ್ಟನ್ನು 10 ನಿಮಿಷಗಳ ಕಾಲ ಮುಚ್ಚಿಡಬೇಕು. 
  
ಸಾಟಿಯನ್ನು ತಯಾರಿಸಿಕೊಳ್ಳಲು ಉಳಿದ ತುಪ್ಪಕ್ಕೆ ಅಕ್ಕಿ ಹಿಟ್ಟನ್ನು ಹಾಕಿ 5 ನಿಮಿಷ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಮಿಶ್ರಣ ನೊರೆನೊರೆಯಾಗಿ ಬಂದಾಗ ಮಾತ್ರ ಸಾಟಿ ತಯಾರಾಗಿದೆ ಎಂದರ್ಥ.
  
ನಂತರ ತಯಾರಿಸಿಕೊಂಡ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡಗಳನ್ನು ಮಾಡಿಕೊಳ್ಳಬೇಕು. ಈ ಉಂಡೆಗಳನ್ನು ಲಟ್ಟಿಸಿಕೊಳ್ಳಬೇಕು. ಚಟ್ಟಿಸಿದ ನಂತರ ಅದರ ಮೇಲೆ ಸಾಟಿಯನ್ನು ಹಚ್ಚುತ್ತಾ ಬರಬೇಕು. ಆಗ ಅದನ್ನು ಅರ್ಧಕ್ಕೆ ಮಡಿಸಿ ನಂತರ ತ್ರಿಕೋನ ಆಕಾರಕ್ಕೆ ಮಡಿಸಬೇಕು. ನಂತರ ನಿಧಾನವಾಗಿ ಲಟ್ಟಣಿಗೆಯಿಂದ ಲಟ್ಟಿಸಿ ಕೊನೆಯಲ್ಲಿ ಲವಂಗವನ್ನು ಚುಚ್ಚಬೇಕು. ಒಂದು ಫೋರ್ಕಿನಿಂದ ಪೂರಿಯ ಮೇಲೆ ಚುಕ್ಕೆ ಚುಕ್ಕೆ ಮಾಡಿದರೆ ಅದು ಉಬ್ಬುವುದಿಲ್ಲ. ನಂತರ ತಯಾರಿಸಿಕೊಂಡ ಪೂರಿಯನ್ನು ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು ಕರಿಯಬೇಕು. ಎರಡೂ ಬದಿಗಳಲ್ಲಿ ಕೆಂಬಣ್ಣ ಬಂದಾಗ ತೆಗೆದು ಸಕ್ಕರೆ ಪಾಕಕ್ಕೆ ಹಾಕಬೇಕು. ಸಕ್ಕರೆ ಪಾಕದಲ್ಲಿ 10 ನಿಮಿಷಗಳ ಕಾಲ ಬಿಟ್ಟು ಅದರ ಮೇಲೆ ಕೊಬ್ಬರಿ ತುರಿಯನ್ನು ಉದುರಿಸಿದರೆ ರುಚಿರುಚಿಯಾದ ಬಿಸಿಯಾದ ಬಾದಾಮ್ ಪೂರಿ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ