ಬಿರು ಬೇಸಿಗೆಗೆ ಸವಿಯಿರಿ ತಂಪಾದ ಮೊಸರಿನ ತಿನಿಸುಗಳು

ಮಂಗಳವಾರ, 11 ಸೆಪ್ಟಂಬರ್ 2018 (15:26 IST)
ಬೇಸಿಗೆಯ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಕು ಎಂದು ಅನ್ನಿಸುವುದಿಲ್ಲ. ಬಿರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳುವುದು ಒಂದು ದುಸ್ಸಾಹಸವೇ ಸರಿ. ಬೆವರಿನಿಂದ ದೇಹ ನಿರ್ಜಲೀಕರಣವಾಗುವ ಸಂಭವವೂ ಹೆಚ್ಚು. ಆದರೆ ಮೊಸರನ್ನು ಹಾಗೆಯೇ ತಿನ್ನಲು ಕೆಲವರು ಇಷ್ಟಪಡುವುದಿಲ್ಲ.  ಅಂತಹ ಸಂದರ್ಭದಲ್ಲಿ ಮೊಸರಿನಿಂದ ನಾನಾ ತರಹದ ಆಹಾರ ಪದಾರ್ಥಗಳನ್ನು ಮಾಡಿಕೊಂಡು ಸವಿಯಬಹುದು. ಏನೆಲ್ಲಾ ಆಹಾರ ಪದಾರ್ಥಗಳನ್ನು ಮಾಡಿ ಸವಿಯಬಹುದು ಎಂದು ನೋಡಿ...
1. ಹುಳಿ ಮಜ್ಜಿಗೆ ದೋಸೆ: 
 
ಬೇಕಾಗುವ ಸಾಮಗ್ರಿಗಳು : ಅಕ್ಕಿ- 2 ಬಟ್ಟಲು, ಮಂಡಕ್ಕಿ- 4 ಬಟ್ಟಲು, ಮೊಸರು- 1 ಬಟ್ಟಲು, ಮೆಂತ್ಯೆ ಕಾಳು- 1 ಟೇಬಲ್ ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಸೋಡಾ- 1 ಚಿಟಿಕೆ
 
ಮಾಡುವ ವಿಧಾನ: ಮೊದಲು ಅಕ್ಕಿ, ಮಂಡಕ್ಕಿ, ನೆನೆಸಿದ ಮೆಂತ್ಯೆ ಕಾಳು ಮತ್ತು ಮೊಸರನ್ನು ಬೆರೆಸಿ ರುಬ್ಬಬೇಕು. ಇದಕ್ಕೆ ಉಪ್ಪು ಹಾಕಿ ಇಡಬೇಕು. ಮರುದಿನ ಈ ಹಿಟ್ಟಿಗೆ ಸ್ವಲ್ಪ ಸೋಡಾ ಹಾಕಿ ದೋಸೆ ಮಾಡಿ ಒಂದೇ ಕಡೆ ಸುಡಬೇಕು. ಆದರೆ ಈ ದೋಸೆಯನ್ನು ಸ್ವಲ್ಪ ದಪ್ಪ ಮಾಡಿ ಎರೆದರೆ ದೊಡ್ಡ ತೂತು ಬಿಟ್ಟುಕೊಳ್ಳುತ್ತದೆ.
 
2. ಅಕ್ಕಿ ನುಚ್ಚು ಮತ್ತು ಮೊಸರಿನ ಉಪ್ಪಿಟ್ಟು:
 
ಬೇಕಾಗುವ ಸಾಮಗ್ರಿಗಳು: ಹುರಿದ ಅಕ್ಕಿ ನುಚ್ಚು ಅಥವಾ ಅಕ್ಕಿ ತರಿ- 1 ಕಪ್, ಹುಳಿ ಮೊಸರು- ಮೂರೂವರೆ ಕಪ್, ಹೆಚ್ಚಿದ ಈರುಳ್ಳಿ,  ಕ್ಯಾರೆಟ್, ಬೀನ್ಸ್, ಬಟಾಣಿ ಎಲ್ಲಾ ಸೇರಿ 1 ಕಪ್, ಹಸಿಮೆಣಸಿನಕಾಯಿ ಪೇಸ್ಟ್ - 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಎಣ್ಣೆ- 2 ಚಮಚ, ಇಂಗು- 1 ಚಿಟಿಕೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೆಬೇಳೆ, ಹಸಿ ಶುಂಠಿ ತುಂಡುಗಳು, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸ್ವಲ್ಪ, 1 ಹಿಡಿ- ಕಾಯಿತುರಿ.
 
ಮಾಡುವ ವಿಧಾನ: ಸಣ್ಣ ಕುಕ್ಕರಿನಲ್ಲಿ ಎಣ್ಣೆ, ಇಂಗು, ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೆಬೇಳೆ, ಶುಂಠಿ ತುಂಡುಗಳು, ಮೆಣಸಿನಕಾಯಿ ಹಾಕಿ ಬಾಡಿಸಿ. ನಂತರ ಈರುಳ್ಳಿ, ಕ್ಯಾರೆಟ್, ಬೀನ್ಸ್, ಬಟಾಣಿ ಎಲ್ಲಾ ಹಾಕಿ ಬಾಡಿಸಬೇಕು. ನಂತರ ಅದಕ್ಕೆ ಮೂರುವರೆ ಕಪ್ ಮಜ್ಜಿಗೆ ಹಾಕಿ ಕುದಿ ಬಂದ ಮೇಲೆ ಉಪ್ಪು, ಅಕ್ಕಿ ನುಚ್ಚು ಹಾಕಿ ಕೆದಕಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಒಂದು ವಿಷಲ್ ಬರುವವರೆಗೆ ಬೇಯಿಸಬೇಕು. ಆವಿ ಹೋದ ಮೇಲೆ ಇದಕ್ಕೆ ಕಾಯಿತುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಬೇಕು. ಈಗ ಉಪ್ಪಿಟ್ಟು ಸವಿಯಲು ಸಿದ್ಧ.
 
3. ಹುಳಿ ಮಜ್ಜಿಗೆ ಪೂರಿ: 
 
ಬೇಕಾಗುವ ಸಾಮಗ್ರಿಗಳು:
 
ಹುಳಿ ಮಜ್ಜಿಗೆ- 1 ಕಪ್, ಅಕ್ಕಿ ಹಿಟ್ಟು- 1 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನಕಾಯಿ ಪೇಸ್ಟ್- 1 ಚಮಚ, ಜೀರಿಗೆ- 1 ಚಮಚ, ಸ್ವಲ್ಪ ಶುಂಠಿ ಪೇಸ್ಟ್, ಹೆಚ್ಚಿದ ಕೊತ್ತಂಬರಿ ಮತ್ತು ಕರಿಬೇವಿನ ಮಿಶ್ರಣ ಸ್ವಲ್ಪ, ಹೆಚ್ಚಿದ ಸಬ್ಬಸಿಗೆ ಸೊಪ್ಪು, ಸ್ವಲ್ಪ ಇಂಗು-1 ಚಿಟಿಕೆ, ನೆನೆಸಿದ ಕಡ್ಲೆಬೇಳೆ- 1 ಚಮಚ, ಕರಿಯಲು ಎಣ್ಣೆ, ಸಣ್ಣಗೆ ಹೆಚ್ಚಿದ ತೆಂಗಿನ ತುಂಡುಗಳು ಸ್ವಲ್ಪ.
 
ಮಾಡುವ ವಿಧಾನ:
 
ಹುಳಿ ಮಜ್ಜಿಗೆಯ ಪಾತ್ರೆಯನ್ನು ಒಲೆಯ ಮೇಲಿಟ್ಟು ಕುದಿ ಬಂದ ತಕ್ಷಣ ಉಪ್ಪು, ಹಸಿ ಮೆಣಸಿನಕಾಯಿ ಪೇಸ್ಟ್, ಜೀರಿಗೆ, ಶುಂಠಿ ಪೇಸ್ಟ್, ಕೊತ್ತಂಬರಿ ಮತ್ತು ಕರಿಬೇವಿನ ಮಿಶ್ರಣ, ಸಬ್ಬಸಿಗೆ ಸೊಪ್ಪು, ಇಂಗು, ಕಡ್ಲೆಬೇಳೆ, ಹೆಚ್ಚಿದ ತೆಂಗಿನ ತುಂಡುಗಳು ಎಲ್ಲವನ್ನೂ ಹಾಕಿ ಗ್ಯಾಸ್ ಆರಿಸಿ ಅಕ್ಕಿ ಹಿಟ್ಟನ್ನು ಹಾಕಿ ಕೆದಕಿ ನಾದಬೇಕು. ಆ ಹಿಟ್ಟಿನಿಂದ ಚಿಕ್ಕ ಚಿಕ್ಕ ಪುರಿಗಳನ್ನು ತಟ್ಟಿ ಕಾದ ಎಣ್ಣೆಯಲ್ಲಿ ಕರಿದರೆ ಹುಳಿ ಮಜ್ಜಿಗೆ ಪೂರಿ ಸವಿಯಲು ಸಿದ್ಧ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ