ಬಿರು ಬೇಸಿಗೆಯ ದಾಹವನ್ನು ತಣಿಸುವ ರುಚಿಯಾದ ಪಾನಕಗಳು

ಶುಕ್ರವಾರ, 31 ಆಗಸ್ಟ್ 2018 (19:07 IST)
ಸಾಮಾನ್ಯವಾಗಿ ಬೇಸಿಗೆಯಲ್ಲಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಅದ್ದರಿಂದ ದೇಹಕ್ಕೆ ನೀರಿನಂಶದ ಪೂರೈಕೆಯು ಅಧಿಕವಾಗಿ ಬೇಕಾಗುತ್ತದೆ. ಈ ಸಮಯದಲ್ಲಿ ರುಚಿ ರುಚಿಯಾದ ತಂಪಾದ, ಹಿತವಾದ ಪಾನಕಗಳನ್ನು ಮಾಡಿ ಕುಡಿದರೆ ದೇಹದಲ್ಲಿಯೂ ನೀರಿನಂಶದ ಕೊರತೆಯಾಗುವುದಿಲ್ಲ  ಮತ್ತು ನಿರ್ಜಲೀಕರಣದ ಸಮಸ್ಯೆಯೂ ಎದುರಾಗುವುದಿಲ್ಲ. ಹಾಗಾದರೆ ಕೆಲವು ಪಾನಕಗಳನ್ನು ಮಾಡುವುದು ಹೇಗೆ ಎಂದು ಹೇಳುತ್ತೀವಿ. ಒಮ್ಮೆ ಟ್ರೈ ಮಾಡಿ ನೋಡಿ....
* ಮುರುಗಲ ಪಾನಕ : ಕೋಕಂ ಎಂದು ಕರೆಯಲಾಗುವ ಮುರುಗಲ ಹಣ್ಣು ಕರಾವಳಿ ಮತ್ತು ಮಲೆನಾಡ ಪ್ರದೇಶದಲ್ಲಿ ಬೆಳೆಯುತ್ತದೆ. ಇದರ ಸಿಪ್ಪೆಯನ್ನು ಒಣಗಿಸಿ ಇಟ್ಟರೆ ವರ್ಷವಿಡೀ ಬಳಸಬಹುದು. ಮುರುಗಲ ಹಣ್ಣಿನ ಒಳಗಿನ ಬೀಜಗಳನ್ನು ತೆಗೆದುಹಾಕಿ ಸಿಪ್ಪೆಯನ್ನು ನೀರಿನಲ್ಲಿ ತೊಳೆಯಬೇಕು. ಈ ಸಿಪ್ಪೆಯನ್ನು ಮಿಕ್ಸಿಗೆ ಹಾಕಿ ಶೋಧಿಸಿದ ರಸಕ್ಕೆ ಎರಡು ಲೋಟ ನೀರು ಮತ್ತು ಬೆಲ್ಲ ಸೇರಿಸಿದರೆ ಪಾನಕ ಸಿದ್ಧವಾಗುತ್ತದೆ. ಈ ಪಾನಕವು ಪಿತ್ತನಾಶಕ ಮತ್ತು ರಕ್ತ ಶುದ್ಧೀಕರವಾಗಿ ಕೆಲಸ ಮಾಡುತ್ತದೆ.
 
* ಬೇಲದ ಹಣ್ಣಿನ ಪಾನಕ : ಬೇಲದ ಹಣ್ಣಿನ ತಿರುಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ನಂತರ ಶೋಧಿಸಿದ ರಸಕ್ಕೆ ರುಚಿಗೆ ತಕ್ಕಷ್ಟು ನೀರು ಮತ್ತು ಬೆಲ್ಲ ಸೇರಿಸಿದರೆ ಪಾನಕ ಸಿದ್ಧವಾಗುತ್ತದೆ. ಈ ಪಾನಕಕ್ಕೆ ಏಲಕ್ಕಿಯನ್ನು ಹಾಕಿದರೆ ಇನ್ನೂ ಘಮ ಘಮಿಸುತ್ತದೆ.
 
* ರಾಗಿ ಪಾನಕ : ಅರ್ಧ ಬಟ್ಟಲು ರಾಗಿ ಹಿಟ್ಟಿಗೆ ಎರಡು ಲೋಟ ನೀರು, ಅರ್ಧ ಬಟ್ಟಲು ಬೆಲ್ಲ ಮತ್ತು ಅರ್ಧ ಬಟ್ಟಲು ಹಾಲು ಹಾಕಿ ಬೆರೆಸಿದರೆ ರಾಗಿ ಪಾನೀಯ ಸಿದ್ಧವಾಗುತ್ತದೆ. ಈ ಪಾನಕದ ರುಚಿ ಹೆಚ್ಚಿಸಲು ಏಲಕ್ಕಿ ಪುಡಿಯನ್ನು ಬೆರೆಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.
 
* ಲಾವಂಚದ ಪಾನಕ : ಎಂಟರಿಂದ ಹತ್ತು ಲಾವಂಚದ ಬೇರುಗಳನ್ನು ಅರ್ಧ ಲೀಟರ್ ನೀರಿನಲ್ಲಿ ಎರಡು ಗಂಟೆ ನೆನೆಸಬೇಕು. ನಂತರ ಇದನ್ನು ಶೋಧಿಸಿ ಅರ್ಧ ಕಪ್ ಬೆಲ್ಲ, ನಿಂಬೆರಸ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಬೇಕು. ಈ ಪಾನಕವು ದೇಹವನ್ನು ತಂಪಾಗಿಡುವುದಲ್ಲದೇ ರಕ್ತಶುದ್ಧಿಯನ್ನು ಮಾಡುತ್ತದೆ.
 
* ಹೆಸರುಬೇಳೆ ಪಾನಕ : ಒಂದು ಬಟ್ಟಲು ಬೆಸರುಬೇಳೆಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಿ, ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಅದಕ್ಕೆ ನಾಲ್ಕು ಬಟ್ಟಲು ನೀರು ಒಂದು ತುಂಡು ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ಎರಡು ಬಾರಿ ತಿರುವಿಕೊಳ್ಳಬೇಕು. 
 
* ನೇರಳೆ ಹಣ್ಣಿನ ಪಾನಕ : ನೇರಳೆ ಹಣ್ಣಿನ ಬೀಜ ತೆಗೆದು ಸ್ವಲ್ಪ ನೀರು ಹಾಕಿ ಕಿವುಚಿ ಸಿಪ್ಪೆ ತೆಗೆದುಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ ನೀರು ಮತ್ತು ಬೆಲ್ಲ ಸೇರಿಸಿ ಕುಡಿಯಬೇಕು.
 
* ಎಳ್ಳಿನ ಪಾನಕ : ಅರ್ಧ ಬಟ್ಟಲು ಎಳ್ಳನ್ನು ಸ್ವಲ್ಪ ಹೊತ್ತು ನೆನೆಸಿಟ್ಟು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ಇದಕ್ಕೆ ನಾಲ್ಕು ಬಟ್ಟಲು ನೀರು, ಬೆಲ್ಲ ಮತ್ತು ಸ್ವಲ್ಪ ಹಾಲನ್ನು ಬೆರೆಸಬೇಕು.
 
* ಕಾಮಕಸ್ತೂರಿ ಪಾನಕ : ಅರ್ಧ ಬಟ್ಟಲು ಕಾಮಕಸ್ತೂರಿ ಬೀಜವನ್ನು ರಾತ್ರಿ ಹೊತ್ತು ನೀರಿನಲ್ಲಿ ನೆನೆಸಿಟ್ಟರೆ ಬೆಳಿಗ್ಗೆ ಅದು ಅರಳಿಕೊಳ್ಳುತ್ತದೆ. ಇದಕ್ಕೆ ಬೆಲ್ಲ, ನೀರು, ಹಾಲು ಬೆರೆಸಿ ಕುಡಿಯಬೇಕು. ಈ ಪಾನಕವನ್ನು ಕುಡಿಯುವುದರಿಂದ ದೇಹದ ಉಷ್ಣ ಕಡಿಮೆ ಆಗುವುದಲ್ಲದೇ ಬಾಯಿಹುಣ್ಣು ವಾಸಿಯಾಗುತ್ತದೆ.
 
* ಕಾಕ್‌ಟೇಲ್ ಮಜ್ಜಿಗೆ : ಒಂದು ಲೋಟ ಮಜ್ಜಿಗೆಗೆ 1/2 ಲೋಟ ಮಾವಿನ ಹಣ್ಣಿನ ರಸ ಮತ್ತು ಪೈನಾಪಲ್ ಹಣ್ಣಿನ ರಸ ಮತ್ತು ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯಬೇಕು.
 
* ಕಬ್ಬಿನ ಹಾಲು : ನಿತ್ಯವೂ ಒಂದು ಗ್ಲಾಸ್ ಕಬ್ಬಿನ ಹಾಲಿನ ಪಾನೀಯ ಕುಡಿದರೆ ತಲೆನೋವಿನಿಂದ ತಪ್ಪಿಸಿಕೊಳ್ಳಬಹುದು. ಕಬ್ಬಿನ  ಹಾಲಿಗೆ ನಿಂಬೆಯನ್ನೂ ಸಹ ಮಿಶ್ರ ಮಾಡಬಹುದು. ಕಬ್ಬಿನ ಹಾಲು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಮತ್ತು ಮಧುಮೇಹಿಗಳಿಗೆ ಇದು ಉತ್ತಮ. ಆದರೆ ತಯಾರಿಸಿದ ಕೆಲವೇ ಕ್ಷಣಗಳಲ್ಲಿ ಸೇವಿಸಿದರೆ ಉತ್ತಮ. 
 
* ಕಲ್ಲಂಗಡಿ ಹಣ್ಣಿನ ಪಾನಕ : ಕಲ್ಲಂಗಡಿ ಪಣ್ಣಿನ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಟ್ಟು ಸ್ವಲ್ಪ ಡ್ರೈ ಫ್ರೂಟ್ಸ್‌ನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ನಂತರ ಅದಕ್ಕೆ 1 ಲೋಟ ತಣ್ಣನೆಯ ಹಾಲು ಮತ್ತು 2 ಚಮಚ ಜೇನುತುಪ್ಪ ಸೇರಿಸಿಕೊಂಡು ಕುಡಿದರೆ ದೇಹ ಲವಲವಿಕೆಯಿಂದ ಇರುತ್ತದೆ.
 
* ನೆಲ್ಲಿಕಾಯಿ ಪಾನಕ : ನೆಲ್ಲಿಕಾಯಿಯನ್ನು ಮೊದಲೇ ಪುಡಿ ಮಾಡಿಟ್ಟುಕೊಂಡು ಆ ಪುಡಿಯನ್ನು ಪುದೀನ ರಸದಲ್ಲಿ ಬೆರೆಸಿ ಬೆಲ್ಲ, ಜೇನುತುಪ್ಪ ಬೆರೆಸಿ ಕುಡಿಯಬೇಕು. ಈ ಪಾನಕವು ಅಸಿಡಿಟಿಯ ತೊಂದರೆಯಿಂದ ಬಳಲುತ್ತಿರುವವರಿಗೆ ಬಹಳ ಒಳ್ಳೆಯದು.
 
* ಬೂದುಗುಂಬಳದ ಪಾನಕ : ಬೂದು ಗುಂಬಳವು ಗಾತ್ರಕ್ಕೆ ತಕ್ಕಂತೆ ತನ್ನಲ್ಲಿ ಆರೋಗ್ಯಕರ ಅಂಶಗಳನ್ನು ತುಂಬಿಕೊಂಡಿದೆ. ಬೂದು ಗುಂಬಳವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಂಡು ಆ ರಸದ ಮಿಶ್ರಣಕ್ಕೆ ನಿಂಬೆರಸ ಮತ್ತು ಉಪ್ಪನ್ನು ಸೇರಿಸಿ ಕುಡಿಯಬೇಕು. ಈ ಜ್ಯೂಸ್ ಅನ್ನು ಬೆಳಿಗ್ಗೆ ಎದ್ದೊಡನೆ ಖಾಲಿ ಹೊಚ್ಚೆಯಲ್ಲಿ ಕುಡಿದರೆ ಕ್ರಮೇಣ ದೇಹದ ತೂಕ ಕಡಿಮೆಯಾಗುತ್ತದೆ.
 
* ಬೀಟ್‌ರೂಟ್- ಕ್ಯಾರೆಟ್ ಪಾನಕ : ಬೀಟ್‌ರೂಟ್ ಮತ್ತು ಕ್ಯಾರೆಟ್‌‌ಗಳನ್ನು ತುರಿದು ಮಿಕ್ಸಿಗೆ ಹಾಕಿ ರುಬ್ಹಿ ರಸ ತೆಗೆದು ಅದಕ್ಕೆ ಹಾಲು, ಬೆಲ್ಲ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯಬೇಕು.
 
ಬೇಸಿಗೆಯಲ್ಲಿ ವಾತಾವರಣದಲ್ಲಿಯೂ ಬಿಸಿಲು ಜಾಸ್ತಿ ಇರುವುದರಿಂದ ದೇಹದಲ್ಲಿಯೂ ನೀರಿನ ಅಂಶ ಕಡಿಮೆಯಾಗಿರುತ್ತದೆ. ಇಂತಹ ಸಂದರ್ಭದಲ್ಲಿಯೂ ದೇಹದ ನಿರ್ಜಲೀಕರಣಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ನಾವು ಸುಲಭವಾಗಿ ಮನೆಯಲ್ಲಿಯೇ ಈ ತರಹದ ಪಾನಕಗಳನ್ನು ತಯಾರಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ