ರುಚಿಯಾದ ಅಕ್ಕಿ ರೊಟ್ಟಿ ಮಾಡಿ ಸವಿಯಿರಿ

ಬುಧವಾರ, 19 ಸೆಪ್ಟಂಬರ್ 2018 (14:10 IST)
ಈ ಅಕ್ಕಿ ರೊಟ್ಟಿಯನ್ನು ನೀವು ಬೆಳಗಿನ ಉಪಹಾರಕ್ಕೆ ಸುಲಭವಾಗಿ ಮತ್ತು ಶೀಘ್ರವಾಗಿ ತಯಾರಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಪಾಲಕ್, ಕ್ಯಾರೆಟ್‌ನಂತಹ ತರಕಾರಿಗಳನ್ನೂ ಸಹ ಸೇರಿಸಿಕೊಳ್ಳಬಹುದಾಗಿದ್ದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದುದಾಗಿದೆ. ನೀವೂ ಕೂಡ ಅಕ್ಕಿ ರೊಟ್ಟಿಯನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳಲು ಇಷ್ಟಪಟ್ಟರೆ ಈ ಕೆಳಗೆ ನೋಡಿ.
ಬೇಕಾಗುವ ಸಾಮಗ್ರಿಗಳು:
ಅಕ್ಕಿ ಹಿಟ್ಟು- 2 ಕಪ್
ಕ್ಯಾರೆಟ್ - 2
ಈರುಳ್ಳಿ- 2
ಕೊತ್ತಂಬರಿ ಸೊಪ್ಪು - ಸ್ವಲ್ಪ
ಹಸಿಮೆಣಸು - 2
ಶುಂಠಿ - 1 ಇಂಚು
ಜೀರಿಗೆ - 1 ಚಮಚ
ಉಪ್ಪು - ರುಚಿಗೆ
ಎಣ್ಣೆ - ಸ್ವಲ್ಪ
 
ಮಾಡುವ ವಿಧಾನ:
 
ಈರುಳ್ಳಿ, ಶುಂಠಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಕ್ಯಾರೆಟ್ ಅನ್ನು ತುರಿದಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟು, ತುರಿದ ಕ್ಯಾರೆಟ್, ಹೆಚ್ಚಿಟ್ಟ ಈರುಳ್ಳಿ, ಶುಂಠಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಅಗತ್ಯವಿರುವಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟನ್ನು ಕಲಸಿಟ್ಟುಕೊಳ್ಳಿ. ಒಂದು ದಪ್ಪನೆಯ ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಅದರ ಮೇಲೆ ಎಣ್ಣೆಯನ್ನು ಸವರಿ ಹಿಟ್ಟಿನ ಉಂಡೆಯನ್ನು ಹಾಕಿ ವೃತ್ತಾಕಾರಕ್ಕೆ ತಟ್ಟಿ. ನಂತರ ಅದನ್ನು ಕಾದ ತವಾದ ಮೇಲೆ ಹಾಕಿ ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಸವರಿ ಚೆನ್ನಾಗಿ ಬೇಯಿಸಿದರೆ ರುಚಿರುಚಿಯಾದ ಅಕ್ಕಿ ರೊಟ್ಟಿ ರೆಡಿಯಾಗುತ್ತದೆ. ಇದು ಚಟ್ನಿಯ ಜೊತೆ ತಿನ್ನಲು ರುಚಿಯಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ