ಮಂಡಕ್ಕಿ ಪಕೋಡ ಹೇಗೆ ಮಾಡೋದು ಗೊತ್ತಾ?

ಸೋಮವಾರ, 17 ಸೆಪ್ಟಂಬರ್ 2018 (18:51 IST)
ಸಾಯಂಕಾಲದ ಟೀ ಅಥವಾ ಕಾಫಿಯ ಜೊತೆ ತಿನ್ನಲು ಏನಾದರೂ ಇದ್ದರೆ ಹಿತ. ಅದರಲ್ಲೂ ಹೊರಗೆ ಮಳೆ, ಒಳಗೆ ಬಿಸಿ ಬಿಸಿಯಾಗಿ ರುಚಿ ರುಚಿಯಾಗಿ ತಿಂಡಿ ಮಾಡಿಕೊಂಡು ತಿನ್ನುವ ಮಜವೇ ಬೇರೆ. ಅಂತಹ ತಿಂಡಿಗಳ ಪಟ್ಟಿಗೆ ಮಂಡಕ್ಕಿ ಪಕೋಡವೂ ಸೇರಿಕೊಳ್ಳುತ್ತದೆ. ಹಾಗಾದರೆ ಮಾಡುವುದು ಹೇಗೆ ಅಂತಾ ನೋಡೋಣ..
ಬೇಕಾಗುವ ಸಾಮಗ್ರಿಗಳು:
 
ಮಂಡಕ್ಕಿ 4 ಕಪ್
ಆಲೂಗಡ್ಡೆ 1
ಈರುಳ್ಳಿ 1
ಕಡಲೆಹಿಟ್ಟು 1/2 ಕಪ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ವಾಟೆ ಪುಡಿ ಸ್ವಲ್ಪ
ಅಚ್ಚ ಖಾರದ ಪುಡಿ
ತುರಿದ ಶುಂಠಿ
ರುಚಿಗೆ ತಕ್ಕಷ್ಟು ಉಪ್ಪು
 
ಮಾಡುವ ವಿಧಾನ:
 
ಮೊದಲು ಆಲೂಗಡ್ಡೆಯನ್ನು ಬೇಯಿಸಿಕೊಳ್ಳಬೇಕು. ನಂತರ ಮಂಡಕ್ಕಿಗೆ ನೀರು ಹಾಕಿ ನೆನೆಸಿ ನೀರು ತೆಗೆದು 1 ಬೌಲ್‌ಗೆ ಹಾಕಬೇಕು. ಇದಕ್ಕೆ ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ತುರಿದು ಹಾಕಬೇಕು. ನಂತರ ಇದಕ್ಕೆ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಹಾಕಬೇಕು. ನಂತರ ಕೊತ್ತಂಬರಿ ಸೊಪ್ಪು, ಶುಂಠಿ, ವಾಟೆ ಪುಡಿ ಮತ್ತು ಅಚ್ಚ ಖಾರದ ಪುಡಿಯನ್ನು ಹಾಕಿ ಸ್ವಲ್ಪ ಸ್ವಲ್ಪವೇ ಕಡ್ಲೆ ಹಿಟ್ಟನ್ನು ಹಾಕುತ್ತಾ ಕಲೆಸಿ ಚಿಕ್ಕ ಚಿಕ್ಕ ಉಂಡೆಯನ್ನು ಮಾಡಬೇಕು. ಉಂಡೆ ಮಾಡುತ್ತಾ ಸ್ವಲ್ಪ ಸ್ವಲ್ಪವೇ ತಟ್ಟಿ ಚಪ್ಪಟೆ ಮಾಡಿ ಕಾದ ಎಣ್ಣೆಯಲ್ಲಿ ಕರಿಯಬೇಕು. ಈಗ ರುಚಿ ರುಚಿಯಾದ ಗರಿ ಗರಿಯಾದ ಮಂಡಕ್ಕಿ ಪಕೋಡಾ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ