ಹೀರೆಕಾಯಿ ಅಧಿಕ ಪೌಷ್ಠಿಕಾಂಶ ಮತ್ತು ಫೈಬರ್ ಅಂಶಗಳನ್ನು ಹೊಂದಿದ್ದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದಾಗಿದೆ. ಇದರಿಂದ ಬಜ್ಜಿ, ಸಾಂಬಾರ್, ಚಟ್ನಿ, ಪಲ್ಯ ಮುಂತಾದ ಪದಾರ್ಥಗಳನ್ನು ಮಾಡಬಹುದು.
ಇದನ್ನು ಬಳಸಿ ನಾವು ಪಲ್ಯ, ಸಾಂಬಾರ್, ಬಜ್ಜಿ, ಬೋಂಡಾ, ಚಿಪ್ಸ್ ಮತ್ತು ಇನ್ನೂ ಅನೇಕ ಪದಾರ್ಥಗಳನ್ನು ಮಾಡಬಹುದು. ಹೀರೆಕಾಯಿ ಮತ್ತು ಬೇರು ಹಲಸಿನ ಬಜ್ಜಿ ಮಾಡುವುದು ಹೇಗೆ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಈ ಲೇಖನವನ್ನು ಓದಿ.
ಬೇರು ಹಲಸು ಮತ್ತು ಹೀರೆಕಾಯಿಯ ಸಿಪ್ಪೆ ತೆಗೆದು ಬೇರೆ ಬೇರೆಯಾಗಿ ಸ್ಲೈಸ್‌ಗಳನ್ನು ಮಾಡಿಕೊಳ್ಳಿ. ಬೇರು ಹಲಸನ್ನು ಸ್ವಲ್ಪ ತೆಳ್ಳಗಿನ ಸ್ಲೈಸ್ ಮಾಡಿದರೆ ಉತ್ತಮ. ಬೇರು ಹಲಸಿನ ಸ್ಲೈಸ್‌ಗೆ 1/2 ಚಮಚ ಉಪ್ಪನ್ನು ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಬೌಲ್‌ನಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಇಂಗು, ಅರಿಶಿಣ, ಅಡುಗೆ ಸೋಡಾ, ಓಮಕಾಳು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟನ್ನು ತಯಾರಿಸಿಕೊಳ್ಳಿ. ಈ ಹಿಟ್ಟು ದೋಸೆ ಹಿಟ್ಟಿನ ಹದದಲ್ಲಿರಲಿ.
ನಂತರ ಮಧ್ಯಮ ಉರಿಯಲ್ಲಿ ಬಾಣಲೆಯನ್ನು ಸ್ಟೌ ಮೇಲಿಟ್ಟು ಕರಿಯಲು ಅಗತ್ಯವಿರುವಷ್ಟು ಎಣ್ಣೆಯನ್ನು ಹಾಕಿ. ಎಣ್ಣೆಯು ಕಾದಾಗ ಬೇರು ಹಲಸು ಮತ್ತು ಹೀರೆಕಾಯಿಯ ಸ್ಲೈಸ್‌ಗಳನ್ನು ಹಿಟ್ಟಿನಲ್ಲಿ ಡಿಪ್ ಮಾಡಿ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಹೀಗೆ ಬಜ್ಜಿಯು ಕೆಂಪಗಾದಾಗ ತೆಗೆದರೆ ಹೀರೆಕಾಯಿ ಮತ್ತು ಬೇರು ಹಲಸಿನ ಬಜ್ಜಿ ರೆಡಿ. ಬೇರು ಹಲಸು ಬೇಯಲು ಸ್ವಲ್ಪ ಅಧಿಕ ಸಮಯ ತೆಗೆದುಕೊಳ್ಳುವುದರಿಂದ ಹೀರೆಕಾಯಿ ಮತ್ತು ಬೇರು ಹಲಸನ್ನು ಬೇರೆ ಬೇರೆಯಾಗಿ ಕರಿಯುವುದು ಉತ್ತಮ. ಈ ಬಜ್ಜಿಗಳು ಸಂಜೆಯ ಟೀ ಸಮಯದಲ್ಲಿ ಅಥವಾ ಊಟದ ಸಮಯದಲ್ಲಿ ತಿನ್ನಲು ರುಚಿಯಾಗಿರುತ್ತದೆ. ನೀವೂ ಒಮ್ಮೆ ಈ ಬಜ್ಜಿಗಳನ್ನು ಮಾಡಿ ನೋಡಿ.