ಮಕರ ಸಂಕ್ರಾಂತಿಯ ಸಮಯದಲ್ಲಿ ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಎಳ್ಳು - ಬೆಲ್ಲವನ್ನು ಬಂಧು ಮಿತ್ರರಿಗೆ ಹಂಚುವ ಸಂಪ್ರದಾಯ. ಸಂಕ್ರಾಂತಿಯ ಸಮಯದಲ್ಲಿ ಮನೆಯಲ್ಲಿ ಎಳ್ಳುಂಡೆ, ಗೋಧಿ ಹುಗ್ಗಿ ಹೀಗೆ ಹಲವಾರು ಆರೋಗ್ಯಕರ ತಿನಿಸುಗಳನ್ನು ಮಾಡುವುದು ಸರ್ವೇಸಾಮಾನ್ಯ. ಬನ್ನಿ ಇಂತಹ ರುಚಿಕರವಾದ ಮತ್ತು ಆರೋಗ್ಯಕರವಾದ ಗೋಧಿ ಹುಗ್ಗಿ ಮತ್ತು ಎಳ್ಳುಂಡೆ ತಯಾರಿಸುವುದು ಹೇಗೆಂದು ನೋಡೋಣ.
1. ಗೋಧಿ ಹುಗ್ಗಿ
ಬೇಕಾಗುವ ಸಾಮಗ್ರಿಗಳು-
ಗೋಧಿ ನುಚ್ಚು - 1/4 ಕೆಜಿ
ಬೆಲ್ಲ - 1/4 ಕೆಜಿ
ಉಪ್ಪು - 1 ಚಮಚ
ಏಲಕ್ಕಿ ಪುಡಿ
ಒಣದ್ರಾಕ್ಷಿ, ಬಾದಾಮಿ, ಗೋಡಂಬಿ
ಕೊಬ್ಬರಿ ತುರಿ - 3-4 ಚಮಚ
ಗಸಗಸ - 1 ಚಮಚ
ತುಪ್ಪ - 2-3 ಚಮಚ
ತಯಾರಿಸುವ ವಿಧಾನ-
- ಕುಕ್ಕರ್‌ನಲ್ಲಿ ಚೆನ್ನಾಗಿ ತೊಳೆದ ಗೋಧಿ ನುಚ್ಚನ್ನು ಹಾಕಿ, 3 - 4 ಸೀಟಿ ಬರುವ ತನಕ ಬೇಯಿಸಿ
- ನಂತರ ಸಣ್ಣ ಉರಿಯಲ್ಲಿ ಬೆಂದ ಗೋಧಿಗೆ ಬೆಲ್ಲ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ತಳ ಹಿಡಿಯದ ಹಾಗೆ ಸೌಟ್‌ನಿಂದ ತಿರುಗಿಸುತ್ತಿರಿ
- ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದರಲ್ಲಿ ಒಣದ್ರಾಕ್ಷಿ, ಬಾದಾಮಿ, ಗೋಡಂಬಿ ತುಂಡುಗಳನ್ನು ಹಾಕಿ ಹುರಿದಿಟ್ಟುಕೊಳ್ಳಿ.
- ಅದೇ ರೀತಿ ಗಸಗಸ ಮತ್ತು ಕೊಬ್ಬರಿ ತುರಿಯನ್ನು ಬೇರೆ ಬೇರೆಯಾಗಿ ಹುರಿದಿಟ್ಟುಕೊಳ್ಳಿ.
- ಈಗ ಬೇಯುತ್ತಿರುವ ಗೋಧಿ ಮಿಶ್ರಣಕ್ಕೆ ಹುರಿದ ಒಣದ್ರಾಕ್ಷಿ, ಬಾದಾಮಿ, ಗೋಡಂಬಿ, ಗಸಗಸ ಮತ್ತು ಕೊಬ್ಬರಿ ತುರಿಯನ್ನು ಸೇರಿಸಿ, 2 ಚಮಚ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರ ಮತ್ತು ಆರೋಗ್ಯಕರ ಗೋಧಿ ಹುಗ್ಗಿ ಸವಿಯಲು ಸಿದ್ದ.
2. ಎಳ್ಳುಂಡೆ
ಬೇಕಾಗುವ ಸಾಮಗ್ರಿಗಳು-
1 ಕಪ್ ಬಿಳಿ ಎಳ್ಳು
1 ಕಪ್ ಬೆಲ್ಲ
¼ ಕಪ್ ಕೊಬ್ಬರಿ ತುರಿ (ಸ್ವಲ್ಪ ಹುರಿದ)
3-4 ಚಮಚ ಕಡಲೆಕಾಯಿ, (ಹುರಿದ ಮತ್ತು ಪುಡಿ ಮಾಡಿದ)
3-4 ಚಮಚ ಹುರಿಕಡಲೆ
3-4 ಚಮಚ ತುಂಡು ಮಾಡಿದ ಗೋಡಂಬಿ, ಬಾದಾಮಿ (ತುಪ್ಪದಲ್ಲಿ ಹುರಿದ)
½ ಟೀಸ್ಪೂನ್ ಏಲಕ್ಕಿ ಪುಡಿ
ತುಪ್ಪ
ತಯಾರಿಸುವ ವಿಧಾನ-
- ಒಂದು ಬಾಣಲೆಯಲ್ಲಿ ಬಿಳಿ ಎಳ್ಳನ್ನು ಹುರಿದ ಪರಿಮಳ ಬರುವ ತನಕ ಹುರಿದು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ, ಅದಕ್ಕೆ ಹುರಿದ ಕಡಲೆಕಾಯಿ, ಹುರಿಕಡಲೆ, ತುಪ್ಪದಲ್ಲಿ ಹುರಿದ ಗೋಡಂಬಿ, ಬಾದಾಮಿ, ಹುರಿದ ಕೊಬ್ಬರಿ ತುರಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
- ಒಂದು ಬಾಣಲೆಯಲ್ಲಿ 2 ಚಮಚ ತುಪ್ಪ ಬಿಸಿಮಾಡಿ ಅದಕ್ಕೆ ಬೆಲ್ಲ ಸೇರಿಸಿ ಒಂದೆಳೆ ಪಾಕ ತಯಾರಿಸಿ
- ಈಗ ಬಿಳಿ ಎಳ್ಳಿನ ಮಿಶ್ರಣಕ್ಕೆ ಬೆಲ್ಲದ ಪಾಕ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
- ಕೈಗೆ ತುಪ್ಪ ಸವರಿಕೊಂಡು ಮಿಶ್ರಣ ಬಿಸಿಯಾಗಿರುವಾಗಲೇ ಉಂಡೆ ಕಟ್ಟಿದರೆ ಎಳ್ಳುಂಡೆ ರೆಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.