ಆನೆಗುಡ್ಡೆ ವಿನಾಯಕ ದೇವಸ್ಥಾನ ಕುಂಬಾಶಿಯು ಕುಂದಾಪುರಕ್ಕೆ 9 ಕಿಮೀ ದೂರದಲ್ಲಿ ನೆಲೆಗೊಂಡಿದೆ. ಮಹಾಲಿಂಗೇಶ್ವರ ಮತ್ತು ಆನೆಗುಡ್ಡೆ ವಿನಾಯಕ ಮಂದಿರಗಳಿಗೆ ಇದು ಪ್ರಖ್ಯಾತಿ ಪಡೆದಿದೆ. ಈ ಸ್ಥಳದ ಹೆಸರು ಕುಂಬಾಸುರನಿಂದ ಜನ್ಯವಾಗಿದೆ. ಶಾಸನಗಳಲ್ಲಿ ಕುಂಭಾ-ಕಾಶಿ ಎಂದೇ ಈ ಸ್ಥಳವನ್ನು ವರ್ಣಿಸಲಾಗಿದೆ. ಪರಶುರಾಮ ಸೃಷ್ಟಿ ಎಂದು ಕರೆಯುವ ಏಳು ಸ್ಥಳಗಳ ಪೈಕಿ ಇದೂ ಕೂಡ ಯಾತ್ರಾಸ್ಥಳವಾಗಿದೆ.
ಆನೆಗುಡ್ಡೆಯೆಂದರೆ ಆನೆ ಸೊಂಡಿಲಿನ ದೇವರು ವಿನಾಯಕನ ಆವಾಸಸ್ಥಾನ. ಈ ಪ್ರದೇಶದಲ್ಲಿ ಬರಗಾಲ ಅಪ್ಪಳಿಸಿದಾಗ ಅಗಸ್ತ್ಯ ಮುನಿ ವರುಣನ ಸಂತೃಪ್ತಿಗೆ ಯಜ್ಞ ಮಾಡಿದರು. ಕುಂಬಾಸುರ ರಾಕ್ಷಸ ಯಜ್ಞವನ್ನು ನಡೆಸುವ ಋಷಿಗಳಿಗೆ ತೊಂದರೆ ಮಾಡಿದ. ಈ ಋಷಿಗಳನ್ನು ಪಾರು ಮಾಡಲು ಭಗವಾನ್ ಗಣೇಶ ಭೀಮನಿಗೆ ಆಶೀರ್ವದಿಸಿ ಕತ್ತಿಯೊಂದನ್ನು ನೀಡಿದ. ಈ ಕತ್ತಿಯಿಂದ ಭೀಮ ರಾಕ್ಷಸನನ್ನು ಕೊಂದು ಯಜ್ಞ ನೆರವೇರಲು ಅನುಕೂಲ ಕಲ್ಪಿಸಿದ ಎಂಬ ಪೌರಾಣಿಕ ಕಥೆಯಿದೆ.
ಇಲ್ಲಿ ಪಂಚಕಜ್ಜಾಯ ಎಂಬ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಇದು ಬೇಳೆ, ಸಕ್ಕರೆ, ಕೊಬ್ಬರಿ, ಹಾಲು ಮತ್ತು ಜೇನುತುಪ್ಪದ ಮಿಶ್ರಣವಾಗಿದೆ.