ಕೂಡಲಸಂಗಮದಲ್ಲಿ 850 ವರ್ಷ ಪ್ರಾಚೀನ ಸಂಗಮೇಶ್ವರ ದೇವಾಲಯ

ಗುರುವಾರ, 4 ಆಗಸ್ಟ್ 2016 (13:34 IST)
ಐಹೊಳೆಯಿಂದ 35 ಕಿಮೀ ದೂರವಿರುವ ಕೂಡಲಸಂಗಮ ಬಾಗಲಕೋಟೆ ಜಿಲ್ಲೆಯಲ್ಲಿ ಜನಪ್ರಿಯ ಯಾತ್ರಾಸ್ಥಳ. ಕೂಡಲಸಂಗಮವು 850 ವರ್ಷಗಳಷ್ಟು ಪ್ರಾಚೀನವಾದ ಸಂಗಮೇಶ್ವರ ದೇವಾಲಯಕ್ಕೆ ಪ್ರಸಿದ್ಧವಾಗಿದ್ದು, ಭಗವಾನ್ ಶಿವನಿಗೆ ಅರ್ಪಿತವಾದ ಕೂಡಲಸಂಗಮೇಶ್ವರ ಎಂದು ಹೆಸರಾಗಿದೆ. 12ನೇ ಶತಮಾನದಲ್ಲಿ ನಿರ್ಮಿಸಿದ ಈ ದೇವಾಲಯವು ಕೃಷ್ಣಾ ನದಿ ದಂಡೆಯಲ್ಲಿದ್ದು, ಅನೇಕ ಬಾರಿ ನವೀಕರಿಸಲಾಗಿದೆ.

ದ್ರಾವಿಡ ಶೈಲಿಯಲ್ಲಿ ಈ ದೇವಾಲಯ ನಿರ್ಮಿಸಲಾಗಿದ್ದು, ಪ್ರವೇಶದ್ವಾರದಲ್ಲಿ ದೊಡ್ಡ ಮಂದಿರದ ಗೋಪುರವಿದೆ. ಮುಖ್ಯ ದೇವಾಲಯವು ಮುಖಮಂಟಪ, ನವರಂಗ ಮತ್ತು ಗರ್ಭಗುಡಿಯಿಂದ ಕೂಡಿದೆ. ಗರ್ಭಗೃಹದ ಬಾಗಿಲಿನ ಚೌಕಟ್ಟನ್ನು ಹೂವಿನ ವಿನ್ಯಾಸಗಳು ಮತ್ತು ಪ್ರಾಣಿಗಳ ಚಿತ್ರಗಳಿಂದ ಕೆತ್ತಲಾಗಿದೆ.
 
ದೇವಾಲಯದ ಮುಂದೆ ನದಿ ಮಧ್ಯದಲ್ಲಿ ಸಣ್ಣ ಕಲ್ಲಿನ ಮಂಟಪವಿದ್ದು ಅದರಲ್ಲಿ ಶಿವಲಿಂಗವಿದೆ. ಸಿಮೆಂಟ್ ಕಾಂಕ್ರೀಟ್ ಒಣ ಬಾವಿಯನ್ನು ಅದರ ಸುತ್ತ ಶಿವಲಿಂಗ ಮುಳುಗದಂತೆ ನಿರ್ಮಿಸಲಾಗಿದೆ. ಈ ಸ್ಥಳವು ವಿಶ್ವಗುರು ಬಸವಣ್ಣನಿಗೆ ಸಂಬಂಧಿಸಿದ್ದು, ಕೂಡಲಸಂಗಮದಲ್ಲಿ ಅವರ ಸಮಾಧಿಯಿದೆ.
 
ಕೂಡಲಸಂಗಮದಲ್ಲಿ ನೋಡಬಹುದಾದ ಇನ್ನಿತರ ಸ್ಥಳಗಳು ಬಸವ ಧರ್ಮ ಪೀಠದ ಆವರಣ, 6000 ಆಸನ ಸಾಮರ್ಥ್ಯದ ಸಭಾ ಭವನ, 200 ಅಡಿ ಎತ್ತರದ ದುಂಡಗಿನ ಬಸವ ಗೋಪುರ ಮತ್ತು ಮ್ಯೂಸಿಯಂ.  ಕೂಡಲಸಂಗಮದಿಂದ 15 ಕಿಮೀ ದೂರದಲ್ಲಿ ಆಲಮಟ್ಟಿ ಅಣೆಕಟ್ಟು ನೆಲೆಗೊಂಡಿದೆ.

ವೆಬ್ದುನಿಯಾವನ್ನು ಓದಿ