ಅಕ್ಷಯ ತೃತೀಯ ಎಂದರೇನು..? ಇಂದೇ ಬಂಗಾರ ಖರೀದಿಸುವುದೇಕೆ..?
ಶುಕ್ರವಾರ, 28 ಏಪ್ರಿಲ್ 2017 (16:37 IST)
ಅಕ್ಷಯ ತೃತೀಯ ಪ್ರಿವರ್ಷ ಈ ದಿನ ಹೆಂಗಳೆಯರ ಬಂಗಾರ ಖರಿದಿ ಭರಾಟೆ ಜೋರಾಗುತ್ತದೆ. ಸಾಮಾನ್ಯ ದಿನಗಳಿಗಿಂತ 10-20 ಪಟ್ಟು ಬಂಗಾರ ಖರೀದಿಯಾಗುತ್ತದೆ. ಇಂದಿನ ಶುಭದಿನ ಒಂದು ಗ್ರಾಂ ಬಂಗಾರ ಖರೀದಿಸಿದರೂ ಸಾಕು ಎನ್ನುವ ಜನರಿದ್ದಾರೆ. ಹಾಗಾದರೆ ಈ ದಿನದ ವಿಶೇಷತೆ ಏನು.. ಈ ದಿನಂದು ಬಂಗಾರ ಖರೀದಿಗೆ ಯಾಕಿಷ್ಟು ಮಹತ್ವ..? ಇಲ್ಲಿದೆ ಕೆಲ ಉಪಯುಕ್ತ ಮಾಹಿತಿ.
ವೈಶಾಖ ಶುಕ್ಲ ತೃತೀಯ ತಿಥಿಯೆ, ಅಕ್ಷಯ ತೃತೀಯ, ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ಮೂರುವರೆ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಅರ್ಧ ದಿವಸ ಶುಭಕಾರ್ಯಗಳಿಗೆ ಪಂಚಾಂಗ ಶುದ್ದಿ ನೋಡುವ ಅವಶ್ಯಕತೆ ಇರುವುದಿಲ್ಲ.
ಈ ದಿವಸ ಸಾಮಾನ್ಯವಾಗಿ ಎಲ್ಲಾ ಶುಭ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣದಲ್ಲಿದೆ. ಈ ಶುಭ ದಿವಸದಂದು ವಿಷ್ಣು ಮತ್ತು ಲಕ್ಷ್ಮೀ, ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪ್ರತೀತಿ. ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿವಸಅಕ್ಷಯ ತೃತೀಯ ದಿವಸ. ಈ ದಿವಸ ಕೃತ ಯುಗದ ಪ್ರಾರಂಭ ದಿನ. ವಿಷ್ಣುವಿನ 6ನೇ ಅವತಾರವಾದ ಪರಶುರಾಮ ಹಾಗೂ 12ನೇ ಶತಮಾನದಲ್ಲಿ ಮಹಾ ಪುರುಷ ಬಸವೇಶ್ವರವರು ಜನಿಸಿದ್ದು, ಈ ದಿವಸದಂದು. ಈ ದಿವಸ ಮಹಾವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ. ಈ ದಿವಸ ವಿಷ್ಣುವಿನ ಪೂಜೆಗೆ ಮೊದಲ ಆದ್ಯತೆಯಿದೆ.
ಈ ಅಕ್ಷಯ ತೃತೀಯ ದಿವಸ ರವಿ ಮತ್ತು ಚಂದ್ರ ಏಕಕಾಲದಲ್ಲಿ ಅತ್ಯುಚ್ಛ ಪ್ರಮಾಣ ತಲುಪಿ ಉಚ್ಚರಾಶಿಯಲ್ಲಿ ಉಜ್ವಲತೆ ಉಂಟಾಗುವುದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ರವಿ ಆತ್ಮ ಮತ್ತು ದೇಹಕಾರಕ, ಚಂದ್ರ ಮನಸ್ಸುಕಾರಕ, ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಹೊಂದುವ ದಿವಸವಾಗಿದೆ.
ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು, ಅಕ್ಷಯ ತೃತೀಯ ದಿವಸವೇ ಆಗಿದೆ. ಹಾಗೂ ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದಿದ್ದು, ಅಕ್ಷಯ ತೃತೀಯದಂದು, ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು, ಅಕ್ಷಯ ತೃತೀಯ ದಿನದಂದು. ಶ್ರೀಕೃಷ್ಣನು ಕುಚೇಲನನ್ನು ಸತ್ಕರಿಸಿದ ಶ್ರೇಷ್ಠದಿನ.
ವೇದವ್ಯಾಸರು ಗಣಪತಿಯೊಂದಿಗೆ ಒಪ್ಪಂದ ಮಾಡಿಕೊಂಡು ಮಹಾಭಾರತ ಬರೆಯಿಸಲು ಪ್ರಾರಂಭಿಸಿದ್ದು ಅಕ್ಷಯ ತೃತೀಯ ದಿನದಂದು.
ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಹಾಗೂ ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ.
ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ ಪುರುಷಾರ್ಥವನ್ನು ಅಂದರೆ ಸಂಪತ್ತು, ಕೀರ್ತಿ ಪಡೆಯಲು ಈ ದಿವಸ ಕುಬೇರ ಹಾಗು ಲಕ್ಷ್ಮಿ ಇವರುಗಳ ಪೂಜೆ ಮಾಡಲಾಗುತ್ತದೆ. ಮಹಾಲಕ್ಷ್ಮಿ ಅನುಷ್ಠಾನ ಮಾಡಿದರೆ ಇಡೀವರ್ಷ ಉತ್ತಮ ಫಲ ದೊರೆಯುತ್ತದೆ.
ಈ ಅಕ್ಷಯ ತೃತೀಯ ದಿವಸ ಚಿನ್ನ, ಬೆಳ್ಳಿ, ವಜ್ರ, ರತ್ನಾಭರಣ, ಭೂಮಿ ಇವುಗಳ ಖರೀದಿ, ಆಸ್ತಿಯಲ್ಲಿ ಹೂಡಿಕೆಗೆ ಪ್ರಶಸ್ತವೆನಿಸಿದೆ ಹಾಗೂ ಸಮೃದ್ದಿ ದೊರೆಯುತ್ತದೆಂದೂ ನಂಬಿಕೆ ಇದೆ. ಆದ್ದರಿಂದಲೇ ಅಕ್ಷಯ ತೃತೀಯ ಕುರಿತು ಇರುವ ಪವಿತ್ರ ಭಾವನೆ, ಉಳಿತಾಯದ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಪೂರ್ಣ ಫಲ ದೊರೆಯಬೇಕೆಂಬ ಸದ್ಬಾವನೆಯಿಂದಲೇ ಆ ಕುರಿತು ಖರೀದಿ ಹೂಡಿಕೆಗಳು ಭರದಿಂದ ನಡೆಯುತ್ತವೆ.
ಈ ಅವಧಿಯಲ್ಲಿ ಯಾವುದೇ ಶುಭಕಾರ್ಯಗಳನ್ನು ಪ್ರಾರಂಭಿಸಬಹುದು ಹಾಗೂ ಚಿನ್ನ, ಬೆಳ್ಳಿ ಆಭರಣ, ಭೂಮಿ ಖರೀದಿಸಬಹುದು ಹಾಗೂ ವಿವಾಹ, ಗೃಹಪ್ರವೇಶ ಮತ್ತು ಇತರೆ ಶುಭ ಕಾರ್ಯಗಳನ್ನು ಮಾಡಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ