ಪ್ರಜಾತಂತ್ರದಲ್ಲಿ ಪ್ರಜೆ ಅತಂತ್ರ...

ಭಾನುವಾರ, 26 ಜನವರಿ 2014 (12:51 IST)
PR
ದೇಶದ ಜನತೆಗೆ ನ್ಯಾಯ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸೇರಿದಂತೆ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿ ಸಂವಿಧಾನಬದ್ಧ ಶಾಸನ ರೂಪಿಸಿ, 1949 ನವೆಂಬರ್ 26ರಂದು ಅಧಿಕೃತ ಅನುಮೋದನೆ ನೀಡಲಾಯಿತಾದರೂ, ಅದು ಜಾರಿಗೊಂಡದ್ದು 1950 ಜನವರಿ 26ರಂದು. ಬಳಿಕ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಭಾರತ ಪ್ರತಿವರ್ಷ ಜನವರಿ 26 ರಂದು ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದೆ. ಪ್ರಪಂಚದ ಯಾವುದೇ ಸ್ವತಂತ್ರ ದೇಶಕ್ಕಿಂತಲೂ ಭಾರತ ಅತೀ ದೊಡ್ಡ ಸಂವಿಧಾನ ಶಾಸನ ರೂಪಿಸಿದ ದೇಶವಾಗಿದೆ.

ಪ್ರಪಂಚದ ಏಳನೇ ಅತಿ ದೊಡ್ಡ ದೇಶ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಭರತಖಂಡದಲ್ಲಿ ಇದೀಗ ಪ್ರಜೆಗಳ ಸ್ಥಿತಿಗತಿ(!!)ಗಳ ಕುರಿತು ಅವಲೋಕನ ನಡೆಸಬೇಕಾಗಿದೆ.

ಸಂವಿಧಾನಬದ್ಧ ಶಾಸನ ಇದ್ದರೂ, ಪ್ರಜಾತಂತ್ರದಲ್ಲಿ ಜನರೇ ಸಾರ್ವಭೌಮರು ಎಂಬಂತಿದ್ದರೂ ಕೂಡ, ರಾಜಕೀಯ,ಧಾರ್ಮಿಕ, ಕಾನೂನು, ಸಾಮಾಜಿಕ ವ್ಯವಸ್ಥೆಗಳು ಜನರಲ್ಲಿ ಅಸಮಾಧಾನದ ಕಿಡಿಯನ್ನು ಹೊತ್ತಿಸಿದೆ. ನ್ಯಾಯಾಂಗ ವ್ಯವಸ್ಥೆಗಿಂತಲೂ ಸಂವಿಧಾನವೇ ಶ್ರೇಷ್ಠ ಎಂಬುದು ನಿರೂಪಿತವಾಗಿದ್ದರೂ ಸಹ, ಆಗಾಗ ನ್ಯಾಯಾಂಗ-ಕಾರ್ಯಾಂಗ, ಶಾಸಕಾಂಗದ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಸಂವಿಧಾನದ ಪರಿಚ್ಛೇದ 376 ಕೂಡ ರಾಜಕೀಯ ಪಕ್ಷದ ದಾಳವಾಗಿರುವುದೇ ಹೆಚ್ಚು. ಹಲವಾರು ಬಾರಿ ಸಂವಿಧಾನದಲ್ಲಿ ತಿದ್ದುಪಡಿಯಾಗಿದ್ದರೂ ಕೂಡ, ಸಂವಿಧಾನ ಸೇರಿದಂತೆ, ಪೊಲೀಸ್, ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆ, ತಿದ್ದುಪಡಿ ಆಗಬೇಕೆಂಬ ಕೂಗು ಇನ್ನೂ ಮುಂದುವರಿದೇ ಇದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಶ್ರೀಮಂತರಿಗೆ, ರಾಜಕಾರಣಿ, ಅಧಿಕಾರಿ ವರ್ಗ, ಬಂಡವಾಳಶಾಹಿಗಳಿಗೆ ತಕ್ಕುದಾಗಿದೆ ಎಂಬ ಜನಸಾಮಾನ್ಯರ ಅಸಮಾಧಾನದಲ್ಲಿ ಹುರುಳಿಲ್ಲದಿಲ್ಲ. ರಾಜಕಾರಣಿಗಳು ಓಟ್ ಬ್ಯಾಂಕ್‌‌ಗಾಗಿ ಹುಟ್ಟುಹಾಕಿದ ಸಮಸ್ಯೆಗಳು ಇಂದು ಪೆಡಂಭೂತವಾಗಿ ದೇಶವನ್ನು ಕಾಡುತ್ತಿವೆ. ಅಧಿಕಾರದ ಗದ್ದುಗೆಗಾಗಿ ಓಲೈಕೆ, ಜಾತಿ ರಾಜಕೀಯ, ಗಲಭೆ, ಗೂಂಡಾಗಿರಿ, ಭಯೋತ್ಪಾದನೆಗಳನ್ನು ಹುಟ್ಟು ಹಾಕುವುದರೊಂದಿಗೆ ಈ ಸಮಸ್ಯೆಗಳೆಲ್ಲ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಅಪಾಯವನ್ನು ತಂದೊಡ್ಡುವ ಮಟ್ಟಕ್ಕೆ ಬೆಳೆದಿವೆ.

ಜನಸಾಮಾನ್ಯರ, ರೈತರ, ಮಧ್ಯಮ ವರ್ಗದ ಏಳಿಗೆಗಾಗಿ ಶ್ರಮಿಸಬೇಕಾಗಿದ್ದ ಪ್ರಜಾಪ್ರತಿನಿಧಿಗಳಿಗೆ ಕೇವಲ ಅಧಿಕಾರ ಮಾತ್ರ ಮುಖ್ಯವಾಯಿತೇ ಹೊರತು ದೇಶದ ಅಭಿವೃದ್ಧಿ, ಸಮಸ್ಯೆ ನಿವಾರಣೆ ಪ್ರಮುಖ ಅನಿಸಲೇ ಇಲ್ಲ, ಇದರಿಂದಾಗಿಯೇ ನಕ್ಸಲೀಯರ ಸಮಸ್ಯೆ, ಉಲ್ಫಾ, ಗಡಿ, ನಾಡು, ಭಾಷೆ, ಕೋಶ ಎಂದೆಲ್ಲಾ ಪ್ರಜಾಪ್ರಭುತ್ವ ನರಳುವಂತಾಗಿದೆ. ವಿಶ್ವದ ದೃಷ್ಟಿಯಲ್ಲಿ ಗಮನ ಸೆಳೆಯಲು ಹೊರಟಿರುವ ಭಾರತದ ಒಡಲೊಳಗೆ ಬಗೆಹರಿಸಲಾರದ ನೂರಾರು ಸಮಸ್ಯೆಗಳು ತುಂಬಿತುಳುಕುತ್ತಿವೆ. ಅದಕ್ಕೇ ಹೇಳುವುದು ಪ್ರಜಾತಂತ್ರದಲ್ಲಿ ಜನಸಾಮಾನ್ಯರ ಬದುಕು ಅತಂತ್ರ...

ವೆಬ್ದುನಿಯಾವನ್ನು ಓದಿ