ಪ್ರಜೆಗಳಿಂದ, ಪ್ರಜೆಗಳಿಗಾಗಿ ಈ ಪ್ರಭುತ್ವ...

ರಜನಿ ಭಟ್
PTI
ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯವೇನೋ ಸಿಕ್ಕಿಬಿಟ್ಟಿತು. ಆದರೆ ದೇಶವನ್ನು ಸುಸೂತ್ರವಾಗಿ ಆಳಲು ಅಥವಾ ಭಾರತವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಸರಿಯಾದ ಒಂದು ಮಾರ್ಗಸೂಚಿ ಇರಲಿಲ್ಲ. ಜೊತೆಗೆ ಭಾರತದಲ್ಲಿ ಸಾವಿರಾರು ಸಮಸ್ಯೆಗಳ ಕಂತೆ. ಸ್ವಾತಂತ್ರ್ಯ ಸಿಗುವವರೆಗೆ ಬ್ರಿಟಿಶರು ಕ್ರಮಬದ್ಧವಾಗಿ ಆಡಳಿತ ನಡೆಸುತ್ತಿದ್ದರು. ಆದರೆ ಅದು ಸರ್ವಾಧಿಕಾರವಾಗಿತ್ತು. ಸ್ವಾತಂತ್ರ್ಯದ ನಂತರ ದೇಶ ಮುನ್ನಡೆಸಲು ಒಂದು ಕ್ರಮಬದ್ಧ ಆಡಳಿತ ನೀತಿ, ಕಾರ್ಯಕ್ರಮ, ಅಭಿವೃದ್ಧಿಯ ದೂರದೃಷ್ಟಿಯುಳ್ಳ ನಾಯಕತ್ವ...ಇವೆಲ್ಲವೂ ಬೇಕಾಗಿದ್ದವು.

ಯಾವುದೇ ಗೊಂದಲಗಳಿಲ್ಲದಂತೆ, ದೇಶವನ್ನು ಪ್ರಗತಿಪಥದಲ್ಲಿ ಸಮರ್ಥವಾಗಿ ಮುನ್ನಡೆಸುವ ನಿಟ್ಟಿನಲ್ಲಿ 1950ರಲ್ಲಿ ಹೊಸ ಮಾದರಿಯ ಆಡಳಿತ ಪದ್ಧತಿಯನ್ನು ಸ್ಥಾಪಿಸಲಾಯಿತು. ಇಡೀ ದೇಶವನ್ನು ರಾಜ್ಯಗಳೆಂದು ವಿಂಗಡಿಸಿ ರಾಜ್ಯಗಳನ್ನು ಮತ್ತೆ ಜಿಲ್ಲೆ ಹಾಗೂ ತಾಲೂಕುಗಳನ್ನಾಗಿ ವಿಭಾಗಿಸಲಾಯಿತು. ದೇಶಕ್ಕೆ ಒಬ್ಬ ರಾಷ್ಟ್ರಪತಿಯೆಂದು, ಆಡಳಿತ ನೋಡಿಕೊಳ್ಳಲೊಬ್ಬ ಪ್ರಧಾನಮಂತ್ರಿ, ರಾಜ್ಯಗಳಿಗೆ ಒಬ್ಬ ಮುಖ್ಯಮಂತ್ರಿ ನಿಯೋಜಿಸುವುದೆಂದು ತೀರ್ಮಾನವಾಯಿತು. ಈ ರಾಜ್ಯಗಳೆಲ್ಲಾ ಕೂಡಿ ಒಂದು ದೇಶ ಅಂದರೆ ಗಣರಾಜ್ಯ.

ಇದು ಜನರಿಂದ ಜನರಿಗಾಗಿ ಜನರಿಗೋಸ್ಕರ ನಡೆಸಲ್ಪಡುವ ಸರಕಾರ. ಇಲ್ಲಿ ಆ ದೇಶದ ಪ್ರಜೆಗಳು ಒಬ್ಬ ವ್ಯಕ್ತಿಯನ್ನು ತಮ್ಮ ಪ್ರತಿನಿಧಿಯಾಗಿ ಚುನಾಯಿಸುತ್ತಾರೆ. ಅಲ್ಲಿಂದ ಮುಂದೆ ಪ್ರತಿನಿಧಿಗಳಲ್ಲಿ ಹೆಚ್ಚು ಮತ ಪಡೆದವರನ್ನು ಮುಖ್ಯಮಂತ್ರಿಯಾಗಿ, ಒಂದೊಂದು ರಾಜ್ಯವು ಒಂದೊಂದು ಮುಖ್ಯಮಂತ್ರಿಗಳಿಂದ ಆಳಲ್ಪಡುತ್ತದೆ. ಹೀಗೆ ರಾಜ್ಯಕ್ಕೊಂದು ಮುಖ್ಯಮಂತ್ರಿಯಾದರೆ ದೇಶಕ್ಕೊಬ್ಬ ಪ್ರಧಾನಮಂತ್ರಿ. ಈ ರೀತಿಯ ಸುವ್ಯವಸ್ಥಿತವಾದ ರಾಜಕೀಯ ವ್ಯವಸ್ಥೆಯ ಕುರಿತ ಸಂವಿಧಾನವನ್ನು ರೂಪಿಸಿದವರು ಸಂವಿಧಾನ ಶಿಲ್ಪಿ ಎಂದೇ ಕರೆಯಲ್ಪಡುವ ಡಾ.ಬಿ.ಆರ್.ಅಂಬೇಡ್ಕರ್. ಈ ಸಂವಿಧಾನ 1950 ಜನವರಿ 26ರಂದು ಜಾರಿಗೆ ಬಂತು. ಇದೇ ದಿನವನ್ನು ಪ್ರಜಾಪ್ರಭುತ್ವ ದಿನವೆಂದು ದೇಶದೆಲ್ಲೆಡೆ ಆಚರಿಸಲಾಗುತ್ತದೆ.

ಈಗ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಹೇಗೆ ಎಂಬ ಗೊಂದಲ. ಅದಕ್ಕಾಗಿ ನೂತನ ಕ್ರಮವೊಂದು ಜಾರಿಗೆ ಬಂತು. ಅದುವೇ ಪ್ರಜಾಪ್ರಭುತ್ವ. ಅಂದರೆ ಪ್ರಜೆಗಳೇ ಪ್ರಭುಗಳು. ಇನ್ನೊಂದು ಅರ್ಥದಲ್ಲಿ ಇಡೀ ದೇಶವು ನಡೆಸಲ್ಪಡುವುದು ಆ ದೇಶದ ಜನರಿಂದಲೇ. ಅದೇ ಪ್ರಜಾಪ್ರಭುತ್ವ ಎಂದು ಕರೆಯಲ್ಪಡುತ್ತದೆ.

ಭಾರತವು ಇಡೀ ಜಗತ್ತಿನಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಇಂದಿಗೂ ನಡೆಯುತ್ತಿರುವುದು ಸರ್ವಾಧಿಕಾರದ ಪದ್ಧತಿಯೇ. ಯಾರಾದರೂ ಒಬ್ಬನು ಅಧ್ಯಕ್ಷನಾಗಿ ಇಡೀ ದೇಶವನ್ನು ಆಳುವಂತಹ ಪರಿಸ್ಥಿತಿ. ಆದರೆ ಭಾರತದಲ್ಲಿ ಹಾಗಲ್ಲ. ಪ್ರಜೆಗಳೇ ಆರಿಸಿ ಕಳುಹಿಸಿರುವ ಒಬ್ಬ ಪ್ರತಿನಿಧಿ ದೇಶವನ್ನು ಆಳುತ್ತಾನೆ. ಆದರೆ ಆ ಪ್ರತಿನಿಧಿಯನ್ನು ಕೆಳಗಿಳಿಸುವ ಹಕ್ಕೂ ಪ್ರಜೆಗಳಿಗಿದೆ.

ಈ ರೀತಿಯಾಗಿ ಇಡೀ ದೇಶದ ಪ್ರಜೆಗಳೇ ಆ ದೇಶವನ್ನು ಆಳುವಂತಹ ಒಂದು ನಾಜೂಕಾದ ವ್ಯವಸ್ಥೆ ಭಾರತದಲ್ಲಿದೆ. ಇಂತಹ ಸುವ್ಯವಸ್ಥಿತವಾದ ಪದ್ಧತಿಯನ್ನು ಮೊದಲಾಗಿ ಜಾರಿಗೆ ತಂದದ್ದು ನಮ್ಮ ದೇಶ. ಬೇರೆ ದೇಶಗಳಲ್ಲೂ ಈ ಪದ್ಧತಿ ಜಾರಿಯಲ್ಲಿದೆ.

ಪಥಸಂಚಲನದ ಆಕರ್ಷಣೆ: ಗಣರಾಜ್ಯೋತ್ಸವದ ದಿನ ಅದನ್ನು ಜಾರಿಗೆ ತಂದ ಸವಿನೆನಪಿಗಾಗಿ ಮುಂಜಾನೆ ಧ್ವಜಾರೋಹಣ, ಭಾರತಮಾತೆಗೆ ವಂದನೆ ಸಲ್ಲಿಸುವುದರೊಂದಿಗೆ ಅದನ್ನು ಆಚರಿಸಲಾಗುತ್ತದೆ. ಆ ದಿನ ಭಾರತದ ರಾಜಧಾನಿ ದೆಹಲಿಯ ರಾಜಪಥದಲ್ಲಿ ಪಥಸಂಚಲನ ನಡೆಸಲಾಗುತ್ತದೆ. ಇದು ರಾಷ್ಟ್ರಪತಿಯವರ ಸಮ್ಮುಖದಲ್ಲಿ ನಡೆಯುತ್ತದೆ. ಜೊತೆಗೆ ಪ್ರತಿಯೊಂದು ರಾಜ್ಯದಿಂದ ಆ ರಾಜ್ಯದ ಪ್ರತೀಕವಾಗಿ ಸ್ತಬ್ಧ ಚಿತ್ರಗಳು ರಾಜಮಾರ್ಗದಲ್ಲಿ ಸಾಗುತ್ತವೆ. ಎಲ್ಲಾ ಯುದ್ಧವಿಮಾನಗಳು, ಸೈನಿಕದಳಗಳು ಈ ದಿನ ನಡೆಯುವ ಪಥಸಂಚಲದಲ್ಲಿ ಪಾಲ್ಗೊಳ್ಳುತ್ತವೆ. ಒಟ್ಟಾರೆ ದೆಹಲಿಯು ಈ ದಿನದಂದು ಸಂಪೂರ್ಣವಾಗಿ ಶೋಭೆಗೊಳ್ಳುತ್ತದೆ ಅಲ್ಲದೆ ವಿವಿಧ ರೀತಿಯ ಕ್ರೀಢಾ ಸ್ಪರ್ಧೆ, ದೇಶಭಕ್ತಿಗೀತೆಗಳು ಇನ್ನೂ ಅನೇಕ ಸ್ಪರ್ಧೆಗಳನ್ನು ನಡೆಸುವ ಮೂಲಕ ದೇಶದೆಲ್ಲೆಡೆ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.

ಈ ಪಥ ಸಂಚಲನವೇ ಗಣರಾಜ್ಯೋತ್ಸವ ವೈಭವದ ಪ್ರಧಾನ ಆಕರ್ಷಣೆ. ಅಂದು ದೇಶದ ಸಾರ್ವಭೌಮತೆ ಸಾರುವ ಆಕರ್ಷಕ ಟ್ಯಾಬ್ಲೋಗಳು ದೆಹಲಿಯ ರಾಜಪಥದಲ್ಲಿ ಗಜಗಾಂಭೀರ್ಯದಿಂದ ಸಾಗುತ್ತಿದ್ದರೆ, ದೇಶ ವಿದೇಶಗಳಲ್ಲಿರುವ ಭಾರತೀಯರು ದೂರದರ್ಶನದಲ್ಲಿ ಅದರ ವೈಭವವನ್ನು ಕಂಡು ಹೆಮ್ಮೆ ಪಡುತ್ತಾರೆ.

ಪ್ರಜೆಗಳಿಂದ ನಡೆಸಲ್ಪಡುವ ಸರಕಾರವೇ ಪ್ರಜಾಪ್ರಭುತ್ವ. ಪ್ರಜೆಗಳಾದ ನಾವು ಇದನ್ನು ಅರಿತುಕೊಂಡು ಆ ನಿಟ್ಟಿನಲ್ಲಿ ಮುನ್ನಡೆಬೇಕಾದದ್ದು ಅತೀ ಅವಶ್ಯ. ಆದರೆ ಇಂದು ಸ್ಥಿತಿ ಹೇಗಿದೆ? ಇಂದು ಮುಖ್ಯಮಂತ್ರಿ ಸ್ಥಾನಕ್ಕಾಗಿ ಜನರಿಗೆ ದುಡ್ಡುಕೊಟ್ಟು ಮತಪಡೆಯುವಂತಹ ನೀಚ ಕೆಲಸಗಳೂ ನಡೆಯುತ್ತಿರುವುದು ದುರಂತ. ಪ್ರಜಾಪ್ರಭುತ್ವವೇನೆಂದು ಯುವಜನರಿಗೆ ತಿಳಿಸಿ ನುಡಿದಂತೆ ನಡೆಯಬೇಕಾಗುವಂತಹ ಹಿರಿಯರೇ ದೇಶವನ್ನು ದುಃಸ್ಥಿತಿಯತ್ತ ತಳ್ಳುತ್ತಿದ್ದಾರೆ. ಶಾಲಾಕಾಲೇಜುಗಳಲ್ಲಿ ಇದರ ಮಹತ್ವವನ್ನು ತಿಳಿಸಿ ಅದರಂತೆ ಮುನ್ನಡೆಯಲು ಪ್ರೋತ್ಸಾಹಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೆ "ಎಲ್ಲಿದೆಯೋ ಪ್ರಜಾಪ್ರಭುತ್ವ ಸ್ವಾಮಿ ಎಲ್ಲಿದೆಯೋ ಪ್ರಜಾಪ್ರಭುತ್ವ" ಎಂದು ಗೋಗರೆಯಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ. ಹಾಗಾಗಿ ಭಾರತದ ಪ್ರಜೆಗಳಾದ ನಾವು ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು ಅದನ್ನು ಉಳಿಸಿ ಬೆಳೆಸಲು ಒಗ್ಗಟ್ಟಿನಿಂದ ಶ್ರಮಿಸೋಣ. ದಯವಿಟ್ಟು ಎಲ್ಲರೂ ಒಗ್ಗೂಡಿ ಬನ್ನಿ.