ಭಾರತವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವೇ ಇರುವ ಸರಕಾರದ ವ್ಯವಸ್ಥೆ ಇದೆ. ಸರಕಾರವನ್ನು ಪ್ರಜೆಗಳೇ ಚುನಾಯಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಲು ಸಾಧ್ಯವಿದೆ.
ಪ್ರಜಾತಾಂತ್ರಿಕ ರಾಜಕೀಯ ವ್ಯವಸ್ಥೆಯ ಪ್ರಕಾರ, ಕೇಂದ್ರದಲ್ಲೊಂದು ಸರಕಾರವಿರುತ್ತದೆ, ಅದರ ಕೈಕೆಳಗೆ ಆಯಾ ರಾಜ್ಯ ಸರಕಾರಗಳು ಕಾರ್ಯನಿರ್ವಹಿಸುತ್ತವೆ.
ರಾಷ್ಟ್ರಾಧ್ಯಕ್ಷ ಅಥವಾ ರಾಷ್ಟ್ರಪತಿ ಎಂದು ಕರೆಯಲಾಗುವ ಹುದ್ದೆಯಲ್ಲಿರುವವರನ್ನು ಪ್ರಥಮ ಪ್ರಜೆ ಎಂದು ಗುರುತಿಸಲಾಗುತ್ತದೆ. ಭಾರತದ ಸಂವಿಧಾನದ ಪ್ರಕಾರ, ರಾಷ್ಟ್ರಾಧ್ಯಕ್ಷ ಹುದ್ದೆಯೇ ಪರಮೋಚ್ಚ ಹುದ್ದೆಯಾಗಿದ್ದರೂ, ದೇಶದಲ್ಲಿ ಅತಿ ಹೆಚ್ಚು ಅಧಿಕಾರ ಇರುವುದು ಪ್ರಧಾನ ಮಂತ್ರಿಯ ಕೈಯಲ್ಲಿ. ಲೋಕಸಭೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜಕೀಯ ಪಕ್ಷವು ಅಥವಾ ಮಿತ್ರಕೂಟವು ತಮ್ಮಲ್ಲೊಬ್ಬರನ್ನು ಪ್ರಧಾನಿಯಾಗಿ ಚುನಾಯಿಸುತ್ತಾರೆ, ಮತ್ತು ಸರಕಾರ ನಿಭಾಯಿಸಿ ದೇಶದ ಸಾರ್ವಭೌಮತೆ ಸಂರಕ್ಷಿಸಿ, ದೇಶವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯುವುದಕ್ಕಾಗಿ ಪ್ರಧಾನಿಯವರು ತಮ್ಮ ಮಂತ್ರಿಮಂಡಲವನ್ನು ಅಥವಾ ಸಂಪುಟವನ್ನು ಆರಿಸುತ್ತಾರೆ.
ಲೋಕಸಭೆ ಮತ್ತು ರಾಜ್ಯಸಭೆಗಳೆಂಬ ಎರಡು ಸದನಗಳನ್ನೊಳಗೊಂಡು ಭಾರತದ ಸಂಸತ್ ರಚನೆಯಾಗಿದೆ. ಲೋಕಸಭಾ ಸದಸ್ಯರನ್ನು ನೇರವಾಗಿ ಪ್ರಜೆಗಳೇ ಚುನಾಯಿಸಿದರೆ, ರಾಜ್ಯಸಭಾ ಸದಸ್ಯರನ್ನು ಪರೋಕ್ಷ ಚುನಾವಣೆಗಳ ಮೂಲಕ ಆರಿಸಲಾಗುತ್ತದೆ.