ಹೇಗಿತ್ತು ಹೇಗಾಯ್ತು ಗೊತ್ತಾ... ಈ ನಮ್ಮ ಭಾರತ!

ಇಂಡಿಯಾ ಎಂದು ಆಂಗ್ಲರಿಂದ ಕರೆಸಿಕೊಂಡ ಭಾರತ ಇರುವುದು ಏಷ್ಯಾ ಉಪಖಂಡದಲ್ಲಿ. ದಕ್ಷಿಣ ಏಷ್ಯಾದ ಪ್ರಧಾನ ದೇಶವೂ ಹೌದು. ಇದು ಚೀನಾದ ಬಳಿಕ ಜಗತ್ತಿನಲ್ಲೇ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಮತ್ತು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿದೆ.

ಶತಕೋಟಿಗೂ ಮಿಕ್ಕ ಜನಸಂಖ್ಯೆಯೊಂದಿಗೆ ಈ ದೇಶವು ವಿವಿಧತೆಯಲ್ಲಿ ಏಕತೆ ಮೆರೆಯುವ ರಾಷ್ಟ್ರವಾಗಿ ಖ್ಯಾತಿ ಪಡೆದಿದೆ. ವಿಭಿನ್ನ ಸಂಸ್ಕೃತಿಯ, ವಿಭಿನ್ನ ಭಾಷೆಗಳ ಜನರು ಇಲ್ಲಿ ನೆಲೆ ಕಂಡುಕೊಂಡಿದ್ದು, ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯನ್ನೂ ಹೊಂದಿದೆ.

ಭಾರತಕ್ಕೆ ಇಂಡಿಯಾ, ಹಿಂದೂಸ್ತಾನ, ಭಾರತವರ್ಷ, ಭರತ ಖಂಡ. ಜಂಬೂದ್ವೀಪ, ಆರ್ಯಾವರ್ತ ಮುಂತಾದ ಹೆಸರುಗಳು ಇತಿಹಾಸ, ಪುರಾಣಗಳಲ್ಲಿ ಕೇಳಿಬರುತ್ತವೆ.

ಭಾರತದಲ್ಲಿ ಸುಮಾರು 9 ಸಾವಿರ ವರ್ಷಗಳ ಹಿಂದೆ ಶಿಲಾಯುಗದ ಪಳೆಯುಳಿಕೆಗಳು ಕಂಡುಬಂದಿರುವುದು ಮಧ್ಯಪ್ರದೇಶದಲ್ಲಿ. ಸಿಂಧೂ ನಾಗರಿಕತೆಯು ಕ್ರಿಸ್ತಪೂರ್ವ 2600ರಿಂದ ಕ್ರಿಸ್ತಪೂರ್ವ 1900ರವರೆಗೆ ಕಂಡುಬಂದಿತ್ತು ಎಂದು ಇತಿಹಾಸ ಹೇಳುತ್ತದೆ.

ನಾಗರಿಕತೆ ಬೆಳೆದು ಧರ್ಮಗಳ ಉಗಮವಾಗಿ, ಕೆಲವು ಸ್ವತಂತ್ರ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಆ ಬಳಿಕ ಭಾರತದ ವಿಸ್ತಾರವನ್ನು ಒಂದು ಮಟ್ಟಿಗೆ ಒಗ್ಗೂಡಿಸಿದವರು ಮೌರ್ಯರು ಎಂದು ಹೇಳಬಹುದು. ಆ ಬಳಿಕ ಗುಪ್ತರ ಸುವರ್ಣ ಯುಗ ಕಂಡುಬಂತು.

ಎರಡನೇ ಶತಮಾನದಲ್ಲಿ ಮುಸಲ್ಮಾನ ದೊರೆಗಳು ಭಾರತಕ್ಕೆ ದಂಡೆತ್ತಿ ಬಂದು ಆಳ್ವಿಕೆ ನಡೆಸಿದರು. ದಿಲ್ಲಿ ಸುಲ್ತಾನರು, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ... ಹೀಗೆ ಆಳ್ವಿಕೆ ಸಾಗಿದ ಬಳಿಕ 17ನೇ ಶತಮಾನದಲ್ಲಿ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷರು ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಆಗಮಿಸಿ ಇಲ್ಲೇ ತಳವೂರಿದರು. ಹಲವು ಪ್ರದೇಶಗಳನ್ನು ವಶಪಡಿಸಿಕೊಳ್ಳತೊಡಗಿದ ಬಳಿಕ, ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಮೂಲಕ ಪ್ರಬಲವಾಗಿ ಬೆಳೆದು, ದೇಶವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು. 1857ರಲ್ಲಿ ಹಲವು ರಾಜ್ಯಗಳು ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ ಬಳಿಕ, ಬ್ರಿಟಿಷರು ತಮ್ಮ ಕಪಿಮುಷ್ಟಿ ಬಲಗೊಳಿಸಿದರು.

ನಂತರ ಆತ್ಮಾಭಿಮಾನದೊಂದಿಗೆ ಭಾರತೀಯರು ಅವಿರತವಾಗಿ ಚಳವಳಿ ನಡೆಸಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆಯಲು ನೆರವಾದರು. ಇದಕ್ಕಾಗಿ ಹಲವರು ಹುತಾತ್ಮರಾಗಿ ಅಮರತ್ವ ಪಡೆದರೆ, ಬ್ರಿಟಿಷರು ರಕ್ತಪಾತವನ್ನೇ ನಡೆಸಿದ್ದರು. ಸ್ವಾತಂತ್ರ್ಯ ಬಂದ ತಕ್ಷಣವೇ ಭಾರತವು ವಿಭಜನೆಯಾಗಿ ಪಾಕಿಸ್ತಾನವೆಂಬ ಮತ್ತೊಂದು ದೇಶ ಹುಟ್ಟಿಕೊಂಡಿತು.

1950ರ ಜನವರಿ 26ರಂದು ದೇಶವು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಣೆಯಾಗಿ ಭಾರತೀಯ ಗಣರಾಜ್ಯವಾಗಿ ರೂಪುಗೊಂಡಿತು. ಅಂದಿನಿಂದ ಪ್ರಜೆಗಳಿಂದಲೇ ಚುನಾಯಿತವಾದ ಸರಕಾರಗಳು ಈ ದೇಶವನ್ನು ಆಳುತ್ತಾ, ಇಂದು ವಿಶ್ವಮಟ್ಟದಲ್ಲಿ ಎಲ್ಲರೂ ಕಣ್ತೆರೆದು ನೋಡುವಂತೆ ಮಾಡಿವೆ. ಈಗ ನಮ್ಮ ಹೆಮ್ಮೆಯ ಭಾರತವು ವಿಶ್ವಶಕ್ತಿಯಾಗಿ ಬೆಳೆದಿದ್ದು, ತಂತ್ರಜ್ಞಾನ, ಆರ್ಥಿಕ ಕ್ಷೇತ್ರಗಳಲ್ಲಿ ಸಿದ್ಧಿ ಮತ್ತು ಪ್ರಸಿದ್ಧಿ ಸಾಧಿಸಿದೆ.

ವೆಬ್ದುನಿಯಾವನ್ನು ಓದಿ