ಕಾಂಗರೂಗಳ ಸೊಕ್ಕು ಮುರಿದು ಮೆರೆದ ಭಾರತ

ಭುವನ್ ಪುದುವೆಟ್ಟು
2008ರ ವರ್ಷ ಭಾರತಕ್ಕೆ ಕ್ರೀಡೆಯಲ್ಲಿ ಸುಗ್ಗಿಯೆಂದೇ ಹೇಳಬಹುದು. ಅದು ಕ್ರಿಕೆಟ್ ಅಥವಾ ಇನ್ನ್ಯಾವುದೇ ಕ್ರೀಡೆಯಾಗಿರಬಹುದು. ಪಡೆದ ಬಹುಮಾನಗಳಿಗೆ ಗಿಟ್ಟಿಸಿದ ಹೆಗ್ಗಳಿಕೆಗಳಿ ಅಗಣ್ಯ - ರಾಷ್ಟ್ರೀಯ ಕ್ರೀಡೆ ಹಾಕಿಯೊಂದನ್ನು ಹೊರತುಪಡಿಸಿ.

ಕ್ರಿಕೆಟಿನಲ್ಲಿ ದಿಗ್ಗಜ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸಿ, ಇಂಗ್ಲೆಂಡಿಗೆ ವರ್ಷಾಂತ್ಯ ಕಹಿ ನೆನಪುಗಳನ್ನು ಉಣಬಡಿಸಿ ನಂಬರ್ ವನ್ ಸ್ಥಾನದತ್ತ ಹೆಜ್ಜೆ, ಸಚಿನ್‌ ಲಾರಾ ದಾಖಲೆಯನ್ನು ಮೀರಿಸಿದ್ದು, ಐಪಿಎಲ್ ಟ್ವೆಂಟಿ-20 ಪಂದ್ಯಗಳು ಹುಚ್ಚೆಬ್ಬಿಸಿದ್ದು ಪ್ರಮುಖ ಉತ್ತಮ ಬೆಳವಣಿಗೆಗಳು. ಅನಿಲ್ ಕುಂಬ್ಳೆ ಮತ್ತು ಸೌರವ್ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದು, ಹರಭಜನ್-ಸೈಮಂಡ್ಸ್ ಮಂಗನಾಟ ವಿವಾದ, ಸಚಿನ್ ಬಗ್ಗೆ ಹೇಡನ್ ಹೇಳಿಕೆಗಳು, ಸೆಹ್ವಾಗ್-ಮುನಾಫ್, ಗಂಭೀರ್-ವಾಟ್ಸನ್ ವಿವಾದ ಮುಂತಾದುವು ಕಹಿ ನೆನಪುಗಳನ್ನು ಕೊಟ್ಟವುಗಳು. ವರ್ಷವಿಡೀ ಕಂಡು-ಕೇಳಿ-ಬಿಟ್ಟವುಗಳ ಬಗ್ಗೆ ಒಂದು ಸುತ್ತಿನ ಪಕ್ಷಿನೋಟ ಇಲ್ಲಿದೆ.
PTI

ಸೌರವ್ ಗಂಗೂಲಿ ಬಾಯ್ ಬಾಯ್...
ಭಾರತೀಯ ಕ್ರಿಕೆಟ್ ತಂಡ ಕಂಡ ಧೀಮಂತ ನಾಯಕ ಎಂಬ ಬಿರುದು ಇವರಿಂದ ಯಾವತ್ತೂ ಅಳಿಸಿ ಹೋಗದಷ್ಟು ಅಚ್ಚುಗಳನ್ನು ಕ್ರೀಸಿನಲ್ಲೇ ಗಂಗೂಲಿ ಉಳಿಸಿ ಹೋಗಿದ್ದಾರೆ. ಇವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡದ್ದು ಆಸ್ಟ್ರೇಲಿಯಾದೆದುರು 2008ರ ನವೆಂಬರ್ 6ರಂದು. 36ರ ಹರೆಯದ ಗಂಗೂಲಿ ಒಟ್ಟು 113 ಟೆಸ್ಟ್ ಆಡಿದ್ದು 7,212 ರನ್ ದಾಖಲಿಸಿದ್ದಾರೆ. 16 ಶತಕ, 35 ಅರ್ಧ ಶತಕ ಇವರ ಹೆಸರಿನಲ್ಲಿದೆ. 311 ಏಕದಿನ ಪಂದ್ಯಗಳಲ್ಲಿ 22 ಶತಕ ಹಾಗೂ 72 ಅರ್ಧ ಶತಕ ಇವರು ದಾಖಲಿಸಿದ್ದರು.

ಅನಿಲ್ ಕುಂಬ್ಳೆ ನಿವೃತ್ತಿ...
ಅಭಿಮಾನಿ ಗೆಳೆಯರಿಂದ ಜಂಬೋ ಎಂದೇ ಕರೆಸಲ್ಪಡುತ್ತಿದ್ದ ಅಚ್ಚ ಕನ್ನಡಿಗ ಸ್ವಚ್ಛ ಕ್ರಿಕೆಟಿಗ ಅನಿಲ್ ಕುಂಬ್ಳೆ. ಟೀಮ್ ಇಂಡಿಯಾದಲ್ಲಿ ಬೌಲರ್ ಹಾಗೂ ಕಪ್ತಾನನಾಗಿ ಪ್ರಮುಖ ಪಾತ್ರ ವಹಿಸಿದ್ದವರು. ಸ್ಪಿನ್ ಬೌಲಿಂಗ್‌ನಲ್ಲಿ ಇವರಷ್ಟು ಮೆರೆದವರು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಯಾರೂ ಇಲ್ಲ. ಮ‌ೂಲತಃ ಕಾಸರಗೋಡು ತಾಲೂಕಿನವರಾದ ಇವರು ಒಟ್ಟು 132 ಟೆಸ್ಟ್ ಹಾಗೂ 271 ಏಕದಿನಗಳಲ್ಲಿ ಆಡಿದ್ದರು. ಟೆಸ್ಟ್‌ನಲ್ಲಿ 619 ವಿಕೆಟ್ ಕೀಳುವ ಮ‌ೂಲಕ ಅತಿ ಹೆಚ್ಚು ವಿಕೆಟ್ ಕಿತ್ತವರ ಸಾಲಿನಲ್ಲಿ ಮ‌ೂರನೇ ಸ್ಥಾನ ಇವರದ್ದು. ಏಕದಿನದಲ್ಲಿ 337 ವಿಕೆಟ್ ಪಡೆದಿದ್ದರು.
PTI

ಆಡಂ ಗಿಲ್‌ಕ್ರಿಸ್ಟ್ ನಿವೃತ್ತಿ...
37ರ ಹರೆಯದ ಆಸೀಸ್ ಕ್ರಿಕೆಟಿಗ 2008ರ ಜನವರಿ 26ರಂದು ತಾನು ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಘೋಷಿಸಿದರು. ಅವರು ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದು ಭಾರತದ ವಿರುದ್ಧ 2008ರ ಮಾರ್ಚ್ ನಾಲ್ಕರಂದು. ಒಟ್ಟು 287 ಏಕದಿನ ಪಂದ್ಯಗಳನ್ನಾಡಿರುವ ಇವರು 9619 ರನ್ ಕಲೆ ಹಾಕಿದ್ದರು. ಗರಿಷ್ಠ 172 ರನ್, 16 ಶತಕ ಇತರಲ್ಲಿ ಸೇರಿತ್ತು. ಅದೇ ರೀತಿ 96 ಟೆಸ್ಟ್ ಆಡಿದ್ದ ಇವರು 5570 ರನ್ ಪೇರಿಸಿದ್ದರು. ಅದರಲ್ಲಿ ಅಜೇಯ 204 ಗರಿಷ್ಠ ರನ್ ಹಾಗೂ 17 ಶತಕ ದಾಖಲಿಸಿದ್ದರು. ತನ್ನ ಬ್ಯಾಟಿಂಗ್ ಸರಾಸರಿಯನ್ನು 40ರ ಆಸುಪಾಸಿನಲ್ಲಿ ಕೊಂಡೊಯ್ದದ್ದು ಅವರ ವಿಶೇಷತೆ.

ಸ್ಟೀಫನ್ ಫ್ಲೆಮಿಂಗ್ ಮುಕ್ತಾಯ...
ನ್ಯೂಜಿಲ್ಯಾಂಡಿನ ಈ ಖ್ಯಾತ ಕ್ರಿಕೆಟಿಗ 2008ರಲ್ಲಿ ನಿವೃತ್ತಿಯಾದ ಪ್ರಮುಖರಲ್ಲಿ ಒಬ್ಬರು. ಹಲವು ವರ್ಷಗಳ ಕಾಲ ತಂಡದ ನಾಯಕತ್ವ ವಹಿಸಿ ಯಶಸ್ವಿಯಾಗಿದ್ದ ಇವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು ಇಂಗ್ಲೆಂಡ್ ಎದುರು 2008ರ ಮಾರ್ಚ್ 22ರಂದು. 111 ಟೆಸ್ಟ್ ಹಾಗೂ 280 ಏಕದಿನ ಪಂದ್ಯಗಳನ್ನಾಡಿರುವ ಇವರು ಕ್ರಮವಾಗಿ 9 ಹಾಗೂ 8 ಶತಕಗಳನ್ನು ಕೂಡ ಸಿಡಿಸಿದ್ದರು. ಬ್ಯಾಟಿಂಗ್ ಸರಾಸರಿ 35ರ ಆಸುಪಾಸಿನಲ್ಲಿತ್ತು. ಅತಿ ಹೆಚ್ಚು ಅಂದರೆ 218 ಏಕದಿನ ಪಂದ್ಯಗಳಲ್ಲಿ ಕಪ್ತಾನನಾಗಿದ್ದ ದಾಖಲೆ ಇವರ ಹೆಸರಿನಲ್ಲಿದೆ.

PTI
ಸಚಿನ್ ತೆಂಡೂಲ್ಕರ್ ದಾಖಲೆ...
ಈ ಮಾಸ್ಟರ್ ಬ್ಲಾಸ್ಟರ್ ದಾಖಲೆಗಳ ಬಗ್ಗೆ ಹೇಳಿದಷ್ಟು ಮುಗಿಯದು. ಆದರೂ ಈ ವರ್ಷದ ಪ್ರಮುಖ ದಾಖಲೆಯೆಂದರೆ ವೆಸ್ಟ್‌ಇಂಡೀಸ್‌ ಆಟಗಾರ ಬ್ರಿಯಾನ್ ಲಾರಾ ಅವರು ಟೆಸ್ಟ್ ಕ್ರಿಕೆಟಿನಲ್ಲಿ ದಾಖಲಿಸಿದ್ದ ಮೊತ್ತವನ್ನು ಮೀರಿಸಿದ್ದು. ಅಕ್ಟೋಬರ್ 17ರಂದು ಈ ಸಾಧನೆ ಮಾಡುವ ಮ‌ೂಲಕ ಸಚಿನ್ ಟೆಸ್ಟ್ ಮತ್ತು ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಈ ದಾಖಲೆ ಮಾಡಿದ್ದು ಆಸ್ಟ್ರೇಲಿಯಾದೆದುರು ಮೊಹಾಲಿ ಕ್ರೀಡಾಂಗಣದಲ್ಲಿ. ಈ ವರ್ಷ ಅವರು ಏಕದಿನದಲ್ಲಿ 16 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದರು. ಅವರ ಪುರಸ್ಕಾರಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಭಾರತ ಸರಕಾರದ ಪದ್ಮ ವಿಭೂಷಣ ಪ್ರಶಸ್ತಿ. ಇದನ್ನು 2008ರ ಮೇ 5ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರದಾನ ಮಾಡಿದರು.
PTI

ಭಜ್ಜಿ-ಸೈಮಂಡ್ಸ್ ಮಂಗನಾಟ ವಿವಾದ...
2008ರಲ್ಲಿ ಕ್ರಿಕೆಟಿನಲ್ಲಿ ಅತಿ ದೊಡ್ಡ ವಿವಾದವೆಂದರೆ ಮಂಗನಾಟ ಪ್ರಕರಣ. ಸಿಡ್ನಿಯಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ-ಭಾರತ ನಡುವಿನ ಟೆಸ್ಟ್‌ ಪಂದ್ಯವೊಂದರಲ್ಲಿ ಜನವರಿ 7ರಂದು ಆಂಡ್ರ್ಯೂ ಸೈಮಂಡ್ಸ್‌ರನ್ನು ಹರಭಜನ್ ಸಿಂಗ್ ಜನಾಂಗೀಯ ನಿಂದನೆ ಮಾಡಿದರೆಂಬುದು ದೂರು. ಮಂಗನಾಟ ಪ್ರಕರಣ ಬಿಸಿಸಿಐಯನ್ನೂ ಮುಜುಗರಕ್ಕೀಡು ಮಾಡಿತ್ತು. ತನ್ನ ಪ್ರಾಬಲ್ಯವನ್ನು ಐಸಿಸಿಯಲ್ಲೂ ತೋರಿಸಿದ ಭಾರತೀಯ ಕ್ರಿಕೆಟ್ ಮಂಡಳಿ ಹರಭಜನ್ ರಕ್ಷಣೆಗೆ ನಿಂತಿತ್ತು. ಕೊನೆಗೂ ಐಸಿಸಿ ಭಜ್ಜಿ ಮೇಲೆ ಹೇರಿದ್ದ ನಿಷೇಧವನ್ನು ವಾಪಸು ತೆಗೆದುಕೊಂಡು, ಇದಕ್ಕೆ ಯಾವುದೇ ಪುರಾವೆಯಿಲ್ಲ ಎಂಬ ತತ್ವಕ್ಕೆ ಬದ್ಧವಾಯಿತು.

ಹರಭಜನ್ ಸಾಧನೆ...
ವಿವಾದಗಳನ್ನು ಹೊರತು ಪಡಿಸಿ ನೋಡಿದಾಗ ಹರಭಜನ್ ಸಾಧನೆಯೇನೂ ಕ್ಷುಲ್ಲಕವಲ್ಲ. ಈ ವರ್ಷ ತನ್ನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 300 ವಿಕೆಟ್ ಪಡೆದ ದಾಖಲೆಯನ್ನೂ ಬರೆದಿದ್ದಾರೆ. ನವೆಂಬರ್ 7ರಂದು ಆಸ್ಟ್ಟೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಕಿ ಪಾಂಟಿಂಗ್ ವಿಕೆಟ್ ಪಡೆಯುವ ಮ‌ೂಲಕ 300 ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್ ಪಡೆದ ಭಾರತದ ಮ‌ೂರನೇ ಹಾಗೂ ವಿಶ್ವದ 22ನೇ ಕ್ರಿಕೆಟಿಗ ಎಂಬ ಖ್ಯಾತಿಗೊಳಗಾದರು. ಜತೆಗೆ ತಾಯ್ನೆಲದಲ್ಲೇ 200 ವಿಕೆಟ್ ಪಡೆದ ದಾಖಲೆ ಕೂಡ ಅಂದೇ ನಡೆಯಿತು.
PTI

ಬೆರಳೆತ್ತಲು ಕಷ್ಟಪಟ್ಟ ಸ್ಟೀವ್ ಬಕ್ನರ್...
2008ರ ಆಸ್ಟ್ರೇಲಿಯಾ-ಭಾರತ ನಡುವಿನ ಸಿಡ್ನಿ ಟೆಸ್ಟ್‌ನಲ್ಲಿ ವಿವಾದಾಸ್ಪದ ತೀರ್ಪುಗಳನ್ನು ನೀಡಿ ಭಾರತೀಯರಿಂದ ಟೀಕೆಗೊಳಗಾಗಿದ್ದ ಬಕ್ನರ್, ನಂತರ ಸರಣಿಯಿಂದ ಕಿತ್ತೆಸೆಯಲ್ಪಟ್ಟಿದ್ದರು. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್‌ರಿಗೆ ಎರಡು ಬಾರಿ ಔಟಾದಾಗಲೂ ತೀರ್ಪು ಕೊಡದಿದ್ದ ಬಕ್ನರ್, ಭಾರತದ ರಾಹುಲ್ ದ್ರಾವಿಡ್‌ಗೆ ವಿನಾ ಕಾರಣ ಔಟ್ ತೀರ್ಪು ಕೊಟ್ಟ ನಂತರ ಭಾರತೀಯ ಕ್ರಿಕೆಟ್ ಮಂಡಳಿ ಸಿಡಿದೆದ್ದಿತ್ತು. ಪ್ರಕರಣ ಬಿಸಿಯೇರುತ್ತಿರುವುದನ್ನು ಕಂಡ ಐಸಿಸಿ ಬಕ್ನರ್ ಅವರ ಬದಲಿಗೆ ಬಿಲ್ಲಿ ಬೌಡೆನ್ ಅವರನ್ನು ಮುಂದಿನ ಪಂದ್ಯಗಳಿಗೆ ನಿಯೋಜಿಸಿತ್ತು.

ಶ್ರೀಶಾಂತ್ ಕಪಾಳಮೋಕ್ಷ ಪ್ರಕರಣ...
ಐಪಿಎಲ್ ಪಂದ್ಯವೊಂದರಲ್ಲಿ ಬೌಲರ್ ಶ್ರೀಕಾಂತ್ ಕಪಾಳಕ್ಕೆ ಬಾರಿಸಿದ್ದು ಮತ್ತೊಂದು ಭಜ್ಜಿಯ ವಿವಾದ. 2008ರ ಏಪ್ರಿಲ್‌ನಲ್ಲಿ ಈ ಪ್ರಕರಣ ಬಿಸಿಸಿಐ ಕಟಕಟೆಯೇರಿ ಭಾರೀ ಸುದ್ದಿ ಮಾಡಿತ್ತು. ಹರಭಜನ್ ಕ್ಷಮೆ ಕೇಳುವುದರ ಜತೆ ಐದು ಏಕದಿನ ಪಂದ್ಯಗಳ ನಿಷೇಧ ಹೇರಲಾಯಿತು. ಮುಂದೆ ಇಂತಹ ವರ್ತನೆ ಪುನರಾವರ್ತನೆಯಾದಲ್ಲಿ ಜೀವಾವಧಿ ನಿಷೇಧ ಹೇರುವುದಾಗಿ ಬೆದರಿಕೆ ಕೂಡ ಭಜ್ಜಿಗೆ ಬಂತು.
PTI

ಟ್ವೆಂಟಿ-20 ಚಾಂಪಿಯನ್...
ಕ್ರಿಕೆಟ್ ಜಗತ್ತಿನ ಹೊಸ ಆವಿಷ್ಕಾರ ಟ್ವೆಂಟಿ-20ಯ ಉದ್ಘಾಟನಾ ವಿಶ್ವಕಪ್‌ನ್ನು ಭಾರತ ಒಲಿಸಿಕೊಂಡದ್ದು 2008ರಲ್ಲಿ ಭಾರತದ ಮತ್ತೊಂದು ಸಾಧನೆ. ಹಳಬರನ್ನು ಬದಿಗಿಕ್ಕಿ ಯುವ ಪಡೆಯನ್ನು ಕಣಕ್ಕಿಳಿಸಿದ ಭಾರತ ಅದರಲ್ಲಿ ಯಶಸ್ಸನ್ನೂ ಕಂಡಿತ್ತು. ಒಂದು ಓವರಿನ ಎಲ್ಲಾ ಎಸೆತಗಳನ್ನು ಸಿಕ್ಸರ್ ಬಾರಿಸುವ ಮ‌ೂಲಕ ಯುವರಾಜ್ ಸಿಂಗ್, ಕೊನೆಯ ಓವರಿನಲ್ಲಿ ಜಯ ದೊರಕಿಸಿಕೊಟ್ಟ ಜೋಗಿಂದರ್ ಶರ್ಮಾ ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕಾಣಿಕೆಯ ಮ‌ೂಲಕ ಕ್ರಿಕೆಟ್ ಜಗತ್ತನ್ನು ಹುಚ್ಚೆಬ್ಬಿಸುವಂತೆ ಮಾಡಿದ್ದು 2008ರ ಮಾರ್ಚ್‌ ತಿಂಗಳ ಫೈನಲ್ ಪಂದ್ಯದಲ್ಲಿ. ಬಿಸಿಸಿಐ ಕೂಡ ಚಾಂಪಿಯನ್ ತಂಡಕ್ಕೆ ಭಾರೀ ಬಹುಮಾನವನ್ನೇ ಘೋಷಿಸಿತು. ಜೊತೆಗೆ ಅದ್ಧೂರಿಯ ಸ್ವಾಗತವನ್ನು ನೀಡಲಾಗಿತ್ತು.

ಕಿರಿಯರ ವಿಶ್ವಕಪ್...
19ರೊಳಗಿನವರ ವಿಶ್ವಕಪ್ ಭಾರತದ ಪಾಲಾಗಿದ್ದು 2008ರ ವಿಶೇಷಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ. 16 ತಂಡಗಳು ಭಾಗವಹಿಸಿದ್ದ ಈ ವಿಶ್ವಕಪ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾದೆದುರು 12 ರನ್‌ಗಳ ಜಯ ಸಾಧಿಸಿತ್ತು. 2008ರ ಮಾರ್ಚ್ 2ರಂದು ಮಲೇಷ್ಯಾದ ಕೌಲಲಂಪುರದಲ್ಲಿ ಈ ಫೈನಲ್ ಪಂದ್ಯ ನಡೆದಿತ್ತು. ಆ ಮ‌‍ೂಲಕ ಬೆಳಕಿಗೆ ಬಂದ 19ರೊಳಗಿನ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಂತರ ಐಪಿಎಲ್ ತಂಡಕ್ಕೂ ಆಯ್ಕೆಯಾಗಿದ್ದರು. ಕಿರಿಯರ ವಿಶ್ವಕಪ್ ಗೆದ್ದದ್ದಕ್ಕಾಗಿ ಪ್ರತಿ ಆಟಗಾರರಿಗೂ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
PTI

1983ರ ವಿಶ್ವಕಪ್‌ಕ್ಕೆ ರಜತ ಮಹೋತ್ಸವ...
1983ರಲ್ಲಿ ಭಾರತಕ್ಕೆ ವಿಶ್ವ ಕಪ್ ಗೆದ್ದು ತಂದುಕೊಟ್ಟ ಕಪಿಲ್ ದೇವ್ ತಂಡದ ಸದಸ್ಯರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು 2008ರ ಜೂನ್ 22ರಂದು ರಾತ್ರಿ ದೆಹಲಿಯಲ್ಲಿ. ಅಂದಿನ ಟೀಮ್ ಇಂಡಿಯಾ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್‌ಗೆ ಸವಾಲೊಡ್ಡಿ, ಲಾರ್ಡ್ಸ್‌ನಲ್ಲಿ 1983ರ ಜೂನ್ 25ರಂದು ನಡೆದ ಫೈನಲ್ ಪಂದ್ಯದಲ್ಲಿ ಪ್ರುಡೆನ್ಷಿಯಲ್ ವಿಶ್ವಕಪ್ ಕಿರೀಟ ಧರಿಸಿತ್ತು. ಈ ದಿಗ್ವಿಜಯದ 25ನೇ ವರ್ಷದ ವರ್ಷಾಚಣೆಯಲ್ಲಿ ಅಂದಿನ ತಂಡದಲ್ಲಿದ್ದ 14 ಮಂದಿ ಕ್ರಿಕೆಟಿಗರು ಮತ್ತು ಅಂದಿನ ಮ್ಯಾನೇಜರ್ ಪಿ.ಆರ್.ಮಾನ್‌ಸಿಂಗ್ ಅವರನ್ನು ದೆಹಲಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಭಾವ ತುಂಬಿ ಮಾತನಾಡಿದ ವಿಶ್ವವಿಜೇತ ತಂಡದ ನಾಯಕ ಕಪಿಲ್ ದೇವ್ ಅವರು, ಅಂದಿನ ವಿಜಯಕ್ಕೆ ತನ್ನೆಲ್ಲಾ ತಂಡಸದಸ್ಯರೇ ಕಾರಣರಾಗಿದ್ದು, ಅವರ ಒಗ್ಗಟ್ಟಿನ ಪರಿಶ್ರಮವನ್ನು ನೆನಪಿಸಿಕೊಂಡರು.

ಅಬ್ಬರದ ಐಪಿಎಲ್...
PTI
ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಪ್ರತಿಸ್ಫರ್ಧಿಯಾಗಿ ಹುಟ್ಟಿಕೊಂಡ ಬಿಸಿಸಿಐ ಪ್ರಾಯೋಜಿತ ಇಂಡಿಯನ್ ಪ್ರೀಮಿಯರ್ ಲೀಗ್ ಪೆಬ್ರವರಿಯಲ್ಲಿ ಕ್ರಿಕೆಟ್ ಆಟಗಾರರನ್ನು ಹರಾಜಿಗೆ ಹಾಕುವ ಪದ್ಧತಿಯನ್ನೂ ಹುಟ್ಟು ಹಾಕಿತು. ಇಲ್ಲಿ ಅತೀ ಹೆಚ್ಚು ರೇಟಿಗೆ ಮಾರಾಟವಾದವರು ಮಹೇಂದ್ರ ಸಿಂಗ್ ಧೋನಿ. ಅವರ ರೇಟು ಒಂದೂವರೆ ಕೋಟಿ; ಪಡೆದುಕೊಂಡ ತಂಡ ಚೆನ್ನೈ ಸೂಪರ್‌ಕಿಂಗ್ಸ್. ನಂತರದ ಸ್ಥಾನ ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್. ಇಶಾಂತ್ ಶರ್ಮಾ, ಇರ್ಫಾನ್ ಪಠಾಣ್, ಬ್ರೆಟ್ ಲೀ ಕೂಡ 9 ಲಕ್ಷಕ್ಕೆ ಹರಾಜಾದರು. ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತಕ್ಕೆ ಅಂತಿಮ ಓವರಿನಲ್ಲಿ ಜಯ ತಂದುಕೊಟ್ಟ ಜೋಗಿಂದರ್ ಶರ್ಮಾ ಕೇವಲ ಒಂದು ಲಕ್ಷಕ್ಕೆ ಮಾರಾಟವಾಗಿದ್ದರು.

ಐಪಿಎಲ್‌ನ ಮೊದಲ ಪಂದ್ಯ ನಡೆದದ್ದು ಏಪ್ರಿಲ್ 18ರಂದು. ಸರಣಿ ಕೊನೆಯಾದದ್ದು ಜೂನ್ 1ರಂದು. ಮುಂಬೈ ಇಂಡಿಯನ್ಸ್ (ಮುಖೇಶ್ ಅಂಬಾನಿ), ಬೆಂಗಳೂರು ರಾಯಲ್ ಚಾಲೆಂಜರ್ಸ್ (ವಿಜಯ ಮಲ್ಯ), ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ (ಡೆಕ್ಕನ್ ಕ್ರಾನಿಕಲ್), ಚೆನ್ನೈ ಸೂಪರ್‌ಕಿಂಗ್ಸ್ (ಇಂಡಿಯನ್ ಸಿಮೆಂಟ್ಸ್- ಎನ್. ಶ್ರೀನಿವಾಸನ್), ಡೆಲ್ಲಿ ಡೇರ್‌ಡೆವಿಲ್ಸ್ (ಜಿಎಂಆರ್ ಹೋಲ್ಡಿಂಗ್ಸ್), ಕಿಂಗ್ಸ್ XI ಪಂಜಾಬ್ (ಪ್ರೀತಿ ಝಿಂಟಾ, ನೆಸ್ ವಾಡಿಯಾ), ಕೊಲ್ಕತ್ತಾ ನೈಟ್ ರೈಡರ್ಸ್ (ಶಾರೂಖ್ ಖಾನ್, ಜೂಹಿ ಚಾವ್ಲಾ), ರಾಜಸ್ತಾನ್ ರಾಯಲ್ಸ್ (ಎ.ಆರ್. ಝಾ) ಎಂಬ ಒಟ್ಟು ಎಂಟು ತಂಡಗಳನ್ನು ಐಪಿಎಲ್ ಹುಟ್ಟು ಹಾಕಿತ್ತು. ಇಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ತಂಡ ಮುಂಬೈ ರೈಡರ್ಸ್. ಇದು 111.9 ಮಿಲಿಯನ್ ಡಾಲರ್‌ಗೆ ಮಾರಾಟವಾಗಿತ್ತು. ಅತಿ ಕಡಿಮೆ ರಾಜಸ್ತಾನ್ ರಾಯಲ್ಸ್(67 ಮಿಲಿಯನ್ ಡಾಲರ್).

ಇಲ್ಲಿ ಚಾಂಪಿಯನ್ ಆದ ತಂಡ ರಾಜಸ್ತಾನ್ ರಾಯಲ್ಸ್. ರನ್ನರ್ ಅಪ್ ಎನಿಸಿದ್ದು ಚೆನ್ನೈ ಸೂಪರ್ ಕಿಂಗ್ಸ್. ಕಿಂಗ್ಸ್ XI ಪಂಜಾಬ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಸೆಮಿಫೈನಲ್ ಪ್ರವೇಶಿಸಿದ್ದವು.

ಸಪ್ಪೆಯಾದ ಐಸಿಎಲ್...
ಎಸ್ಸೆಲ್ ಗ್ರೂಪ್ ಪ್ರೈವೆಟ್ ಲಿಮಿಟೆಡ್ ಸ್ಥಾಪಿಸಿದ ಇಂಡಿಯನ್ ಕ್ರಿಕೆಟ್ ಲೀಗ್ ಬಿಸಿಸಿಐಯ ಐಪಿಎಲ್ ಸ್ಥಾಪನೆಯಾಗುವುದಕ್ಕಿಂತ ಮೊದಲೇ ಅಂದರೆ 2007ರಲ್ಲೇ ಹುಟ್ಟಿಕೊಂಡಿತ್ತು. ಮೊದಲು ಆರು ತಂಡಗಳನ್ನು ಹೊಂದಿದ್ದ ಐಸಿಎಲ್ ಈ ವರ್ಷ ಒಂಬತ್ತು ತಂಡಗಳೊಂದಿಗೆ ಆಡುತ್ತಿದೆ. ಒಂದು ಕಾಲದ ಕ್ರಿಕೆಟ್ ಹೀರೋಗಳಾದ ಕಪಿಲ್ ದೇವ್, ಕಿರಣ್ ಮೋರೆ, ಟೋನಿ ಗ್ರೆಗ್, ಡೀನ್ ಜೋನ್ಸ್ ಮುಂತಾದವರು ಐಸಿಎಲ್ ಕ್ರಿಕೆಟ್ ಮಂಡಳಿಯಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಆದರೂ ಐಪಿಎಲ್ ಅಬ್ಬರದೆದುರು ಐಸಿಎಲ್ ಕುಬ್ಜವಾದಂತಾಗಿದೆ. ತನ್ನ ಹಣ ಬಲದಿಂದ ಮೆರೆಯುತ್ತಿರುವ ಬಿಸಿಸಿಐ ಐಸಿಎಲ್‌ನ್ನು ಮಟ್ಟ ಹಾಕಲು ಇನ್ನಿಲ್ಲದ ಯತ್ನ ನಡೆಸುತ್ತಿದ್ದು, ಐಸಿಸಿಯಲ್ಲೂ ತನ್ನ ಪ್ರಭಾವ ಬೀರಿ ರಾಷ್ಟ್ರೀಯ ತಂಡದ ಯಾವುದೇ ಆಟಗಾರ ಐಸಿಎಲ್‌ನಲ್ಲಿ ಆಡದಂತೆ ತಡೆ ಹಿಡಿಯುವಲ್ಲಿ ಯಶಸ್ಸು ಕಂಡಿದೆ.
PTI

ಹೇಡನ್ ಪುಸ್ತಕ ಗದ್ದಲ...
ತನ್ನ ಆತ್ಮಚರಿತ್ರೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಗ್ಗೆ ಇಲ್ಲ ಸಲ್ಲದ ಬರಹಗಳನ್ನು ಬರೆದು ಅವಹೇಳನಕ್ಕೆ ಗುರಿಯಾದವರು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್. ಮಂಗನಾಟ ಪ್ರಕರಣದ ಬಗ್ಗೆ ಬರೆಯುತ್ತಾ ಸಚಿನ್‌ರನ್ನು ಹೀಗಳೆಯಲಾಯಿತು. ಸಚಿನ್ ಕ್ರೀಡಾಸ್ಫೂರ್ತಿ ಬಗ್ಗೆಯೂ ಪ್ರಶ್ನಿಸಿ ನಂತರ ಕ್ಷಮೆ ಕೇಳಿದ ಘಟನೆಯೂ ಇದರ ನಡವೆ ನಡೆದು ಹೋಯಿತು. ಪುಸ್ತಕ ಮಾರಾಟಕ್ಕೆ ಆಸ್ಟ್ರೇಲಿಯನ್ ಕ್ರಿಕೆಟಿಗರು ಈ ರೀತಿ ಮಾಡುತ್ತಿದ್ದಾರೆ ಎಂಬ ಉತ್ತರಗಳು ಹಿರಿಯ ಕ್ರಿಕೆಟಿರಿಂದ ಬಂದ ನಂತರ ಎಲ್ಲವೂ ತಣ್ಣಗಾಯಿತು.

ಆಸೀಸ್ ಸೊಕ್ಕು ಮುರಿದ ಭಾರತ...
ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಮಂಗನಾಟ ಪ್ರಕರಣದಿಂದ ಭಾರತಕ್ಕೆ ಸಾಕಷ್ಟು ಲಾಭವೇ ಆಗಿತ್ತು. ಆ ಟೆಸ್ಟ್ ಸರಣಿಯಲ್ಲಿ ವಿಲನ್ ಆಗಿ ಕಾಡಿದ್ದ ಅಂಪೈರ್ ಸ್ಟೀವ್ ಬಕ್ನರ್ ಅವರನ್ನು ಕೂಡ ಅರ್ಧದಲ್ಲೇ ಐಸಿಸಿ ಕಿತ್ತು ಹಾಕಿತ್ತು. ಸರಣಿ ಸೋತರೂ ಆಸೀಸ್‌ಗೆ ಭಾರತ ನಡುಕ ಹುಟ್ಟಿಸಿತ್ತು. ಜತೆಗೆ ತನ್ನ ಸತತ 17ನೇ ವಿಜಯದ ಸರಪಳಿಯನ್ನು ಕೂಡ ಮುರಿದು ಹಾಕಿತ್ತು. ಈ ಹಿಂದೆ ಕೂಡ ಆಸೀಸ್‌ನ ಸತತ ಜಯವನ್ನು ಭಾರತವೇ ಮುರಿದಿತ್ತು.
PTI

2008ರ ನವೆಂಬರ್‌ನಲ್ಲಿ ನಡೆದ ಗವಾಸ್ಕರ್-ಬಾರ್ಡರ್ ಟ್ರೋಫಿಯನ್ನು ಮರಳಿ ಪಡೆದದ್ದು ಮತ್ತೊಂದು ಇತಿಹಾಸ ಸೃಷ್ಟಿಗೆ ಕಾರಣವಾಯಿತು. ಜತೆಗೆ ಆಸ್ಟ್ರೇಲಿಯಾದ ಬೆನ್ನು ಹುರಿಗೆ ಛಲಕ್ ಹುಟ್ಟಿಸಲು ಭಾರತವೇ ಬೇಕು ಎಂಬು ಸಂದೇಶವನ್ನು ಇತರ ರಾಷ್ಟ್ರಗಳಿಗೆ ಈ ಸರಣಿ ಗೆಲುವು ರವಾನಿಸಿತು. ನಾಲ್ಕು ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಲ್ಲಿ ಗೆದ್ದುಕೊಂಡದ್ದು ಆಸೀಸ್‌ಗೆ ನುಂಗಲಾರದ ತುತ್ತಾಗಿತ್ತು. ಅವಮಾನದಿಂದ ಕಂಗೆಟ್ಟಿದ್ದ ಅಲ್ಲಿನ ಮಾಧ್ಯಮ ಮತ್ತು ಆಟಗಾರರು ನಿಧಾನಗತಿಯ ಓವರ್ ರೇಟ್ ವಿಚಾರದಲ್ಲಿ ಕಪ್ತಾನ ಪಾಂಟಿಂಗ್ ಕೈಗೊಂಡ ನಿರ್ಧಾರದ ಬಗ್ಗೆ ಟೀಕೆ ಟಿಪ್ಪಣಿಗಳು ಬಂದವು. ಒಟ್ಟಾರೆ ಭಾರತ ಈ ಸರಣಿ ಗೆಲುವಿನಿಂದ ಜಗತ್ತಿನ ನಂಬರ್ ವನ್ ತಂಡವಾಗುವತ್ತ ದಾಪುಗಾಲು ಹಾಕಿತು.

ಗಂಭೀರ್-ವಾಟ್ಸನ್ ವಿವಾದ...
ನವೆಂಬರ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವೊಂದರಲ್ಲಿ ಶೇನ್ ವಾಟ್ಸನ್‌ರ ಎದೆಗೆ ಗೌತಮ್ ಗಂಭೀರ್ ಮೊಣಕೈಯಿಂದ ತಿವಿದಿದ್ದರು ಎಂಬುದು ದೊಡ್ಡ ವಿವಾದವಾಗಿತ್ತು. ವಾದ-ವಿವಾದಗಳ ನಂತರ ಗಂಭೀರ್ ಆರೋಪಿ ಎಂಬುದು ಸಾಬೀತಾದ ಕಾರಣ ಒಂದು ಟೆಸ್ಟ್ ನಿಷೇಧ ಹೇರಲಾಯಿತು. ಮಾತಿನ ಚಕಮಕಿ ನಡೆಸಿದ ಆರೋಪಕ್ಕಾಗಿ ವಾಟ್ಸನ್‌ರಿಗೆ ಪಂದ್ಯದ ಶುಲ್ಕದಲ್ಲಿ ಕಡಿತ ಮಾಡುವ ಮ‌ೂಲಕ ದಂಡನೆ ವಿಧಿಸಲಾಗಿತ್ತು.

ಇಂಗ್ಲೆಂಡ್‌ನ್ನು ಅಡ್ಡಡ್ಡ ಮಲಗಿಸಿದ್ದು...
ಆಸೀಸ್ ಸರಣಿ ಮುಗಿದ ತಕ್ಷಣ ಆರಂಭವಾಗಿದ್ದು ಇಂಗ್ಲೆಂಡ್ ವಿರುದ್ಧದ ತಾಯ್ನೆಲದ ಏಕದಿನ ಸರಣಿ. ಏಳು ಏಕದಿನ ಪಂದ್ಯಗಳಲ್ಲಿ ಕೊನೆಯ ಎರಡು ಪಂದ್ಯಗಳು ಮುಂಬೈ ಉಗ್ರರ ದಾಳಿ ಹಿನ್ನಲೆಯಲ್ಲಿ ರದ್ದಾಗಿತ್ತು. ಉಳಿದ ಐದು ಪಂದ್ಯಗಳನ್ನು ಕೂಡ ಗೆದ್ದು ಕೊಂಡ ಭಾರತ ಆಂಗ್ಲರ ಮುಖಕ್ಕೆ ಮಸಿ ಬಳಿದಿತ್ತು. ಸರಣಿಗೆ ವಾಪಸಾಗಿದ್ದ ಯುವರಾಜ್ ಸಿಂಗ್ ಅದ್ಭುತ ಪ್ರದರ್ಶನ ಆರಂಭಿಕ ಯಶಸ್ಸುಗಳಿಗೆ ಪ್ರಮುಖ ಕಾರಣ. ಯುವಿ ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದರು.
PTI

ರ‌್ಯಾಂಕಿಂಗ್‌ನಲ್ಲಿ ಭಾರತ...
ಟೆಸ್ಟ್ ಹಾಗೂ ಏಕದಿನ ಹೀಗೆ ಎರಡೂ ತೆರನಾದ ಕ್ರಿಕೆಟಿನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದ್ದು, ರ‌್ಯಾಂಕಿಂಗ್ ಪಟ್ಟಿಯಲ್ಲೂ ಅಗ್ರ ಸ್ಥಾನದತ್ತ ದಾಪುಗಾಲು ಹಾಕುತ್ತಿದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟಿನಲ್ಲಿ ಮ‌ೂರನೇ ಸ್ಥಾನದಲ್ಲಿರುವ ಶೀಘ್ರದಲ್ಲೇ ಎರಡನೇ ಸ್ಥಾನಕ್ಕೇರಲಿದೆ. ನಂಬರ್ ವನ್ ಪಟ್ಟವನ್ನು ಆಸ್ಟ್ರೇಲಿಯಾ ಕೈಯಿಂದ ಕಸಿದುಕೊಳ್ಳುವುದು ಟೀಮ್ ಇಂಡಿಯಾ ಎದುರಿಗಿರುವ ಗುರಿ. ಯುವ ಕ್ರೀಡಾಳುಗಳನ್ನು ತುಂಬಿಕೊಂಡಿರುವ ಭಾರತ ಕ್ರಿಕೆಟ್ ತಂಡ ಆ ಸಾಧನೆಗೆ ಪಾತ್ರವಾಗುವ ಸಾಧ್ಯತೆಯಿದೆಯಾದರೂ ಸ್ಥಿರ ಪ್ರದರ್ಶನದ ಅಗತ್ಯವಿರುವುದು ಅಷ್ಟೇ ಸತ್ಯ.