2009: ಸಲ್ಲದ ವಿಷಯಗಳಿಗೆ (ಕು)ಖ್ಯಾತಿ ಗಳಿಸಿದವರು

2009ಕ್ಕೆ ಹಿನ್ನೋಟ ಹರಿಸಿದಾಗ ನಮ್ಮ ದೇಶದ ಹೆಸರು ಕೆಡಿಸಿದ ಕೆಲವೊಂದು ಪ್ರಮುಖ ವ್ಯಕ್ತಿಗಳನ್ನು ಮರೆಯದಿರೋಣ.
ಮಧು ಕೋಡ
PTI
2009ರಲ್ಲಿ ರಾಜಕೀಯ ಪುಡಾರಿಗಳು ಮತ್ತು ಭ್ರಷ್ಟಾಚಾರ ಎಂಬುದು ಭಾರತೀಯ ರಾಜಕಾರಣದ ಸದಾ ಹಚ್ಚ ಹಸಿರಿನ ಸಂಗತಿ ಎಂಬುದು ಮತ್ತೆ ಸಾಬೀತಾಯಿತು. 2500 ಕೋಟಿ ರೂಪಾಯಿಗಳ ಅಕ್ರಮ ಹಣದ ವಹಿವಾಟಿಗೆ ಸಂಬಂಧಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಬಂಧಿತರಾದರು. ತಮ್ಮ ಆತ್ಮೀಯರ ಹೆಸರಿನಲ್ಲಿ ಲೈಬೀರಿಯಾದಲ್ಲಿಯೂ ಕೋಡಾ ಅವರು 17 ಲಕ್ಷ ಡಾಲರ್ ಮೊತ್ತದ ಗಣಿ ಖರೀದಿಸಿದ್ದರೆಂದು ಎಂಬ ಆರೋಪಗಳಿವೆ. ಆದಾಯದ ಮೂಲಕ್ಕಿಂತಲೂ ಹೆಚ್ಚು ಸಂಪತ್ತು ಹೊಂದಿದ ಈ ಯುಪಿಎ ಬೆಂಬಲಿಗ ಮತ್ತು ಸ್ವತಂತ್ರ ಸಂಸದನ ಆಸ್ತಿಗೆ ದೇಶಾದ್ಯಂತ ಎಂಟು ನಗರಗಳಲ್ಲಿ ದಾಳಿ ನಡೆಯಿತು. ಹವಾಲಾ ವ್ಯವಹಾರವೂ ಇತ್ತು.

1994ರಲ್ಲಿ ಬಿಜೆಪಿ ಟಿಕೆಟಿನಲ್ಲಿ ರಾಜಕೀಯಕ್ಕಿಳಿದಿದ್ದ ಕೂಲಿ ಕಾರ್ಮಿಕನ ಪುತ್ರ ಕೋಡಾ, 2000ದಲ್ಲಿ ಹೊಸ ರಾಜ್ಯ ಜಾರ್ಖಂಡ್‌ನಲ್ಲಿ ಮಂತ್ರಿಗಿರಿ ಪಡೆದು ಅಧಿಕಾರದ ಸವಿಯುಂಡಿದ್ದರು. 2005ರಲ್ಲಿ ಬಿಜೆಪಿ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್, ಆರ್‌ಜೆಡಿ, ಜೆಎಂಎಂ ಬೆಂಬಲ ಪಡೆದು ಮುಖ್ಯಮಂತ್ರಿ ಪದವಿಗೇರಿದ್ದು ಇತಿಹಾಸ.

ಶೈನಿ ಅಹುಜಾ:
PR
ಪ್ರಶಸ್ತಿ ವಿಜೇತ ಚಿತ್ರ ನಟ ನಿಜ ಜೀವನದಲ್ಲಿ ಖಳನಾದದ್ದು ವಿಪರ್ಯಾಸ. ಮನೆಕೆಲಸದಾಕೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಶೈನಿ ಅಹುಜಾರನ್ನು ಬಂಧಿಸಲಾಯಿತು. ಡಿಎನ್ಎ ಪರೀಕ್ಷೆಯಲ್ಲಿಯೂ ಆರೋಪ ಸಾಬೀತಾಯಿತು. ತಪ್ಪೊಪ್ಪಿಕೊಂಡು ಕೋರ್ಟಿನಲ್ಲಿ ಅತ್ತ ಘಟನೆಯೂ ನಡೆಯಿತು. ಗ್ಯಾಂಗ್‌‍ಸ್ಟರ್ ಮತ್ತು ವೋ ಲಮೇ ಚಿತ್ರದ ನಾಯಕನಿಗೆ ಕೊನೆಗೂ ಶರ್ತಬದ್ಧ ಜಾಮೀನು ದೊರೆತಿದೆ.

ರೆಡ್ಡಿ ಸೋದರರು:
NRB
ವರ್ಷಾಂತ್ಯದಲ್ಲಿ ಕರ್ನಾಟಕದ ಹೆಸರು ಕೂಡ ಜೊತೆಯಾಗಿಯೇ ಹಾಳಾದದ್ದು ರೆಡ್ಡಿ ಸೋದರರ ರಾಜಕೀಯ ನಡೆಗಳಿಂದ. ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ, ಮುಖ್ಯಮಂತ್ರಿಯ ವಿರುದ್ಧ ಬಂಡಾಯವೆದ್ದು, ಯಡಿಯೂರಪ್ಪ ಅವರ ಧ್ವನಿಯನ್ನು ಉಡುಗಿಸಿಬಿಡುವಲ್ಲಿ ಯಶಸ್ವಿಯಾದರು. ಪ್ರವಾಹದ ಸಂದರ್ಭ ಜನ ಸೇವೆ ಮಾಡಬೇಕಿದ್ದ ಸರಕಾರಿ ಯಂತ್ರವು ಎರಡು ವಾರ ಕಾಲ ನಿಂತೇ ಬಿಟ್ಟಿತು. ಕೊನೆಗೆ ಬಿಜೆಪಿ ಕೇಂದ್ರೀಯ ನಾಯಕತ್ವ ಮಧ್ಯಪ್ರವೇಶಿಸಿ, ಸುಷ್ಮಾ ಸ್ವರಾಜ್ ಎಂಬ ಈ ಗಣಿ ಧಣಿಗಳ 'ಅಮ್ಮ'ನ ಮೂಲಕ ವಿವಾದ ಪರಿಹಾರವಾಯಿತು. ಅಷ್ಟು ದಿನ ಗಲಾಟೆ ಮಾಡಿದ ರೆಡ್ಡಿಗಳು, ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಕರ್ನಾಟಕದ ಏಕೈಕ ಮಹಿಳಾ ಸಚಿವೆಯನ್ನು ಕಿತ್ತು ಹಾಕುವಲ್ಲಿ ಯಶಸ್ವಿಯಾದರಷ್ಟೆ.

ಯಡಿಯೂರಪ್ಪ ಅಧಿಕಾರಕ್ಕೇರಲು ಇದೇ ರೆಡ್ಡಿಗಳು ನೆರವು ನೀಡಿದ್ದರಿಂದಾಗಿ, ಕುರ್ಚಿ ಉಳಿಸಿಕೊಳ್ಳಲು ಅವರು ಕೂಡ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟುಬಿಟ್ಟರು. ಅತ್ತ ಕಡೆಯಿಂದ ಗಣಿ ರೆಡ್ಡಿಗಳ ಗಣಿಗಾರಿಕೆ ವಿರುದ್ಧ ಆಂಧ್ರದಿಂದ ಭಾರೀ ಒತ್ತಡ ಬಂತು. ಅಕ್ರಮ ಗಣಿಗಾರಿಕೆಯ ಕುರಿತು ಸಿಬಿಐ ತನಿಖೆಗೆ ಶಿಫಾರಸು ಆಯಿತು. ನ್ಯಾಯಾಲಯದಲ್ಲಿನ್ನೂ ಹೋರಾಟ ನಡೆಯುತ್ತಿದೆ.

ಕಲ್ಯಾಣ್ ಸಿಂಗ್:
PTI
ಒಂದು ಕಾಲದಲ್ಲಿ ಅಯೋಧ್ಯೆಯ ಹೀರೋ ಆಗಿದ್ದ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿಯಿಂದ ರಾಜಕೀಯದ ಬದ್ಧ ವಿರೋಧಿ ಸಮಾಜವಾದಿ ಪಕ್ಷಕ್ಕೆ ಹಾರಿದರು. ಲೋಕಸಭೆ ಚುನಾವಣೆಗಳಲ್ಲಿ ಕಲ್ಯಾಣ್ ಸೇರಿದಂತೆ ಎಸ್ಪಿಗೆ ಕೂಡ ಹೀನಾಯ ಸೋಲಾಯಿತು. ಕೊನೆಗೆ ತಮ್ಮದೇ ಪಕ್ಷ ರಚಿಸುವತ್ತ ಮನ ಮಾಡಿದರು. ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಕುರಿತ ತನಿಖೆ ನಡೆಸಿದ ಜಸ್ಟಿಸ್ ಲಿಬರ್ಹಾನ್ ಆಯೋಗ ವರದಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಹೆಸರು ದೋಷಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು ಮತ್ತು ಕಲ್ಯಾಣ್ ತಮ್ಮ ಕಾರ್ಯಕ್ಕೆ ವಿಷಾದವಿಲ್ಲ ಎನ್ನುತ್ತಾ ಪುನರಪಿ ಸಮರ್ಥಿಸಿಕೊಂಡರು.

ರಾಖಿ ಸಾವಂತ್:
PR
ನೇರ ಮಾತಿಗೆ ಹೆಸರಾಗಿದ್ದ ಬಾಲಿವುಡ್‌ನ ಐಟಂ ಹುಡುಗಿ ರಾಖಿ ಸಾವಂತ್, ಮದುವೆಗಾಗಿ ಟಿವಿ ರಿಯಾಲಿಟಿ ಶೋ 'ರಾಖಿ ಕಾ ಸ್ವಯಂವರ್' ಆಯ್ದುಕೊಂಡು ದೇಶಾದ್ಯಂತ ಹುಬ್ಬೇರಿಸಿದಳು. ಖಂಡಿತ ಆಕೆಯನ್ನು ಯಾರೂ ಮದುವೆಯಾಗುವುದಿಲ್ಲ ಮತ್ತು ಆಕೆಯೇ ಯಾರನ್ನೂ ಒಪ್ಪುವುದಿಲ್ಲ ಎಂಬ ವಿರೋಧಿಗಳು-ಅಭಿಮಾನಿಗಳ ಊಹಾಪೋಹದ ನಡುವೆಯೇ, ವಿರೋಧಿಗಳೇ ಮೇಲುಗೈ ಸಾಧಿಸಿದರು. ಕೆನಡಾದ ಇಳೇಶ್ ಪರುಜನ್‌ವಾಲಾಳನ್ನು ಸ್ವಯಂವರದಲ್ಲಿ ಆರಿಸಿದ್ದಾಗಿ ಘೋಷಿಸಿದ್ದ ರಾಖಿ, ನಿಶ್ಚಿತಾರ್ಥವನ್ನೇ ರದ್ದುಪಡಿಸಿಬಿಟ್ಟಳು. ಆಕೆ ನೀಡಿದ ಕಾರಣವೇನೆಂದರೆ, ಇಳೇಶನ ಆರ್ಥಿಕ ಅಭದ್ರ ಪರಿಸ್ಥಿತಿ. ಕೆನಡಾದಿಂದ ಭಾರತಕ್ಕೇ ಮರಳಿ ಇಲ್ಲೇ ಉದ್ಯಮ ಸ್ಥಾಪನೆಗೆ ಸಕಲ ಸಿದ್ಧತೆ ಮಾಡಿದ್ದ ಇಳೇಶ್‌ಗೆ ಆಘಾತವಷ್ಟೇ ದೊರಕಿತು. ರಾಖಿ ಜೊತೆ ಸಂಬಂಧ ಬೆಳೆಸಲು ಪ್ರಯತ್ನಿಸುವ ಯಾರೇ ಆದರೂ ಖಂಡಿತಾ ಖಿನ್ನತೆ ರೋಗಕ್ಕೆ ತುತ್ತಾಗುತ್ತಾರೆ ಎಂದು ಇಳೇಶ್ ಬಹಿರಂಗವಾಗಿಯೇ ಘೋಷಿಸಿಬಿಟ್ಟರು.

ಈ ಮಧ್ಯೆಯೇ ರಾಖಿ, ಇಳೇಶ್ ಜೊತೆ ಸೇರಿ ಮತ್ತೊಂದು ರಿಯಾಲಿಟಿ ಶೋ 'ಪತಿ, ಪತ್ನಿ ಔರ್ ವೋ'ದಲ್ಲಿ ಭಾಗವಹಿಸಿ ಮತ್ತೆ ಟೀಕೆಗೆ ಗುರಿಯಾದಳು. ಅದಾದ ಬಳಿಕ ಸ್ಟಾರ್ ಪ್ಲಸ್‌ನ 'ಪರ್ಫೆಕ್ಟ್ ಬ್ರೈಡ್ (ಸಮರ್ಥ ವಧು)' ಶೋದಲ್ಲಿಯೂ ಕಾಣಿಸಿಕೊಂಡು, ತಾನೇ ಪರ್ಫೆಕ್ಟ್ ವಧು ಆಗಲು ವಿಫಲವಾದರೂ, ಈ ಶೋದ ತೀರ್ಪುಗಾರಳಾಗಿ ಆಯ್ಕೆಯಾಗಿ ಮತ್ತೆ ಕೆಂಗಣ್ಣಿಗೆ ಗುರಿಯಾದಳು. ಇದೀಗ ಆಕೆ ಮತ್ತೆ ಕಠಿಣವಾಗಿ ನೃತ್ಯಾಭ್ಯಾಸಕ್ಕೆ ಮರಳಿದ್ದಾಳೆ. ಆದರೆ, ರಾಖಿಯ ನಾಟಕಗಳನ್ನು ಟಿವಿಯಲ್ಲಿ ವೀಕ್ಷಿಸಿದ್ದ ಕೋಟ್ಯಂತರ ಮಂದಿಯ ಮನಸ್ಸಿನಲ್ಲಿ ಇಳೇಶ್ ಬಗ್ಗೆ ಸಾಂತ್ವನದ ಭಾವನೆ ಮತ್ತು ಸ್ವಯಂವರವನ್ನು ಕೇವಲ ಒಂದು ಶೋ ಎಂದು ಪರಿಗಣಿಸಿದ ರಾಖಿ ಬಗ್ಗೆ ಆಕ್ರೋಶ ಹಾಗೆಯೇ ಉಳಿಯಿತು.

ಮುಂಬೈಯಲ್ಲಿ ಠಾಕ್ರೆ ಹುಲಿ ಮತ್ತು ಬೆಕ್ಕು:
PTI
ತಮ್ಮ ಆಕ್ರಮಣಕಾರಿ ಹೇಳಿಕೆಗಳು ಮತ್ತು ಪ್ರಚೋದನೆಗಳಿಗಾಗಿಯೇ ಮುಂಬೈ ಠಾಕ್ರೆಗಳು ಪ್ರಸಿದ್ಧರು. ಈ ಬಾರಿಯೂ ವಿಭಿನ್ನವಾಗಿರಲಿಲ್ಲ. ದಾಂಧಲೆ ಮಾಡಿದರೇನೇ ಮಾಧ್ಯಮಗಳಲ್ಲಿ ಸುದ್ದಿಯಲ್ಲಿರಬಹುದು ಎಂಬಂತೆ ಮರಾಠಿ ವಿಷಯ ಹಿಡಿದುಕೊಂಡು ರಾಜ್ ಠಾಕ್ರೆಯ ನವ ನಿರ್ಮಾಣ ಸೇನೆಯ ಸದಸ್ಯರು ಸಮಾಜವಾದಿ ಸಂಸದ ಅಬು ಅಜ್ಮಿಯನ್ನು ಹಿಗ್ಗಾ ಮುಗ್ಗಾ ಎಳೆದಾಡಿದರು. ಆತ ಮಾಡಿದ ತಪ್ಪು - ಮರಾಠಿಯ ಬದಲು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದು. ರಾಜ್ ಠಾಕ್ರೆಗಿಂತ ಹಳೆ ಹುಲಿ ಬಾಳ ಠಾಕ್ರೆ ಕೂಡ ಹಿಂದೆ ಬೀಳಲಿಲ್ಲ. ಮರಾಠಿ ಹೆಸರನ್ನೆತ್ತಿಕೊಂಡೇ ಅವರು ವಿಶ್ವಶ್ರೇಷ್ಠ ದಾಂಡಿಗ ಸಚಿನ್ ತೆಂಡುಲ್ಕರ್ ಅವರನ್ನು ಗುರಿಯಾಗಿಸಿಕೊಂಡರು. 'ನಾನು ಮೊದಲು ಭಾರತೀಯ' ಎಂದು ತೆಂಡುಲ್ಕರ್ ಹೇಳಿದ್ದೇ, ಠಾಕ್ರೆ ತಮ್ಮ ಪಕ್ಷ ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಸಂಪಾದಕೀಯ ಬರೆದು, 'ಮರಾಠಿ ಮನುಗಳ ವಿರುದ್ಧ ಬ್ಯಾಟಿಂಗ್ ಮಾಡಬೇಡ, ಕ್ರಿಕೆಟ್ ಅಂಗಣದಲ್ಲಿ ಮಾತ್ರವೇ ಬ್ಯಾಟ್ ಮಾಡು, ರಾಜಕೀಯ ಅಂಗಣದಲ್ಲಿ ಬೇಡ' ಎಂಬ ಕಿವಿ ಮಾತು ದೇಶಾದ್ಯಂತ ಆಕ್ರೋಶಕ್ಕೂ ತುತ್ತಾಯಿತು. ಈ ಬಾರಿ ಸುದ್ದಿ ಮತ್ತೊಂದು ಠಾಕ್ರೆ ಎಂದರೆ, ಬಾಳ ಠಾಕ್ರೆಯ ಸೊಸೆ ಸ್ಮಿತಾ ಠಾಕ್ರೆ. ಸೇನೆ ತೊರೆದು ಕಾಂಗ್ರೆಸ್ ಸೇರುವ ಆಕೆಯ ನಿರ್ಧಾರ ದೊಡ್ಡ ಸುದ್ದಿಯಾಯಿತು. ಈ ಬಗ್ಗೆ ಬಾಳ ಠಾಕ್ರೆ ಒಂದೇ ಒಂದು ಸೊಲ್ಲೆತ್ತದಿರುವುದು ವಿಶೇಷ.

ವೆಬ್ದುನಿಯಾವನ್ನು ಓದಿ