ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಮೆರೆದಾಡಿದ ಶೂ-ಆಕ್ರೋಶ!

ಜನಾಕ್ರೋಶವು ಯಾವ ರೀತಿಯೆಲ್ಲಾ ವ್ಯಕ್ತವಾಗಬಹುದೆಂಬುದನ್ನು 2009 ತೋರಿಸಿಕೊಟ್ಟಿತು. ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಅವರಿಗೆ ಶೂ ಎಸೆದ ಪ್ರಕರಣವು ಭಾರತದಲ್ಲಿಯೂ ಪ್ರತಿಧ್ವನಿಸಿ, ಗೃಹ ಸಚಿವ ಪಿ.ಚಿದಂಬರಂ, ಆಡ್ವಾಣಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಕೂಡ ಈ ಶೂ-ಆಕ್ರೋಶಕ್ಕೆ ತುತ್ತಾಗದೇ ಇರದಾದರು.

PTI
ಇರಾಕಿ ಪತ್ರಕರ್ತ ಮುಂತದಾರ್ ಅಲ್ ಜೈದಿ ಇದಕ್ಕೆಲ್ಲಾ ನಾಂದಿ ಹಾಡಿದ್ದು. ಇರಾಕಿಗೆ ವಿದಾಯ ಹಾಡುವ ಭೇಟಿಗಾಗಿ ಬಂದಿದ್ದ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರತ್ತ ಈತ ಶೂ ಎಸೆಯುತ್ತಾ, 'ನಾಯಿ, ನಿನಗಿದೇ ವಿದಾಯ' ಎಂದು ಉದ್ಘೋಷಿಸಿದ್ದ. ಆತನಿಗೆ 3 ವರ್ಷ ಶಿಕ್ಷೆ ವಿಧಿಸಲಾಯಿತಾದರೂ, ಬಳಿಕ ಅದನ್ನು ಒಂದು ವರ್ಷಕ್ಕೆ ಇಳಿಸಲಾಯಿತು.

ಅದೇ ಪತ್ರಕರ್ತ ಸಮುದಾಯದ, ದೈನಿಕ್ ಜಾಗರಣ್ ಎಂಬ ಹಿಂದಿ ಪತ್ರಿಕೆಯ ವರದಿಗಾರ ಜರ್ನೈಲ್ ಸಿಂಗ್ 'ಪತ್ರಕರ್ತ ಭಾಯಿ' ಜೈದಿಯ ಪ್ರೇರಣೆ ಪಡೆದು ಗೃಹ ಸಚಿವ ಪಿ.ಚಿದಂಬರಂ ಅವರತ್ತ ಶೂ ಎಸೆದ. ಅದು ಕೂಡ ಗುರಿ ತಪ್ಪಿತು. 1984ರ ಸಿಖ್ ವಿರೋಧಿ ದಂಗೆಯಲ್ಲಿ ಆರೋಪಿಗಳಾಗಿದ್ದ ಕಾಂಗ್ರೆಸ್ ಮುಖಂಡರಾದ ಜಗದೀಶ್ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಅವರನ್ನು ಸಿಬಿಐ ನಿರ್ದೋಷಿ ಎಂದು ಸಾರಿದ್ದುದು ಈ ಸಿಖ್ ಸಮುದಾಯದ ಪತ್ರಕರ್ತನ ಆಕ್ರೋಶಕ್ಕೆ ಕಾರಣವಾಗಿತ್ತು. ಶೂ ಗುರಿ ತಪ್ಪಿತಾದರೂ, ಈ ಇಬ್ಬರಿಗೆ ಲೋಕಸಭೆಗೆ ಕಾಂಗ್ರೆಸ್ ಟಿಕೆಟ್ ದೊರೆಯುವುದಂತೂ ತಪ್ಪಿ ಹೋಯಿತು. ಪತ್ರಿಕಾಗೋಷ್ಠಿಯಲ್ಲಿ, ಈ ಕುರಿತ ತನ್ನ ಪ್ರಶ್ನೆಗೆ ಚಿದಂಬರಂ ನೀರಸ ಉತ್ತರ ನೀಡಿದ್ದೇ ಈ ಶೂ ಕ್ಷಿಪಣಿ ಹಾರಲು ಕಾರಣವಾಯಿತು. ಆತನನ್ನು ಕ್ಷಮಿಸಲಾಯಿತು.

ಭಾರತದಲ್ಲಿ ಮಾತ್ರವೇ ಅಲ್ಲ, ಬ್ರಿಟನಿದಲ್ಲಿಯೂ ಈ 'ಶೂ ಆಕ್ರೋಶ' ಪ್ರತಿಧ್ವನಿಸಿತು. ಇದಕ್ಕೆ ತುತ್ತಾದವರು ಚೀನೀ ಪ್ರಧಾನಿ ವೆನ್ ಜಿಯಾಬಾವೊ. ಕೇಂಬ್ರಿಜ್ ವಿವಿಯಲ್ಲಿ ಉಪನ್ಯಾಸ ನೀಡುತ್ತಿದ್ದಾಗ ಪ್ರೇಕ್ಷಕ ಕಡೆಯಿಂದ ಶೂ ತೂರಿ ಬಂತು. 'ಇಂಥ ವರ್ತನೆಯಿಂದ ಬ್ರಿಟನ್-ಚೀನಾ ಸಂಬಂಧವೇನೂ ಹದಗೆಡುವುದಿಲ್ಲ' ಎಂದ ವೆನ್ ಅವರ ತ್ರಿದಿನಗಳ ಇಂಗ್ಲೆಂಡ್ ಭೇಟಿ ಸಾಕಷ್ಟು ಪ್ರತಿಭಟನೆಗಳು ಮತ್ತು ಬಂಧನಗಳಿಗೆ ಕಾರಣವಾಗಿತ್ತು.

ಲೋಕಸಭೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಹಾಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿಯವರು ಕೂಡ ಈ 'ಶೂ ಆಕ್ರೋಶ' ಎದುರಿಸಬೇಕಾಯಿತು. ಅವರೊಂದಿಗೆ ಕಾಂಗ್ರೆಸ್ ನೇತಾರ ನವೀನ್ ಜಿಂದಾಲ್ ಕೂಡ ಶೂ ಎದುರಿಸಬೇಕಾಯಿತು.

ವೆಬ್ದುನಿಯಾವನ್ನು ಓದಿ