ಕ್ರೀಡೆಯನ್ನಾಳಿದವರು ಸೈನಾ, ಸಾನಿಯಾ, ಸೋಮದೇವ್

- ನಾಗರಾಜ್ ಬೇಳ

ಈ ವರ್ಷ ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್, ಟೆನಿಸ್‌ನಲ್ಲಿ ಸಾನಿಯಾ ಮಿರ್ಜಾ, ಸೋಮದೇವ್ ದೇವರ್ಮನ್, ಬಾಕ್ಸಿಂಗ್‌ನಲ್ಲಿ ವಿಜೇಂದರ್ ಸಿಂಗ್ ಹೀಗೆ ವೈಯಕ್ತಿಕ ಸಾಧನೆಗಳನ್ನು ಮೆರೆದರೆ, ವಿವಾದದಲ್ಲಿ ಕಾಮನ್‌ವೆಲ್ತ್ ಗೇಮ್ಸ್, ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್, ಭೈಚುಂಗ್ ಭುಟಿಯಾ ಪತ್ರಿಕೆಗಳಲ್ಲಿ ಸುದ್ದಿಯಾದರು. ಅವುಗಳನ್ನು ನೆನಪು ಮಾಡಿಕೊಳ್ಳುವ ಪ್ರಾಮಾಣಿಕ ವಿಶ್ಲೇಷಣೆ ಯತ್ನವನ್ನಿಲ್ಲಿ ಮಾಡಲಾಗಿದೆ.

ಗೇಮ್ಸ್ ತಯಾರಿ ವಿಳಂಬ...
PR
ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ವಹಿಸುತ್ತಿರುವ ಭಾರತವು ಕಾಮಗಾರಿ ವಿಳಂಬ ಮಾಡುತ್ತಿದೆ ಎಂಬುದೇ ದೊಡ್ಡ ವಿವಾದವಾಗಿತ್ತು. ಇದೇ ಕಾರಣದಿಂದಾಗಿ ಗೇಮ್ಸ್ ಸ್ಥಳಾಂತರದ ಮಾತುಗಳೂ ಕೇಳಿ ಬಂದಿದ್ದವು.

ಅವಧಿಯೊಳಗೆ ಕ್ರೀಡಾಂಗಣಗಳ ಕಾಮಗಾರಿಗಳು ಮುಕ್ತಾಯವಾಗುವ ಕುರಿತು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್ ಆತಂಕ ವ್ಯಕ್ತಪಡಿಸಿತ್ತಲ್ಲದೆ ಪರಿಶೀಲನೆ ನಡೆಸಿತ್ತು. ಕೊನೆಗೆ ತೃಪ್ತರಾಗಿ ಮರಳಿದ ಅಧ್ಯಕ್ಷ ಮೈಕಲ್ ಫಿನ್ನೆಲ್ ನೇತೃತ್ವದ ತಂಡ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

ಈ ನಡುವೆ ಕಾಮನ್‌ವೆಲ್ತ್ ಫೆಡರೇಶನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೈಕ್ ಹೂಪರ್ ಹಾಗೂ ಕಾಮನ್‌ವೆಲ್ತ್ ಸಂಘಟನಾ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ನಡುವಣ ವಿವಾದ ಹಲವು ವಿದ್ಯಮಾನಗಳಿಗೆ ಕಾರಣವಾಗಿತ್ತು. ನಂತರ ಕ್ರೀಡಾಸಚಿವ ಎಂ.ಎಸ್. ಗಿಲ್ ಸಂಧಾನದಿಂದಾಗಿ ವಿವಾದಗಳು ಬಗೆಹರಿದಿವೆಯಾದರೂ, ನಿಗದಿತ ಸಮಯದೊಳಗೆ ಗೇಮ್ಸ್ ಕಾಮಗಾರಿ ಪೂರ್ಣಗೊಳ್ಳುವುದೇ ಎಂಬುವುದು ಉಳಿದಿರುವ ಪ್ರಶ್ನೆ.

ಬ್ಯಾಡ್ಮಿಂಟನ್ ಎಂದರೆ ಸೈನಾ....
PTI
ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಭಾರತ ಪಾರುಪತ್ಯ ಮೆರೆಯಲಾರಂಭಿಸಿದೆ. ಸೈನಾ ನೆಹ್ವಾಲ್, ಚೇತನ್ ಆನಂದ್, ವಿ.ದಿಜು, ಜ್ವಾಲಾ ಗುತ್ತಾ, ಅನೂಪ್ ಶ್ರೀಧರ್, ಅರವಿಂದ್ ಭಟ್, ಪಿ. ಕಶ್ಯಪ್, ಆನಂದ್ ಪವಾರ್ ಮತ್ತು ಅಜಯ್ ಜಯರಾಮ್‌ರಂತಹ ಆಟಗಾರರು 2009ರಲ್ಲಿ ಉತ್ತಮ ಪ್ರದರ್ಶನ ತೋರ್ಪಡಿಸಿದ್ದು, ಭವಿಷ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ.

ಪ್ರಸಕ್ತ ವರ್ಷ ಸೈನಾ ನೆಹ್ವಾಲ್‌ಗೆ ಮರೆಯಲಾಗದ ಸವಿ ನೆನಪು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದ 19 ಹರೆಯದ ಹೈದರಾಬಾದ್ ಆಟಗಾರ್ತಿ ಜೂನ್‌ ತಿಂಗಳಲ್ಲಿ ಜಕಾರ್ತದಲ್ಲಿ ನಡೆದ ಪ್ರತಿಷ್ಠಿತ 'ಇಂಡೋನೇಷ್ಯಾ ಓಪನ್ ಸೂಪರ್ ಸಿರೀಸ್' ಪ್ರಶಸ್ತಿ ಮುಡಿಗೇರಿಸಿಕೊಂಡು ಸೂಪರ್ ಸಿರೀಸ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದರು.

ಅದೇ ರೀತಿ ಜುಲೈನಲ್ಲಿ ಜೀವನಶ್ರೇಷ್ಠ ಆರನೇ ರ‌್ಯಾಂಕಿಂಗ್‌ಗೆ ತಲುಪಿದ ಸಾಧನೆಯೂ ಸೈನಾರಿಂದ ಬಂತು. ಅವರ ಕ್ರೀಡಾಸಾಧನೆಯನ್ನು ಪರಿಗಣಿಸಿದ ಕೇಂದ್ರ 'ಅರ್ಜುನ ಪ್ರಶಸ್ತಿ' ನೀಡಿದರೆ, ಪೆಟ್ರೋಲಿಯಂ ಸ್ಫೋರ್ಟ್ ಪ್ರೊಮೊಶನ್ ಬೋರ್ಡ್‌ 20008-09 ಸಾಲಿನ 'ವರ್ಷದ ಕ್ರೀಡಾಪಟು ಪ್ರಶಸ್ತಿ'ಯನ್ನು ನೀಡಿತು.

ಇನ್ನಿತ್ತರ ಪ್ರಮುಖ ಟೂರ್ನಮೆಂಟ್‌ಗಳಾದ ಮಲೇಷ್ಯಾ ಸೂಪರ್ ಸಿರೀಸ್, ಸ್ವಿಸ್ ಓಪನ್, ಸಿಂಗಾಪೂರ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಿದ ಸಾಧನೆಯನ್ನು ಸೈನಾ ಮಾಡಿದರು. ಇದಕ್ಕೆಲ್ಲಾ ಕಾರಣರಾದ ಸೈನಾ ಕೋಚ್ ಪುಲ್ಲೇಲಾ ಗೋಪಿಚಂದ್‌ 'ದ್ರೋಣಾಚಾರ್ಯ ಪ್ರಶಸ್ತಿ' ಒಲಿದು ಬಂತು.

ಹೈದರಾಬಾದ್‌ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಜ್ವಾಲಾ-ದಿಜು ಜೋಡಿ ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿಕೊಂಡಿದ್ದರು.

ಸಾನಿಯಾ, ಸೋಮದೇವ್ ಮಿಂಚು...
PTI
ಇತ್ತೀಚಿನ ವರ್ಷಗಳಲ್ಲಿ ಭಾರತವು ಟೆನಿಸ್ ವಲಯದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿತ್ತು 2009ರ ಈ ವರ್ಷ. ಸೋಮದೇವ್ ದೇವರ್ಮನ್ ಜೀವನಶ್ರೇಷ್ಠ ರ‌್ಯಾಂಕಿಂಗ್ ಪಡೆದದ್ದು, ಗಾಯಾಳುವಾಗಿದ್ದ ಸಾನಿಯಾ ಮಿರ್ಜಾ ಚಿಗಿತೆದ್ದದ್ದು, ಡೇವಿಸ್ ಕಪ್‌ನಲ್ಲಿ ಅಗ್ರ ಸಾಧನೆ ಮಾಡಲು ಲಿಯಾಂಡರ್ ಪೇಸ್ - ಮಹೇಶ್ ಭೂಪತಿ ಸಾಧ್ಯವಾದದ್ದು -- ಹೀಗೆ ಹಲವು ಮೇರು ಸಾಧನೆಗಳಿಗೆ ಭಾರತೀಯ ಟೆನಿಸ್ ಕಾರಣವಾಗಿತ್ತು.

24ರ ಹರೆಯದ ಸೋಮದೇವ್ ವರ್ಷಾರಂಭದಲ್ಲಿ ತವರಿನಲ್ಲಿ ನಡೆದ ಚೆನ್ನೈ ಓಪನ್ ಟೆನಿಸ್ ಟೂರ್ನಮೆಂಟ್ ಫೈನಲ್‌ಗೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದಲ್ಲದೆ, ಡೇವಿಸ್ ಕಪ್ ವಿಶ್ವ ಗುಂಪಿಗೆ ಭಾರತ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಚೈನೀಸ್ ತೈಪೈ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫ್ಲೇ ಆಫ್ ಸುತ್ತುಗಳಲ್ಲಿ ಸೋಮದೇವ್ ನೀಡಿದ ಭರ್ಜರಿ ಪ್ರದರ್ಶನದಿಂದಾಗಿ ಭಾರತ 11 ವರ್ಷಗಳ ನಂತರ ಡೇವಿಸ್ ಕಪ್ ವಿಶ್ವಗುಂಪಿಗೆ ತಲುಪಿತ್ತು.

ಪ್ರತಿಷ್ಠಿತ ಯುಎಸ್ ಓಪನ್‌ನ ಎರಡನೇ ಸುತ್ತಿಗೆ ಪ್ರವೇಶಿಸುವ ಮೂಲಕ ಗಮನ ಸೆಳೆದ ಸೋಮದೇವ್, ಜೀವನಶ್ರೇಷ್ಠ ರ‌್ಯಾಂಕಿಂಗ್ (116) ಪಡೆದಿರುವುದು ಮತ್ತೆ ಭಾತ ಟೆನಿಸ್ ಗತವೈಭವ ಮರಳಿಸುತ್ತದೆಯೇ ಎಂಬ ಕುತೂಹಲವನ್ನು ಮೂಡಿಸಿದೆ.

ಅದೇ ರೀತಿ ಹೈದರಾಬಾದ್ ಆಟಗಾರ್ತಿ ಸಾನಿಯಾರಿಗಿದು ಪುನರಾಗಮನದ ವರ್ಷ. ಗಾಯಾಳುವಾದ ನಂತರ ಚೇತರಿಸಿಕೊಂಡು ಹಿಂತಿರುಗಿದ ಸಾನಿಯಾ, ಮಹೇಶ್ ಭೂಪತಿ ಜೊತೆ ಸೇರಿ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಕಿರೀಟ ಗೆದ್ದುಕೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ಸಾರಿದ್ದರು.

ನಂತರ ನಡೆದ ಲೆಕ್ಸಿಂಗ್ಟನ್ ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡ ಸಾನಿಯಾ ಪಟ್ಟಾಯ ಸಿಟಿ ಹಾಗೂ ವಾಂಕೊವರ್‌‌ನಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡರು. ಆಕೆಯ ವೈಯಕ್ತಿಕ ಜೀವನಕ್ಕೆ ಕಣ್ಣಾಡಿಸಿದಾಗ ಅವರ ವಿವಾಹ ನಿಶ್ಚಿತಾರ್ಥವು ಕೂಡಾ ಇದೇ ವರ್ಷದಲ್ಲೇ ನಡೆಯಿತು.

ಯುವ ಆಟಗಾರ ಯೂಕಿ ಭಾಂಬ್ರಿ ಜೂನಿಯರ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡು ದಾಖಲೆ ನಿರ್ಮಿಸಿದರು. ಬಳಿಕ ಸೀನಿಯರ್ ವಿಭಾಗಕ್ಕೆ ಭಡ್ತಿ ಪಡೆದ ಅವರು ಏಪ್ರಿಲ್-ಅಕ್ಟೋಬರ್ ತನಕದ ಕೇವಲ ಏಳು ತಿಂಗಳ ಅವಧಿಯಲ್ಲಿ ಐದು ಐಟಿಫ್ ಪ್ರಶಸ್ತಿ ಬಗಲಿಗೆ ಹಾಕಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಡೇವಿಸ್ ಕಪ್‌ನಲ್ಲಿ ಭಾಗವಹಿಸಿದ್ದ ಅವರು ಆಡಿದ ಚೊಚ್ಚಲ ಪಂದ್ಯದಲ್ಲಿಯೇ ಜಯ ಗಳಿಸಿದ್ದರು. ರ‌್ಯಾಂಕಿಂಗ್‌ನಲ್ಲೂ ಅವರದ್ದು ಏರುಗತಿಯ ವೇಗದ ಓಟ.

ಸಾಧನೆ ಛಲವಿದ್ದರೆ ವಯಸ್ಸು ಕಾರಣವೇ ಅಲ್ಲ ಎಂಬುದಕ್ಕೆ ಸುಲಭ ಉದಾಹರಣೆ ಲಿಯಾಂಡರ್ ಪೇಸ್. 35ರ ಹರೆಯದಲ್ಲೂ ಜೆಕ್ ಗಣರಾಜ್ಯದ ಲುಕಾಸ್ ದ್ಲೋಹಿ ಜೊತೆ ಸೇರಿ ಭರ್ಜರಿ ಪ್ರದರ್ಶನ ನೀಡಿದ ಪೇಸ್, ಪ್ರಸಕ್ತ ವರ್ಷ ಫ್ರೆಂಚ್ ಓಪನ್ ಹಾಗೂ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಮೂಲಕ ತನ್ನ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಸಂಖ್ಯೆಯನ್ನು 10ಕ್ಕೇರಿಸಿಕೊಂಡಿದ್ದಾರೆ.

ಪತ್ನಿಗೆ ವಿಚ್ಛೇದನ ನೀಡಿದ ಮಹೇಶ್ ಭೂಪತಿ ಈ ವರ್ಷ ಕ್ರೀಡಾ ಜಗತ್ತಿನಲ್ಲಿ ಹೆಚ್ಚಿನ ಸಾಧನೆ ಮೆರೆಯಲು ಸಾಧ್ಯವಾಗಿಲ್ಲ. ಸಾನಿಯಾಳ ಜೊತೆ ಸೇರಿ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡದ್ದು ಬಿಟ್ಟರೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಮಾರ್ಕ್ ನೋವ್ಲ್ಸ್ ಜತೆ ಅಮೆರಿಕನ್ ಓಪನ್ ರನ್ನರ್ ಅಪ್ ಪ್ರಶಸ್ತಿಯೇ ಸಮಾಧಾನ ತಂದದ್ದು.

ವಿಶ್ವಕಪ್ ಸಿದ್ಧತೆಯಲ್ಲಿ ಭಾರತ...
ಭಾರತದ ರಾಷ್ಟ್ರೀಯ ಕ್ರೀಡೆ ಈ ವರ್ಷ ಭಾರೀ ಸಾಧನೆ ಮಾಡಲಾಗದಿದ್ದರೂ ಅತ್ಯುತ್ತಮ ನಿರ್ವಹಣೆ ತೋರಿಸಿದೆ ಎಂದೇ ಹೇಳಬಹುದಾಗಿದೆ. ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ಗೆ ತಯಾರಿಯಲ್ಲಿರುವ ಭಾರತ ವಿದೇಶದ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಿ ಶ್ರೇಷ್ಠ ನಿರ್ವಹಣೆ ತೋರಿಸಿದೆ.

ಸ್ಪೇನ್ ಕೋಚ್ ಜೋಸ್ ಬ್ರಾಸಾರನ್ನು ರಾಷ್ಟ್ರೀಯ ತಂಡಕ್ಕೆ ನೇಮಿಸಿದ್ದು, ನಾಯಕತ್ವವನ್ನು ಸಂದೀಪ್ ಸಿಂಗ್‌ರಿಂದ ರಾಜ್ಪಾಲ್‌ರೆಗ ಹಸ್ತಾಂತರಿಸಿದ್ದು, ಹಾಕಿ ಫೆಡರೇಷನ್‌ಗಳ ಬದಲು ಹಾಕಿ ಇಂಡಿಯಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಗೋಲ್‌ಕೀಪರ್ ಬಲ್ಜೀತ್ ಸಿಂಗ್ ಕಣ್ಣಿಗೆ ಗಾಯ ಮಾಡಿಕೊಂಡದ್ದು ಮುಂತಾದುವು ಈ ಬಾರಿಯ ಪ್ರಮುಖ ಘಟಾನವಳಿಗಳು.

ಪದಕ ನಿರೀಕ್ಷೆಯಲ್ಲಿ ಬಾಕ್ಸಿಂಗ್ ಪಟುಗಳು...
PTI
ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ 2008ನೇ ವರ್ಷವನ್ನು ಸ್ಮರಣೀಯವಾಗಿಸಿದ್ದ ವಿಜೇಂದರ್ ಸೇರಿದಂತೆ ಭಾರತೀಯ ಬಾಕ್ಸರುಗಳು ಮುಂದಿನ ವರ್ಷದ ಗೇಮ್ಸ್‌ನಲ್ಲಿ ಪದಕಗಳ ರಾಶಿ ಹಾಕುವ ಕನಸು ಹೊಂದಿದ್ದಾರೆ.

ಸೆಪ್ಟಂಬರ್‌ನ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ ವಿಜೇಂದರ್, ಈ ಸಾಧನೆಗೈದ ಮೊದಲ ಭಾರತೀಯರೆನಿಸಿಕೊಂಡು ತನ್ನ ಸಾಮರ್ಥ್ಯವನ್ನು ಬಯಲುಗೊಳಿಸಿದ್ದರು.

ಜಿತೇಂದರ್ ಕುಮಾರ್, ಸುರಂಜಯ್ ಸಿಂಗ್, ತೊಕ್ಚೊಮ್ ನ್ಯಾನೋ ಸಿಂಗ್, ಅಖಿಲ್ ಕುಮಾರ್ ಕೂಡ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ ಈ ವರ್ಷ.

75 ಕೆ.ಜಿ. ವಿಭಾಗದಲ್ಲಿ ನಂ.1 ಪಟ್ಟಕ್ಕೇರಿದ ವಿಜೇಂದರ್ ಪ್ರತಿಷ್ಠಿತ 'ಖೇಲ್ ರತ್ನ' ಪ್ರಶಸ್ತಿ ಗೌರವವನ್ನು ಬೀಜಿಂಗ್ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಮತ್ತು ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಜೊತೆ ಹಂಚಿಕೊಂಡರು.

ಮಹಿಳಾ ಬಾಕ್ಸಿಂಗನ್ನು ಲಂಡನ್ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಿದ್ದು ಈ ವಿಭಾಗದಲ್ಲಿ ಭಾರತಕ್ಕೆ ದಕ್ಕಿದ ಮತ್ತೊಂದು ಸಿಹಿ ಸುದ್ದಿ.

ಫೋರ್ಸ್ ಇಂಡಿಯಾ ಸಾಧನೆ...
ಉದ್ಯಮಿ ವಿಜಯ ಮಲ್ಯರವರ ಫೋರ್ಸ್ ಇಂಡಿಯಾ ಮೊತ್ತ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದ್ದು ಭಾರತೀಯ ಎಫ್1 ಅಭಿಮಾನಿಗಳಿಗೆ ತೀವ್ರ ಸಂತಸವನ್ನುಂಟು ಮಾಡಿತ್ತು.

ಮುಂದಿನ ವರ್ಷದಲ್ಲಿ ಭಾರತವು ಕ್ರೀಡೆಯ ಈ ವಿಭಾಗದಲ್ಲಿಯೂ ಪ್ರಾಬಲ್ಯ ಮೆರೆಯುವುದನ್ನು ಭಾರತವು ಎದುರು ನೋಡುತ್ತಿದ್ದು, ಮೊತ್ತ ಮೊದಲ ರ‌್ಯಾಂಕಿಂಗ್ ಪಾಯಿಂಟ್ ಪಡೆದಿರುವುದು ಪ್ರೋತ್ಸಾಹ ನೀಡುವ ನಿರೀಕ್ಷೆಯಿದೆ.

ವಾಡಾದೆದುರು ಬಾಡಿದವರು...
ವೇಟ್‌ಲಿಫ್ಟಿಂಗ್ ಸೇರಿದಂತೆ ಇನ್ನಿತರ ವಿಭಾಗದಲ್ಲಿ ಭಾರತದ 24 ಅಥ್ಲೆಟ್‌ಗಳು ಉದ್ದೀಪನಾ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದದ್ದು ತೀರಾ ಕಹಿ ಔಷಧಿಯೆನಿಸಿತು. ವೇಟ್‌ಲಿಪ್ಟಿಂಗ್‌ನ ಏಳು, ಬಾಡಿ ಬಿಲ್ಡಿಂಗ್ ಮತ್ತು ಅಥ್ಲೆಟಿಕ್ಸ್‌ನ ತಲಾ ಎರಡು, ಸ್ಲೈಕ್ಲಿಂಗ್ ಮತ್ತು ಜುಡೋ ವಿಭಾಗದ ತಲಾ ಒಂದರಂತೆ ಕ್ರೀಡಾಪಟುಗಳು ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದರು. ಇದರಲ್ಲಿ 11 ಮಂದಿಯ ಭವಿಷ್ಯ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ. ಇದೇ ಕಾರಣದಿಂದ ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಷನ್ ನಿಷೇಧ ಭೀತಿಯನ್ನೂ ಎದುರಿಸುತ್ತಿದೆ.

ಭುಟಿಯಾ ವಿವಾದದಲ್ಲಿ...
ಫೈನಲ್‌ನಲ್ಲಿ ಸಿರಿಯಾವನ್ನು 6-5ರ ಅಂತರದಲ್ಲಿ ಮಣಿಸಿದ ಭಾರತ ಸತತ ಎರಡನೇ ಬಾರಿಗೆ ಒಎನ್‌ಜಿಸಿ ನೆಹರು ಕಪ್ ಗೆದ್ದುಕೊಂಡು ಫುಟ್ಬಾಲ್ ಅಭಿಮಾನಿಗಳಲ್ಲಿ ಮಿಂಚು ಹರಿಸಿತ್ತು. ಭಾರತದ ಗೆಲುವಿನ ರೂವಾರಿಗಳಾದ ಸುಬ್ರಾತಾ ಪಾಲ್ ಅಖಿಲ ಭಾರತ ಪುಟ್ಬಾಲ್ ಫೆಡರೇಶನ್‌ನ 'ವರ್ಷದ ಆಟಗಾರ ಪ್ರಶಸ್ತಿ'ಯನ್ನೇ ವಶಪಡಿಸಿಕೊಂಡರು.

ಅದೇ ರೀತಿ ಕೊಲ್ಕತ್ತಾ ಫುಟ್ಬಾಲ್ ಕ್ಲಬ್ ಮೋಹನ್ ಬಗಾನ್ ನಾಯಕರಾಗಿದ್ದ ಬೈಚುಂಗ್ ಭುಟಿಯಾರನ್ನು ವಜಾಗೊಳಿಸಿದ್ದು ಸಾಕಷ್ಟು ವಿವಾದಕ್ಕೆಡೆ ಮಾಡಿತ್ತು. ಬಳಿಕ ಅವರು ಮತ್ತೊಂದು ತಂಡವನ್ನು ಸೇರಿಕೊಂಡರೂ ವಿವಾದ ಇನ್ನೂ ತಣ್ಣಗಾಗಿಲ್ಲ.

ಇತರ ಕ್ರೀಡೆಗಳು...
ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್‌ 2009 ಚೊಚ್ಚಲ ಬಾರಿಗೆ ಗೆದ್ದುಕೊಂಡ 24ರ ಹರೆಯದ ಬೆಂಗಳೂರಿಗ ಪಂಕಜ್ ಅಡ್ವಾಣಿ ಭಾರತೀಯರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದವರು. ಚೆಸ್ ಸಾಮ್ರಾಟ್ ವಿಶ್ವನಾಥನ್ ಆನಂದ್ ಈ ಬಾರಿ ಹೆಚ್ಚಿನ ಸಾಧನೆ ಮೆರೆಯಲು ಅಸಾಧ್ಯವಾದರೂ, ಯುವ ಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಯತ್ನಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ...
ಬರ್ಲಿನ್ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ತನ್ನದೇ ಹೆಸರಲ್ಲಿದ್ದ ದಾಖಲೆ ಅಳಿಸಿ ಹಾಕಿದ್ದ ಉಸೈನ್ ಬೋಲ್ಟ್ ಪ್ರಸಕ್ತ ವರ್ಷದ 'ವಿಶ್ವ ಕ್ರೀಡಾಪಟು' ಎಂದೇ ಹೆಸರಿಸಬಹುದಾಗಿದೆ. ಈಜು ವಿಭಾಗದಲ್ಲಿ ಮೈಕೆಲ್ ಫೆಲ್‌ಪ್ಸ್ ದ್ರವ್ಯ ಸೇವನೆ ವಿವಾದ, ವುಡ್ಸ್ ಪ್ರಕರಣ, ಆಂದ್ರೆ ಅಗಾಸ್ಸಿ ಆತ್ಮಚರಿತ್ರೆ ವಿವಾದ, ಸೆರೆನಾ ವಿಲಿಯಮ್ಸ್ ನಿಂದನೆ ಹಾಗೂ ನಗ್ನ ಫೋಸ್ ವಿವಾದ, ಟೆನಿಸ್ಸಿಗೆ ಮರಳಿದ ಮರಿಯಾ ಶರಪೋವಾ, ವಿಶ್ವ ದಾಖಲೆಯ 15 ಗ್ರ್ಯಾಂಡ್‌ಸ್ಲಾಮ್ ಸಾಧನೆಗೈದ ರೋಜರ್ ಫೆಡರರ್, ಗಾಯದ ತೊಂದರೆಗೆ ಸಿಲುಕಿದ ರಾಫೆಲ್ ನಡಾಲ್ ನಲುಗಿದ್ದು ಮುಂತಾದುವು ಜಾಗತಿಕ ಮಟ್ಟದಲ್ಲಿ ಶೀರ್ಷಿಕೆ ಮೂಡಿಸಿದ ಸುದ್ದಿಗಳು.

ಒಟ್ಟಾರೆಯಾಗಿ ವಿಶ್ವ ಕ್ರೀಡೆಯಲ್ಲಿ ಹಲವು ಏರಿಳಿತವನ್ನು 2009ರ ಈ ವರ್ಷ ಕಂಡರೂ ಮುಂದಿನ ವರ್ಷದ ಹಾಕಿ ವಿಶ್ವಕಪ್, ಕಾಮನ್‌ವೆಲ್ತ್ ಗೇಮ್ಸ್ ಮುಂತಾದ ಪ್ರತಿಷ್ಠಿತ ಕ್ರೀಡಾಕೂಟಗಳತ್ತ ಭಾರತ ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದೆ. ಇಲ್ಲಿ ಭಾರತೀಯರ ಸಾಧನೆ ಹೇಗಿರುತ್ತದೆ ಎಂಬುದು ವರ್ಷದೊಳಗೆ ತೆರೆದುಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ