ಗಾಸಿಪ್, ವಿವಾದದಲ್ಲಿ ಕನ್ನಡ ಚಿತ್ರರಂಗ ಕಮ್ಮಿಯೇನಿಲ್ಲ!

100ಕ್ಕೂ ಹೆಚ್ಚು ಚಿತ್ರ ಕೊಟ್ಟು ಆ ಚಿತ್ರಗಳಲ್ಲಿ ಹೆಚ್ಚಿನ ಎಲ್ಲವು ತಮ್ಮ ಅತ್ಯುತ್ತಮ ಗುಣಮಟ್ಟದಿಂದ ಹೊರರಾಜ್ಯದಲ್ಲಿ ಸುದ್ದಿ ಮಾಡದಿದ್ದರೇನಂತೆ? ನಮ್ಮ ಕನ್ನಡ ಚಿತ್ರರಂಗ ವಿವಾದ ಸೃಷ್ಟಿಸಿ ಸುದ್ದಿ ಮಾಡುವುದರಲ್ಲಿ ಕಡಿಮೆಯೇನಿಲ್ಲ. ಹಾಗೆ ನೋಡಿದರೆ, ಈ ವರ್ಷ ವಿವಾದದಲ್ಲಿ ಸ್ವಲ್ಪ ಎತ್ತರಕ್ಕೇರಿದ್ದೇವೇನೋ! ಹೊರರಾಜ್ಯದಲ್ಲೂ ನಮ್ಮ ನಟ ನಟಿಯರು ವಿವಾದದ ಸುದ್ದಿ ಪಸರಿಸಿದ್ದಾರೆ.

ವಿಚಿತ್ರವೆಂದರೆ ಈ ಬಾರಿ ವಿವಾದಕ್ಕೊಳಗಾಗಿ ಸುದ್ದಿ ಮಾಡಿದವರಲ್ಲಿ ನಟಿಯರೇ ಹೆಚ್ಚು. ಶ್ರುತಿ ವಿಚ್ಛೇದನ ಪ್ರಕರಣ, ರಮ್ಯಾ ರಂಪಾಟ, ನಾನು ನನ್ನ ಕನಸಿನಿಂದ ರಮ್ಯಾ ಔಟ್ ಆಗಿದ್ದು, ಐಂದ್ರಿತಾ ಕಪಾಳ ಮೋಕ್ಷ, ಸುದೀಪ್- ದಿನೇಶ್ ಗಾಂಧಿ ಜಿದ್ದಾಜಿದ್ದಿ, ನಿರ್ದೇಶಕ ದಿನೇಶ್ ಬಾಬು ವಿರುದ್ಧ ವಿಷ್ಣುವರ್ಧನ್ ವಾಗ್ದಾಳಿ, ದಿಗಂತ್ ಇಬ್ಬರು ನಟಿಯರ ಜೊತೆಗೆ ಹಾಸಿಗೆ ಹಂಚಿಕೊಂಡರೆಂಬ ಆರೋಪ- ಪ್ರತ್ಯಾರೋಪ, ನಿಜಜೀವನದ ಅಪ್ಪ ಮಗಳು ನಾಯಕ ನಾಯಕಿಯರಾಗಿ ತೆರೆಯಲ್ಲಿ ರೊಮ್ಯಾನ್ಸು, ವಿದೇಶದಲ್ಲಿ ರಾಜ್ ಚಿತ್ರ ಬಿಡುಗಡೆ, ಜಗ್ಗೇಶ್- ಗುರುಪ್ರಸಾದ್ ಜೋಡಿಯ ವಿರಸ, ದ್ವಾರಕೀಶ್ ಆಪ್ತರಕ್ಷಕದ ಮೇಲಿನ ಮುನಿಸು, ಉಮಾಶ್ರೀಗೆ ಅವಮಾನ, ಶುಭಾ ಪೂಂಜಾ- ವಿಜಯ್ ಮದುವೆ ಸುದ್ದಿ, ರಾಧಿಕಾರಿಂದ ಹೆಣ್ಣು ಮಗುವಿಗೆ ಜನನ ಹೀಗೆ ಪಟ್ಟಿ ಮಾಡುತ್ತಾ ಹೋದರೆ ತಿಂಗಳಿಗೆರಡರಂತೆ ವರ್ಷವಿಡೀ ವಿವಾದಗಳೇ ನಡೆದಿದ್ದು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

MOKSHA
ಶ್ರುತಿ ವಿಚ್ಛೇದನ- ಪ್ರೇಮ ಪ್ರಕರಣ: ಭಾವಪೂರ್ಣ ನಟಿಯೆಂದೇ ಗುರುತಿಸಿಕೊಂಡು ಮಹಿಳೆಯರ ಕಣ್ಮಣಿಯಾಗಿದ್ದ ಶ್ರುತಿ ತನ್ನ ಪತಿ ಮಹೇಂದರ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದು ಭಾರೀ ಸುದ್ದಿಯಾಗಿಹೋಯಿತು. ತೆರೆಯಲ್ಲಿ ಅಳುಮುಂಜಿಯಾದರೂ, ನಾನು ನಿಜಜೀವನದಲ್ಲಿ ಅಳುಮುಂಜಿಯಲ್ಲ, ನನಗೆ ಬದುಕ್ನು ಎದುರಿಸುವ ಗಟ್ಟಿತನವಿದೆ ಎಂದು ಟಿವಿ ಪರದೆಗಳಲ್ಲಿ ಹೇಳಿಕೊಂಡರೂ, ಮಾರನೇ ದಿನವೇ ತಾನು ಒಂದು ದೋಣಿಯಿಂದ ಇನ್ನೊಂದು ದೋಣಿಗೆ ಬದುಕು ಕಂಡುಕೊಳ್ಳಲು ಹಾರಿದ್ದೇನೆ ಎನ್ನುವ ಮೂಲಕ ತನ್ನ ಹೊಸ ಗೆಳೆಯ, ಪತ್ರಕರ್ತ ಚಂದ್ರಚೂಡರನ್ನು ಪರಿಚಯಿಸಿದ್ದರು. ಇದು ತೀರಾ ಖಾಸಗಿ ಪ್ರಕರಣವಾದರೂ ಶ್ರುತಿ- ಮಹೇಂದರ್ ವಿಚ್ಚೇದನ ವಿವಾದ ಸ್ವರೂಪವನ್ನೇ ತಾಳಿತ್ತು. ಶ್ರುತಿ ಅಭಿಮಾನಿಗಳ ಮನದಲ್ಲಿ ಕುಖ್ಯಾತಿ ಪಡೆದರು. ಆದರೆ ಪತ್ರಕರ್ತ ಚಂದ್ರಚೂಡ್ ಜೀವನದಿಂದಲೂ ಶ್ರುತಿ ಬೇರೆಯಾಗಿದ್ದಾರೆಂಬ ಸುದ್ದಿ ಕೆಲವೇ ತಿಂಗಳಲ್ಲಿ ಗಾಂಧಿನಗರದ ಗಾಸಿಪ್ ಕೇಂದ್ರಗಳಲ್ಲಿ ಅಡ್ಡಾಡಿದ್ದೂ ಸುಳ್ಳಲ್ಲ.

MOKSHA
ರಮ್ಯಾ ರಂಪಾಟ: ಇನ್ನು ವಿವಾದಗಳಲ್ಲೇ ಸುದ್ದಿ ಮಾಡುವ ಛಾತಿಯುಳ್ಳ ರಮ್ಯಾ ಈ ವರ್ಷವಿಡೀ ಸಿನಿಮಾಗಳಲ್ಲಿ ಸುದ್ದಿ ಮಾಡಲೇ ಇಲ್ಲ. ಆದರೆ ಪತ್ರಿಕೆಗಳಲ್ಲಿ ತನ್ನ ರಂಪಾಟಗಳ ಮೂಲಕ ಸಾಕಷ್ಟು ಜಾಗ ಗಿಟ್ಟಿಸಿಕೊಂಡಿರುವುದಂತೂ ಸುಳ್ಳಲ್ಲ. ವರ್ಷದ ಆರಂಭದಲ್ಲೇ ಪತ್ರಿಕಾಗೋಷ್ಠಿಯೊಂದರಲ್ಲಿ ಪತ್ರಕರ್ತರ ಬಳಿ 'ನಾನು ನಿಮ್ಮನ್ನು ಇಲ್ಲಿಗೆ ಕರೆದಿಲ್ಲ, ಇಷ್ಟವಿಲ್ಲದವರು ಎದ್ದುಹೋಗಬಹುದು' ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. ಪತ್ರಕರ್ತರಂತೂ ರಮ್ಯಾ ನಡವಳಿಕೆಗೆ ಬೇಸತ್ತು ಪತ್ರಿಕಾಗೋಷ್ಠಿಯ್ನನೇ ತ್ಯಜಿಸಿದ್ದರು. ನಂತರ ಜಸ್ಟ್ ಮಾತ್ ಮಾತಲಿ ಚಿತ್ರೀಕರಣದ ಸೆಟ್ಟಿನಲ್ಲಿ ನೃತ್ಯ ನಿರ್ದೇಶಕ ಹರ್ಷ ಹಾಗೂ ಸುದೀಪ್ ಜೊತೆಗೆ ಜಗಳವೇ ನಡೆಯಿತು. ತನ್ನ ಕೆನ್ನೆಗೆ ಮುಂಗುರುಳು ಬಿದ್ದುದರಿಂದ ಹಾಡಿನ ದೃಶ್ಯವನ್ನು ಮತ್ತೆ ಶೂಟ್ ಮಾಡಬೇಕೆಂಬ ರಮ್ಯಾ ವಾದವನ್ನು ಹರ್ಷ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ರಮ್ಯಾ ಹರ್ಷರೊಂದಿಗೆ ಜಗಳವಾಡಿ ಸೆಟ್ಟಿನಿಂದ ಹೊರ ನಡೆದಿದ್ದರು. ರಮ್ಯಾ ನೃತ್ಯ ನಿರ್ದೇಶಕರಿಗೆ ಅವಮಾನ ಮಾಡಿದ್ದಾರೆಂದು ದಕ್ಷಿಣ ಭಾರತೀಯ ಚಲನಚಿತ್ರ ಕಲಾವಿದರು ರಮ್ಯಾರ ಚಿತ್ರಗಳಿಗೆ ನೃತ್ಯ ಮಾಡುವುದಿಲ್ಲವೆಂದು ಬಹಷ್ಕಾರ ಹೂಡಿದ್ದರು. ಈ ರಂಪಾಟ ತಾರಕಕ್ಕೇರಿ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿ ನಂತರ ರಮ್ಯಾ ಚಿತ್ರತಂಡದ ಬಳಿ ಕ್ಷಮೆ ಕೇಳುವಲ್ಲಿಗೆ ಪ್ರಕರಣ ಇತ್ಯರ್ಥವಾಯಿತು. ಆದರೂ ರಮ್ಯ ಚಿತ್ರತಂಡದಿಂದ ಹೊರಗುಳಿದರು. ಇದೇ ರಮ್ಯ ಮತ್ತೆ ಮೊನ್ನೆ ಮೊನ್ನೆ ಪ್ರಕಾಶ್ ರೈಯ ಚೊಚ್ಚಲ ನಿರ್ದೇಶನವಾದ ನಾನು ನನ್ನ ಕನಸು ಚಿತ್ರತಂಡದಿಂದ ಸಂಭಾವನೆ ಸಾಲದೆಂಬ ವಿಚಾರವಾಗಿ ಮುನಿಸಿಕೊಂಡದ್ದಕ್ಕೆ ಚಿತ್ರತಂಡ ರಮ್ಯಾರನ್ನು ತಮ್ಮ ಚಿತ್ರದಿಂದ ಹೊರದಬ್ಬಿದೆ.

MOKSHA
ಮೇಷ್ಟ್ರ ಜೀವನದಲ್ಲೊಂದು ಕಪ್ಪುಚುಕ್ಕೆ: ತನ್ನ ಸೌಂದರ್ಯದಿಂದಲೇ ಮೋಡಿ ಮಾಡಿದ ಐಂದ್ರಿತಾ ರೇ ಎಂಬ ಬೆರಗುಗಣ್ಣಿನ ಚೆಲುವೆಯೂ ನಾಗತಿಹಳ್ಳಿ ಚಂದ್ರಶೇಖರ್ ಕೈಯಿಂದ ಹಾಂಗ್‌ಕಾಂಗ್‌ನಲ್ಲಿ ನೂರು ಜನ್ಮಕೂ ಶೂಟಿಂಗ್ ಸಂದರ್ಭ ಸೆಟ್ಟಿಗೆ ಲೇಟಾಗಿ ಬಂದುದಕ್ಕೆ ಪೆಟ್ಟು ತಿಂದು ಮಾಧ್ಯಮಗಳ ಮುಂದೆ ಕಣ್ಣೀರುಗರೆದಿದ್ದು ಸ್ಯಾಂಡಲ್‌ವುಡ್ಡಿನ ಸದ್ಯದ ದೊಡ್ಡ ಸುದ್ದಿಯಾಗಿತ್ತು. ಈ ಸುದ್ದು ಕೇಳಿ ಹೌಹಾರಿದ್ದ ಕನ್ನಡ ಚಿತ್ರರಂಗ, ಯಾವಾಗಲೂ ಶಾಂತವಾಗಿಯೇ ಇರುವ ಮೇಷ್ಟ್ರು ಕಪಾಳಮೋಕ್ಷ ಮಾಡಿದ್ದು ನಿಜವೇ ಎಂದು ಮೂಗಿನ ಮೇಲೆ ಬೆರಳಿಟ್ಟಿತ್ತು. ಈ ಪ್ರಕರಣದಲ್ಲಿ ನಾಗತಿ ವಿರುದ್ಧ ಐಂದ್ರಿತಾ, ನಾಗತಿಹಳ್ಳಿ ಮೇಷ್ಟ್ರೆಂದು ಕರೆಸಿಕೊಳ್ಳಲು ನಾಲಾಯಕ್ಕು, ಅವರೊಬ್ಬ ವುಮನೈಸರ್ ಎಂಬ ವಿವಾದಾಸ್ಪದ ಹೇಳಿಕೆಯನ್ನೂ ನೀಡಿದ್ದರು. ಪ್ರಕರಣ ವಾಣಿಜ್ಯ ಮಂಡಳಿ ಮೆಟ್ಟಿಲೇರಿ ಐಂದ್ರಿತಾ ಬಳಿಯಲ್ಲಿ ನಾಗತಿಹಳ್ಳಿ ಕ್ಷಮೆ ಕೇಳಿದ ಶಾಸ್ತ್ರವೂ ಮುಗಿಯಿತು. ಸ್ವತಃ ಜಯಮಾಲಾ ಅವರೇ ನಾಗತಿಹಳ್ಳಿ ಹೊಡೆದದ್ದು ತಪ್ಪು ಎಂದಿದ್ದರು. ಐಂದ್ರಿತಾ ಹಾಗೂ ನಾಗತಿಹಳ್ಳಿ ಇಬ್ಬರೂ ಇನ್ನು ಮುಂದೆ ಈ ಪ್ರಕರಣದ ಬಗ್ಗೆ ಮಾತಾಡಬಾರದೆಂದು ಹೇಳಲಾಯ್ತು. ಆದರೆ ಇವೆಲ್ಲ ಮುಗಿದ ಮೇಲೆ ನಾಗತಿಹಳ್ಳಿ, ತಾನು ಐಂದ್ರಿತಾ ಬಳಿ ಕ್ಷಮೆಯೇ ಕೇಳಿಲ್ಲ ತನ್ನ ಮಾತು ಮುರಿದರು. ಒಟ್ಟಾರೆ ಈ ಪ್ರಕರಣ ಸ್ಯಾಂಡಲ್‌ವುಡ್ಡಿನ ಮೇಸ್ಟ್ರು ಎಂದೇ ಖ್ಯಾತಿ ಪಡೆದ ನಾಗತಿಹಳ್ಳಿ ಚಂದ್ರಶೇಖರರ ವೃತ್ತಿಜೀವನದಲ್ಲೊಂದು ಕಪ್ಪುಚುಕ್ಕೆಯಾಗಿ ಹೋಯಿತೆಂದರೆ ತಪ್ಪಲ್ಲ.

MOKSHA
ದಿಗಂತ್ ಡ್ಯುಯೆಟ್: ಗುಳಿಕೆನ್ನೆಯ ದೂದ್‌ಪೇಡ ಚೆಲುವ ನಟ ದಿಗಂತ್ ಇ-ಪ್ರೀತಿ ಚಿತ್ರದ ಶೂಟಿಂಗಿನಲ್ಲಿ ವಿದೇಶದಲ್ಲಿ ಇಬ್ಬರು ನಟಿಯರ ಜೊತೆಗೆ ಹಾಸಿಗೆ ಹಂಚಿಕೊಂಡರು ಎಂದು ನಿರ್ದೇಶಕಿ ಪ್ರಿಯಾ ವಾಣಿಜ್ಯ ಮಂಡಳಿಗೆ ನೀಡಿದ ಇಮೇಲ್ ದೂರು ರಾದ್ದಾಂತವಾಯಿತು. ಅಲ್ಲದೆ, ದಿಗಂತ್ ತನ್ನ ಕ್ರೆಡಿಟ್ ಕಾರ್ಡು ಬಳಸಿ ವಿದೇಶದಲ್ಲಿ ಖರೀದಿ ಮಾಡಿ ಮಜಾ ಉಡಾಯಿಸಿದ್ದಾರೆ ಎಂದೂ ಪ್ರಿಯಾ ದೂರಿಕೊಂಡರು. ಪ್ರಕರಣ ವಾಣಿಜ್ಯ ಮಂಡಳಿ ಮೆಟ್ಟಿಲೇರಿದೆ. ತನ್ನ ಬಳಿ ನಿರ್ದೇಶಕಿ ಕ್ಷಮೆ ಕೋರಬೇಕೆಂದು ದಿಗಂತ್ ಪಟ್ಟು ಹಿಡಿದರೆ, ಪ್ರಿಯಾ ಕ್ಷಮೆ ಕೇಳೋದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಒಟ್ಟಾರೆ ಇ-ಪ್ರೀತಿ ಅರ್ಧಕ್ಕೇ ನಿಂತಿದೆ.

MOKSHA
ಶುಭಾ ಪೂಂಜಾ ಹಾಗೂ ದುನಿಯಾ ಖ್ಯಾತಿಯ ವಿಜಯ್ ಇಬ್ಬರೂ ಶಿವಮೊಗ್ಗದಲ್ಲಿ ಮದುವೆಯಾದರು ಎಂದೇ ಸುದ್ದಿಯಾಯ್ತು. ಮದುವೆಯಾದುದನ್ನು ಸೆರೆಹಿಡಿಯಲು ಹೋದ ಪತ್ರಕರ್ತರಿಗೆ ಕಪಾಳಮೋಕ್ಷವಾಗಿ ವಿವಾದ ಸೃಷ್ಟಿಯಾಯ್ತು. ಶುಭಾ ಪೂಂಜಾ, 'ನಾನು- ವಿಜಯ್ ಇಬ್ಬರೂ ಕೇವಲ ಫ್ರೆಂಡ್ಸ್' ಎಂದು ರಾಗವೆಳೆಯುತ್ತಲೇ ಇದ್ದಾರೆ. ಇನ್ನು ಹೌಸ್‌ಪುಲ್ ಎಂಬ ಚಿತ್ರಕ್ಕಾಗಿ ಕರಾವಳಿಯಲ್ಲಿ ಬೃಹತ್ ಚಾಪ್ಲಿನ್ ಪ್ರತಿಮೆ ನಿಲ್ಲಿಸಲು ಹೋದ ನಿರ್ದೇಶಕ ಹೇಮಂತ್ ಹೆಗಡೆ ಭಾರೀ ಪ್ರತಿಭಟನೆಯನ್ನೇ ಎದುರಿಸಬೇಕಾಯ್ತು. ಇದು ಮತೀಯ ಗಲಭೆಗೆ ನಾಂದಿಯಾಯಿತು. ಚಾಪ್ಲಿನ್ ಪ್ರತಿಮೆ ನಿರ್ಮಾಣ ರದ್ದಾಯಿತು. ಪುಕ್ಕಟೆ ಪ್ರಚಾರ ಪಡೆದ ಹೌಸ್‌ಫುಲ್ 50 ದಿನ ಓಡಿತು.

ಅಪ್ಪ- ಮಗಳ ರೊಮ್ಯಾನ್ಸು: ನಿಜಜೀವನದಲ್ಲಿ ಅಪ್ಪ- ಮಗಳಾದ ಬಿ.ಪಿ.ಶ್ರೀನಿವಾಸ್ ಹಾಗೂ ಶಾಲಿನಿ ನಾಯಕ ನಾಯಕಿಯಾಗಿ ನಟಿಸಿದ ಮುಸ್ಸಂಜೆಯ ಗೆಳತಿ ಚಿತ್ರ ಬಿಡುಗಡೆಗೂ ಮೊದಲು ಸಾಕಷ್ಟು ಸುದ್ದಿಗೆ ಗ್ರಾಸವಾಯ್ತು. ಚಿತ್ರರಂಗದ ಮಂದಿ ಹಾಗೂ ಸಾರ್ವಜನಿಕರಿಂದಲೂ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದರೂ, ಬಿಡುಗಡೆಯ ನಂತರ ಹೇಳಹೆಸರಿಲ್ಲದಂತೆ ಚಿತ್ರಮಂದಿರಗಳಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಎತ್ತಂಗಡಿಯಾಯ್ತು.
MOKSHA


ವೀರಮದಕರಿ ಚಿತ್ರವೂ ಸುದ್ದಿ ಮಾಡಿದ್ದೇನೂ ಕಡಿಮೆಯಿಲ್ಲ. ಚಿತ್ರ ಬಿಡುಗಡೆವರೆಗೂ ಹೆಗಲ ಮೇಲೆ ಕೈಹಾಕಿ ಖಾಸಾ ದೋಸ್ತಿಗಳಂತೆ ತಿರುಗುತ್ತಿದ್ದ ನಟ, ನಿರ್ದೇಶಕ ಸುದೀಪ್ ಹಾಗೂ ನಿರ್ಮಾಪಕ ದಿನೇಶ್ ಗಾಂಧಿ ಕಚ್ಚಾಡಿಕೊಂಡು ಬೇರೆಬೇರೆಯಾದರು. ನಿರ್ದೇಶಕ ಎಸ್.ನಾರಾಯಣ್ ತನ್ನ ಜೊತೆ ಮಾತಾಡುತ್ತಿಲ್ಲ ಎಂದು ಮುದ್ದು ನಟಿ ಅಮೂಲ್ಯ ಅಲವತ್ತುಕೊಂಡರು. ರಾಗಿಣಿ ಐಟಂ ಡ್ಯಾನ್ಸ್ ಮಾಡಿದ್ದಾಳೆಂದು ದರ್ಶನ್ ತನ್ನ ಚಿತ್ರದಿಂದ ಆಕೆಗೆ ಗೇಟ್ ಪಾಸ್ ನೀಡಲು ಆದೇಶ ಹೊರಡಿಸಿದರು. ಲೂಸ್ ಮಾದ ಯೋಗಿಗೂ ನಟಿ ಪ್ರಜ್ಞಾಗೂ ಮದುವೆಯಂತೆ ಎಂಬ ಸುದ್ದಿಯೂ ಗಾಂಧಿನಗರಿಯಲ್ಲಿ ಹವಾ ಸೃಷ್ಟಿಸಿತು. ಬಳ್ಳಾರಿ ನಾಗ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ನಿರ್ಮಾಪಕ ಕೆ.ಮಂಜು ಇಬ್ಬರೂ ನಿರ್ದೇಶಕ ದಿನೇಶ್ ಬಾಬು ವಿರುದ್ಧ ನಿರ್ದೇಶಕನ ಹೊಣೆ ನಿಭಾಯಿಸದಿದ್ದುದರ ಬಗ್ಗೆ ವಾಗ್ದಾಳಿ ನಡೆಸಿ ಸುದ್ದಿಯಾದರು. ತಮಿಳಿನ ಕಮಲ್ ಹಾಸನ್ ತನ್ನ 50ನೇ ವೃತ್ತಿ ಜೀವನದ ವರ್ಷಾಚರಣೆಗೆ ತನಗೆ ಸರಿಯಾಗಿ ಪ್ರೀತಿಯ ಆಮಂತ್ರಣ ನೀಡಲಿಲ್ಲವೆಂದು ವಿಷ್ಣು ಹತಾಶೆ ಹೊರಹಾಕಿದರು. ಅಂಬರೀಷ್ ಕಲಾವಿದರ ಅಸಹಕಾರಕ್ಕೆ ಬೇಸತ್ತು ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮತ್ತೆ ಕಲಾವಿದರ ಒತ್ತಾಯದಿಂದ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡರು. ರಾಜಕೀಯ ವಲಯದಲ್ಲಿ ಸ್ವಲ್ಪ ಸಲುಗೆಯಿಂದ ಓಡಾಡುತ್ತಿದ್ದಾಳೆ ಎಂದು ಮಳೆ ಹುಡುಗಿ ಪೂಜಾ ಗಾಂಧಿಯೂ ಗಾಸಿಪ್ ಕಾಲಂಗಳಲ್ಲಿ ಮಿಂಚಿದರು. ಚಿತ್ರ ಜೀವನದಿಂದ ಸರಿದು ವರ್ಷಗಳಾದರೂ ನಟಿ ರಾಧಿಕಾ ಬೆಂಗಳೂರಿನ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹೆತ್ತು ಸುದ್ದಿ ಮಾಡಿದ್ದಾರೆ. ಆಗೀಗ ರಾಧಿಕಾ ಜೊತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯೂ ಕಾಣಿಸಿಕೊಂಡಿದ್ದು ಕೂಡಾ ಸುದ್ದಿಯಾಗುತ್ತಿದೆ. ಎದ್ದೇಳು ಮಂಜುನಾಥ ಚಿತ್ರದ ಯಶಸ್ಸು ತನಗೇ ಸಲ್ಲಬೇಕೆಂದು ಜಿದ್ದಾಜಿದ್ದಿಯಾಡಿದ ಜಗ್ಗೇಶ್ ಹಾಗೂ ನಿರ್ದೇಶಕ ಗುರುಪ್ರಸಾದ್ ಬೇರೆಬೇರೆಯಾಗಿದ್ದು ಎಲ್ಲವೂ ಈ ವರ್ಷದ ಹೈಲೈಟ್ಸ್.

ಇನ್ನು ಚಿತ್ರಗಳ ಹೆಸರಿನ ಕುರಿತಾದ ವಿವಾದ ಇದ್ದದ್ದೇ. ವೀರಮದಕರಿ ವಿವಾದದಲ್ಲಿ ಸಿಕ್ಕಿಕೊಂಡು ಈ ಶತಮಾನದ ವೀರಮದಕರಿಯಾಯ್ತು. ಚಿತ್ರ ಶತದಿನೋತ್ಸವ ಆಚರಿಸಿಕೊಂಡಿತು. ಹೊಡಿಮಗ ಹ್ಯಾಟ್ರಿಕ್ ಹೊಡಿಮಗನಾದರೆ, ಕಿರಣ್‌ಬೇಡಿ ಕನ್ನಡದ ಕಿರಣ್‌ಬೇಡಿಯಾದಳು. ಹೀಗೆ ಈ ವರ್ಷ ಸುದ್ದಿ ಮಾಡಿದ ನಟಿಯರೂ ಹೆಚ್ಚು, ನಟರೂ ಹೆಚ್ಚು. ಆದರೆ ಚಿತ್ರಗಳು ಮಾತ್ರ ಬೆರಳೆಣಿಕೆಯಷ್ಟು ಎಂದು ಹೇಳದೆ ವಿಧಿಯಿಲ್ಲ!!!

ವೆಬ್ದುನಿಯಾವನ್ನು ಓದಿ