ಬಾಲಿವುಡ್ಡಿನ ಪಾಲಿಗೆ ಕರಾಳವಾದ 2009!

ಬಾಲಿವುಡ್ಡಿನ ಮಟ್ಟಿಗೆ 2009 ಅತ್ಯಂತ ಕರಾಳ ವರ್ಷ ಎನ್ನದೆ ವಿಧಿಯಿಲ್ಲ. ಕೋಟಿಗಟ್ಟಲೆ ಹಣವನ್ನು ನೀರಿನಂತೆ ಚಿತ್ರಗಳಿಗೆ ಸುರಿಯುತ್ತಿದ್ದ ನಿರ್ಮಾಪಕರು ಕೊಂಚ ಯೋಚಿಸಲಾರಂಭಿಸಿದ್ದು ಜಾಗತಿಕ ಆರ್ಥಿಕ ಕುಸಿತ ನೇರ ಪರಿಣಾಮ ಬಾಲಿವುಡ್ಡಿನ ಮೇಲಾದಾಗ. ಅಷ್ಟೇ ಅಲ್ಲ, ಹಂದಿಜ್ವರ, ಕ್ರಿಕೆಟ್ ಪಂದ್ಯಾವಳಿಗಳು, ಚುನಾವಣೆಯ ಬಿಸಿ ಇವೆಲ್ಲವೂ ಒಂದಾದರೊಂದರ ನಂತರ ಬಂದುದು ಸಿನಿಮಾ ವೀಕ್ಷಣೆಗೆ ತೊಡಕುಂಟು ಮಾಡಿತು. ಹಾಗಾಗಿ ಈ ವರ್ಷಾರಂಭವೇ ನಿರ್ಮಾಪಕರ ಪಾಲಿಗೆ ಕರಾಳವಾಯಿತು. ಒಂದು ಅಂದಾಜಿನ ಪ್ರಕಾರ ಬಾಲಿವುಡ್ ಈ ಬಾರಿ ಕಳೆದುಕೊಂಡಿದ್ದು ಬರೋಬ್ಬರಿ 700 ಕೋಟಿ ರೂಪಾಯಿಗಳು!

IFM
ನಷ್ಟವೋ ನಷ್ಟ: ಈ ಬಾರಿಯ ಭಾರೀ ಫ್ಲಾಪ್‌ಗಳೆಂದರೆ ಚಾಂದಿನಿ ಚೌಕ್ ಟು ಚೀನಾ, ಅಲಾದಿನ್, ಕುರ್ಬಾನ್‌ಗಳೆಂಬ ಅದ್ದೂರಿ ಬಜೆಟ್ಟಿನ ಚಿತ್ರಗಳು. ಸೇ.75ರಿಂದ 100ರಷ್ಟು ಹೂಡಿಕೆಯನ್ನು ನಿರ್ಮಾಪಕರು ಈ ಚಿತ್ರಗಳಿಂದಾಗಿ ಕಳೆದುಕೊಂಡರು. 51 ಕೋಟಿ ರೂಪಾಯಿಗಳ ವಾರ್ನರ್ ಬ್ರದರ್ಸ್ ನಿರ್ಮಾಣದ 'ಚಾಂದಿನಿ ಚೌಕ್ ಟು ಚೀನಾ' ಎಂಬ ಅಕ್ಷಯ್ ಕುಮಾರ್- ದೀಪಿಕಾ ಪಡುಕೋಣೆ ತಾರಾಗಣದ ಬಹುನಿರೀಕ್ಷೆಯ ಚಿತ್ರ ಗಲ್ಲಾಪಟ್ಟಿಗೆಯಲ್ಲಿ ಏನೇನೂ ಸಾಧನೆ ಮಾಡಲಾಗಲಿಲ್ಲ. ಶಾರುಖ್ ಖಾನ್ ನಿರ್ಮಾಣದ 23 ಕೋಟಿ ರೂಪಾಯಿ ವೆಚ್ಚದ 'ಬಿಲ್ಲೂ' ಚಿತ್ರ ಕೂಡಾ ಬಹುತಾರಾಗಣವಿದ್ದರೂ ಸೋತಿತು. ಯುಟಿವಿ ನಿರ್ಮಾಣದ 45 ಕೋಟಿ ರೂ ವೆಚ್ಚದ 'ಡೆಲ್ಲಿ 6' ಕೂಡಾ ಓಡಲಿಲ್ಲ. 'ಬ್ಲೂ' ಎಂಬ ಭಾರೀ ವೆಚ್ಚದ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿದ ಸಾಗರದಡಿಯ ರೋಮಾಂಚಕ ಥ್ರಿಲ್ಲರ್ ಚಿತ್ರ ಮಕಾಡೆ ಮಲಗಿತು. ಸಲ್ಮಾನ್ ಖಾನ್- ಕರೀನಾ ಕಪೂರ್ ತಾರಾಗಣದ 'ಮೈ ಔರ್ ಮಿಸಸ್ ಖನ್ನಾ' ಕೂಡಾ ಬಂದ ಹಾಗೆಯೇ ಹೇಳಹೆಸರಿಲ್ಲದಂತೆಯೇ ಎತ್ತಂಗಡಿಯಾಯ್ತು.

IFM
ವರ್ಷವಿಡೀ ಒಟ್ಟು 120 ಚಿತ್ರಗಳು ಬಿಡುಗಡೆ ಕಂಡಿವೆ. ಕಡಿಮೆ ಬಜೆಟ್ ಚಿತ್ರಗಳಾದ ರಾಝ್- ದಿ ಮಿಸ್ಟರಿ ಕಂಟಿನ್ಯೂಸ್, ದೇವ್ ಡಿ, 13 ಬಿ, ಫೂಂಕ್, ನ್ಯೂಯಾರ್ಕ್, ವೇಕ್ ಅಪ್ ಸಿದ್, ಅಜಬ್ ಪ್ರೇಮ್ ಕೀ ಗಜಬ್ ಕಹಾನಿ ಚಿತ್ರಗಳು ಹೆಸರು ಮಾಡಿದವು, ಜನಮೆಚ್ಚುಗೆ ಗಳಿಸಿದವು. ಭಾರೀ ಬಜೆಟ್‌ನ ಚಿತ್ರಗಳ ಪೈಕಿ ಸೈಫ್ ಅಲಿ ಖಾನ್ ನಿರ್ಮಾಣದ ಲವ್ ಆಜ್ ಕಲ್, ಶಾಹಿದ್ ಕಪೂರ್ ತಾರಾಗಣದ ಕಮೀನೇ, ಸಲ್ಮಾನ್ ಖಾನ್‌ನ ವಾಂಟೆಡ್, ಕಾಮಿಡಿ ಚಿತ್ರ ಆಲ್ ದಿ ಬೆಸ್ಟ್, ದೇ ದನಾ ದನ್ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆಹೊಡೆದವು.

ಝೋಯಾ ಅಕ್ತರ್ ನಿರ್ದೇಶನದ ಲಕ್ ಬೈ ಚಾನ್ಸ್, ನಂದಿತಾ ದಾಸ್ ನಿರ್ದೇಶನದ ಫಿರಾಕ್, ಗುಲಾಲ್, ಕ್ವಿಕ್ ಗನ್ ಮುರುಗನ್ ಚಿತ್ರಗಳು ಹಣ ವಸೂಲಿ ಮಾಡುವಲ್ಲಿ ಯಶಸ್ಸು ಗಳಿಸದಿದ್ದರೂ, ವಿಮರ್ಶಕರಿಂದ ಪ್ರಶಂಸೆಗೆ ಪಾತ್ರವಾದವು.

ವರ್ಷಾರಂಭ ಅಂತಹ ದೊಡ್ಡ ಚಿತ್ರಗಳಿಂದೇನೂ ಆಗಲಿಲ್ಲ. ಅಷ್ಟರಲ್ಲೇ ಆರ್ಥಿಕ ಕುಸಿತ ಬಾಲಿವುಡ್ ಅಂಗಳಕ್ಕೆ ಸಿಡಿಲೆರಗಿದಂತಾಯಿತು. ಚೇತರಿಸಿಕೊಳ್ಳುವಷ್ಟರಲ್ಲಿ ನಿರ್ಮಾಪಕರು ಹಾಗೂ ವಿತರಕರ ವಿವಾದ ಹೊತ್ತಿಕೊಂಡಿತು. ಈ ವಿವಾದವನ್ನು ತಣ್ಣಗಾಗಿಸಲು ಪರಸ್ಪರ ಉತ್ತಮ ಸಂಬಂಧ ಹೊಂದಿಲ್ಲದ ಶಾರುಖ್ ಖಾನ್, ಅಮೀರ್ ಖಾನ್ ಕೂಡಾ ಒಂದಾಗಿ ಕೊನೆಗೂ ಸಫಲರಾದರು. ಏಪ್ರಿಲ್ ಆರಂಭದಿಂದ ಜೂನ್ ಆರಂಭದವರೆಗೆ ಅಕ್ಷರಶಃ ಹೇಳಿಕೊಳ್ಳುವಂಥ ಯಾವ ಚಿತ್ರಗಳೂ ಬಿಡುಗಡೆಯಾಗದೆ ಬಾಲಿವುಡ್ ಅಕ್ಷರಶಃ ಬರಡು ಭೂಮಿಯಾಗಿ ಹೋಯಿತು.

IFM
ಬಹುನಿರೀಕ್ಷಿತ ಚಿತ್ರಗಳು ತೋಪು: ವಿಚಿತ್ರವೆಂದರೆ, ಕೆಲವು ಚಿತ್ರಗಳಂತೂ ಉತ್ತಮ ಓಪನಿಂಗ್ ಕಂಡರೂ ನಂತರದ ದಿನಗಳಲ್ಲಿ ಅದನ್ನು ಉಳಿಸಿಕೊಳ್ಳಲಾಗದೆ ಸೋತುಹೋದವು. ಅಂಥ ಚಿತ್ರಗಳ ಪೈಕಿ 8X10 ತಸ್ವೀರ್, ಕಲ್ ಕಿಸ್ನೇ ದೇಖಾ, ಕಂಭಕ್ತ್ ಇಶ್ಕ್, ಲಕ್, ದಿಲ್ ಬೋಲೆ ಹಡಿಪ್ಪಾ, ವಾಟ್ಸ್ ಯುವರ್ ರಾಶಿ, ಡು ನಾಟ್ ಡಿಸ್ಟರ್ಬ್, ಬ್ಲೂ, ಮೇ ಔರ್ ಮಿಸಸ್ ಖನ್ನಾ, ಲಂಡನ್ ಡ್ರೀಮ್ಸ್, ಕುರ್ಬಾನ್, ಅಲಾದಿನ್ ಮೊದಲಾದವುಗಳು. ಇವೆಲ್ಲವೂ ಬಿಡುಗಡೆಗೆ ಮುಂಚೆ ಭಾರೀ ಸುದ್ದಿ ಮಾಡಿದ ಚಿತ್ರಗಳು.

ಸದ್ಯಕ್ಕೆ ಬಾಲಿವುಡ್ ಬಹುನಿರೀಕ್ಷೆಯ ಅಮೀರ್ ಖಾನ್ ತಾರಾಗಣದ 'ತ್ರಿ ಈಡಿಯಟ್ಸ್‌'ಗಾಗಿ ವರ್ಷಾಂತ್ಯಕ್ಕೆ ಬಿಡುಗಡೆ ಕಂಡು ಮೆಚ್ಚುಗೆ ಗಳಿಸುವ ಲಕ್ಷಣಗಳನ್ನು ತೋರಿಸುತ್ತಿದೆ. ಕಳೆದ ವರ್ಷದ ಘಜನಿಯಂತೆ ತ್ರಿ ಈಡಿಯಟ್ಸ್ ಕೂಡಾ ಬಾಕ್ಸ್ ಆಫೀಸು ಕೊಳ್ಳೆ ಹೊಡೆಯುವುದರಲ್ಲಿ ಸಂದೇಹವಿಲ್ಲ ಎಂದು ಬಾಲಿವುಡ್ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

IFM
ಮತ್ತೆ ಉತ್ತುಂಗಕ್ಕೇರಿದ ಬಿಗ್ ಬಿ: ಹಾಗಾದರೆ 2009ರ ಉದ್ದಕ್ಕೂ ಜನರನ್ನು ಹೆಚ್ಚು ತಲುಪಿದ್ದು ಯಾವ ನಟರು? ಎಂದು ಪ್ರಶ್ನಿಸಿದರು ಉತ್ತರ ಅಮಿತಾಬ್ ಬಚ್ಚನ್! ಹೌದು. ಈ ವರ್ಷ ನಿಜಕ್ಕೂ ಹೇಳಲೇ ಬೇಕಾದ ಹೈಲೈಟ್ ಅಂದರೆ ಅದು ಅಮಿತಾಬ್ ಬಚ್ಚನ್ ಒಬ್ಬರೇ. ಅಮಿತಾಬ್ ತನ್ನಲ್ಲಿ ಎಂಥಾ ಸಾಮರ್ಥ್ಯ ಇದೆ ಎಂಬುದನ್ನು 'ಪಾ' ಚಿತ್ರದ ಮೂಲಕ ತೋರಿಸಿಕೊಟ್ಟರು. 69ರ ಮುದುಕ 13ರ ಹರೆಯದ ಹುಡುಗ ಪಾತ್ರ ಮಾಡುವುದೆಂದರೆ ಅದು ಸುಲಭದ ಮಾತಾ? ಖಂಡಿತಾ ಅಲ್ಲ. ಆದರೆ ಅಮಿತಾಬ್ ಅದನ್ನು ಸಾಧಿಸಿ ವಿಶ್ವಕ್ಕೇ ಅಚ್ಚರಿ ಮೂಡಿಸಿದ್ದಾರೆ.

ಇನ್ನು, ಕಪೂರ್ ಕುಟುಂಬದ ರಣಬೀರ್ ಕಪೂರ್ ಈ ಬಾರಿ ಭವಿಷ್ಯದ ತಾರೆಯಾಗುವ ಎಲ್ಲ ಲಕ್ಷಣವನ್ನೂ ತೋರಿಸಿದ್ದಾರೆ. ಅವರ ವೇಕ್ ಅಪ್ ಸಿದ್, ಅಜಬ್ ಪ್ರೇಮ್ ಕೀ ಗಜಬ್ ಕಹಾನಿ ಚಿತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡಿವೆ. ಅಷ್ಟೇ ಅಲ್ಲ, ಗಾಸಿಪ್ ಕಾಲಂನಲ್ಲೂ ರಣಬೀರ್ ಸಾಕಷ್ಟು ಬಾರಿ ಕಾಣಿಸಿಕೊಂಡದ್ದೂ ಅವರ ಸಾಧನೆಯೇ! ನಟಿ ದೀಪಿಕಾ ಪಡುಕೋಣೆ ಜೊತೆ ಸುತ್ತಿ ಸುದ್ದಿ ಮಾಡಿದ ರಣಬೀರ್ ಆಮೇಲೆ ಆಕೆಗೆ ಕೈಕೊಟ್ಟು ಸುದ್ದಿಯಾದರು. ಶಾಹಿದ್ ಕಪೂರ್ ಕೂಡ ಕಮೀನೇ ಚಿತ್ರದ ಮೂಲಕ ತಾನೊಬ್ಬ ಅದ್ಭುತ ಎಂದು ತೋರಿಸಿಕೊಟ್ಟರು.
IFM


ಕತ್ರಿನಾ ಮೋಡಿ: ಕತ್ರಿನಾ ಕೈಫ್ ದಂತದ ಗೊಂಬೆ, ಸೆಕ್ಸೀ ತಾರೆ ಅಷ್ಟೇ ಅಲ್ಲ, ಆಕೆಗೆ ಅಭಿನಯವೂ ಬರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದು ಈ ವರ್ಷ ಬಿಡುಗಡೆ ಕಂಡ ನ್ಯೂಯಾರ್ಕ್ ಚಿತ್ರ. ಕತ್ರಿನಾರ ಅಜಬ್ ಪ್ರೇಮ್ ಕೀ ಗಜಬ್ ಕಹಾನಿ, ನ್ಯೂಯಾರ್ಕ್, ದೇ ದನಾ ದನ್ ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದಿವೆ. ಸಲ್ಮಾನ್ ಖಾನ್ ಜೊತೆಗೆ ಸಾಕಷ್ಟು ಬಾರಿ ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕತ್ರಿನಾ ಈ ಬಾರಿಯೂ ನೆಟ್ ಪ್ರಿಯರ ಮೋಡಿ ಮಾಡಿದ್ದಾಳೆ. ಜೊತೆಗೆ ಮತ್ತೊಮ್ಮೆ ಏಷ್ಯಾದ ಅತಿ ಸೆಕ್ಸೀ ತಾರೆ ಎಂದು ಬಿರುದು ಪಡೆದರು.

MOKSHA
ರಾಖಿಯ ಸ್ವಯಂವರ: ಬಹುತೇಕ ಮರೆಯಾಗಿದ್ದ ರಾಖಿ ಸಾವಂತ್ ಎಂಬ ಐಟಂ ಗರ್ಲ್ ಅಕ್ಷರಶಃ ಸುದ್ದಿ ಮಾಡಿದ್ದು ಸ್ವಯಂವರದ ಮೂಲಕ. ದ್ರೌಪದಿಯಂತೆ ಸ್ವಯಂವರದ ಮೂಲಕ ಮದುವೆಯಾಗುತ್ತೇನೆ ಅಂತ ಸಾರಿ ಹೇಳಿ ರಿಯಾಲಿಟಿ ಕಾರ್ಯಕ್ರಮದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಳು. ನಂತರ ಏನಾಯಿತೆಂಬುದು ಗೊತ್ತೇ ಇದ್ದರೂ, ಪುಕ್ಕಟೆಯಾಗಿ ಪ್ರಚಾರ ಪಡೆದದ್ದು ಆಕೆಗೆ ಹೆಮ್ಮೆಯೇ ಸರಿ. ಈ ಬಾರಿ ಮಲ್ಲಿಕಾ ಶೆರಾವತ್ ಎಂಬ ಹಾಟ್ ಕನ್ಯಾಮಣಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಆಗಾಗ ಹಾಲಿವುಡ್ಡಿನ ಸಮಾರಂಭಗಳಲ್ಲಿ ಕಾಣಿಸಿ ಸುದ್ದಿ ಮಾಡುತ್ತಿದ್ದಾರೆ. ತನ್ನ ಹೆಸರಿನ ಮಿಲ್ಕ್‌ಶೇಕ್ ಬಿಡುಗಡೆ ಮಾಡಿ ಮಲ್ಲಿಕಾ ಶೆರಾವತ್ ಮಿಲ್ಕ್ ಶೇಕ್ ಅಂತ ಹೆಸರಿಟ್ಟು ಭಾರೀ ಸುದ್ದಿ ಮಾಡಿದಳು. ಶಿಲ್ಪಾ ಶೆಟ್ಟಿ, ಆಯೇಶಾ ಟಕಿಯಾ, ಅಮೃತಾ ಅರೋರಾ, ಇಸಾ ಕೊಪ್ಪಿಕರ್ ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಿದ್ದೂ ಕೂಡಾ ಈ ವರ್ಷದ ಶುಭ ಸುದ್ದಿಯೇ!

IFM
ಶೈನಿ ಅತ್ಯಾಚಾರ ವಿವಾದ: ವಿವಾದಗಳ ಪೈಕಿ ಸುದ್ದಿ ಮಾಡಿದ್ದು ಹೆಚ್ಚೆಂದರೆ ಶೈನಿ ಅಹುಜಾ ಪ್ರಕರಣ. ನಟ ಶೈನಿ ಅಹುಜಾ ತನ್ನ ಮನೆಯ ಕೆಲಸದಾಕೆಯ ಮೇಲೆ ಅತ್ಯಾಚಾರ ಪ್ರಕರಣದ ಆರೋಪ ಹೊತ್ತು ಜೈಲು ಸೇರಿದರು. ಈ ಪ್ರಕರಣದಿಂದ ಬಾಲಿವುಡ್ಡಿಗೆ ಬಾಲಿವುಡ್ಡೇ ನಿಬ್ಬೆರಗಾಯಿತು. ಸತ್ಯಕ್ಕೆ ಹತ್ತಿರವಿರುವ ಚಿತ್ರಗಳನ್ನು ನೀಡುವ ಮಧುರ್ ಭಂಡಾರ್ಕರ್ ಕೂಡಾ ನಟಿ ಪ್ರೀತಿ ಜೈನ್ ಅವರನ್ನು ನಟನೆಯ ಆಮಿಷವೊಡ್ಡಿ ಸೀರಿಯಲ್ ಅತ್ಯಾಚಾರ ನಡೆಸಿದ್ದಾರೆಂದು ಆಕೆಯೇ ದೂರು ನೀಡಿದ ಪ್ರಕರಣವೂ ಈ ಬಾರಿ ಮತ್ತೆ ಸುದ್ದಿ ಮಾಡಿತು. ಈವರೆಗೆ ಪಕ್ಕದ್ಮನೆ ಗೌರಮ್ಮನಂತಿದ್ದ ಅಮೃತಾ ರಾವ್ ಕೂಡಾ ಬಿಚ್ಚಲು ರೆಡಿ ಎಂದು ಹೇಳಿ ಹಾಟ್ ಆಗಿ ಶಾರ್ಟ್‌ಕಟ್ ಚಿತ್ರದ ಮೂಲಕ ಬಂದರೂ ಅದು ತೋಪಾಯಿತು.

IFM
ಸೆಲಿನಾಳ ಸಲಿಂಗಕಾಮ!: ಹಾಟ್ ಸೆಲಿನಾ ಜೇಟ್ಲಿ ಬಾಬಾ ರಾಮ್‌ದೇವ್ ಜೊತೆಗೆ ಸಲಿಂಗಕಾಮ ವಿಚಾರವಾಗಿ ನಡೆಸಿದ ವಾಗ್ವಾದ ಸಾಕಷ್ಟು ಬಿಸಿಯೇರಿತ್ತು. ಬಾಬಾ ರಾಮದೇವ ಅವರು ಸೆಲಿನಾರ ಚಾರಿತ್ರ್ಯದ ಬಗ್ಗೆ ಮಾತಾಡಿದಾಗ, ಸೆಲಿನಾ ನೇರವಾಗಿ ಬಾಬಾರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ಹಾಟ್ ಕರೀನಾ ಕಪೂರ್ ಈ ಬಾರಿ ಅಂತಹ ಹಿಟ್ ಚಿತ್ರ ನೀಡದಿದ್ದರೂ, ತನ್ನ ಬಾಯ್‌ಫ್ರೆಂಡ್ ಸೈಫ್ ಅಲಿ ಖಾನ್ ಜೊತೆಗೆ ಕುರ್ಬಾನ್ ಚಿತ್ರದಲ್ಲಿ ಸುಲಲಿತವಾಗಿ ಹಾಸಿಗೆ ಹಂಚಿ ಆತನಿಗೆ ತುಟಿಯೊತ್ತಿ ಚುಂಬಿಸಿ ಹಳೆಯ ಬಾಲಿವುಡ್ಡಿನ ಚುಂಬಿಸಿದ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದಳು. ಕಂಗನಾ ರಾಣಾವತ್ ಎಂಬ ಸುರುಳು ಕೂದಲ ಚೆಲುವೆ ರಾಝ್ ಎಂಬ ಭಯಾನಕ ಚಿತ್ರದಲ್ಲಿ ಪ್ರಸಿದ್ಧಿಯ ಉತ್ತುಂಗಕ್ಕೇರಿ ನಂತರ ತನ್ನ ಗೆಳೆಯ ಅಧ್ಯಾಯನ್ ಸುಮನ್ ಜೊತೆಗಿನ ಬ್ರೇಕಪ್‌ನಿಂದ ಸುದ್ದಿಯಾದಳು. ನಟಿ ನೀತು ಚಂದ್ರ ಸಲಿಂಗಕಾಮದ ಪೋಸ್ಟರ್‌ಗೆ ಮೈಯೊಡ್ಡಿ ಲೆಸ್ಬಿಯನ್ ಎಂಬ ಹಣೆಪಟ್ಟಿ ಹೊರಬೇಕಾಯಿತು.

IFM
ಪ್ರಿಯಾಂಕ-ಐಶ್ ವಾರ್: ಪ್ರಿಯಾಂಕಾ ಛೋಪ್ರಾ ಕಮೀನೇ ಚಿತ್ರದ ಯಶಸ್ಸಿನಲ್ಲಿ ತೇಲಿದರೂ, ಕಳೆದ ವರ್ಷದ ಹಿಟ್ ಚಿತ್ರ 'ಫ್ಯಾಷನ್‌'ನ ನಟನೆಗಾಗಿ ಶ್ರೇಷ್ಟ ನಟಿ ಪ್ರಶಸ್ತಿ ಪಡೆದುದಕ್ಕೆ ವಿವಾದಕ್ಕೆ ಗುರಿಯಾದಳು. ನಿರ್ದೇಶಕ ಅಶುತೋಷ್ ಗೌರೀಕರ್ ಈ ಪ್ರಶಸ್ತಿಗೆ ಪ್ರಿಯಾಂಕಾಗಿಂತಲೂ ಜೋಧಾ ಅಕ್ಬರ್ ನಟನೆಯ ಐಶ್ವರ್ಯಾ ರೈ ಅರ್ಹಳು ಎನ್ನುವ ಮೂಲಕ ವಿವಾದವೆದ್ದಿತ್ತು. ಇದೇ ಪ್ರಿಯಾಂಕಾ ಅಶುತೋಷ್ ನಿರ್ದೇಶನದ ವಾಟ್ಸ್ ಯುವರ್ ರಾಶಿ? ಚಿತ್ರದಲ್ಲಿ 12 ಪಾತ್ರಗಳಲ್ಲಿ ವಿಭಿನ್ನವಾಗಿ ನಟಿಸಿ ದಾಖಲೆ ಸೃಷ್ಟಿಸಿದಳು. ಅಗ್ಯಾತ್ ಚಿತ್ರದ ಪ್ರಚಾರಕ್ಕಾಗಿ ಬಿಡುಗಡೆಯ ದಿನ ರಾಮ್ ಗೋಪಾಲ್ ವರ್ಮಾ ಮುಂಬೈ ಬೀದಿಗಳಲ್ಲಿ, ಅಂಗಡಿಗಳಲ್ಲಿ ಗೊತ್ತಾಗದಂತೆ ರಕ್ತ ಚೆಲ್ಲಿದ ಹೆಣದ ಪ್ರತಿಕೃತಿಗಳನ್ನು ನಿಲ್ಲಿಸಿದ್ದು ಕೋರ್ಟು ಮೆಟ್ಟಿಲೇರಿತ್ತು. ಅದೇ ಸಂದರ್ಭ, ರಣ್ ಚಿತ್ರದ ಜನಗಣ ಮನ ರಣ್ ಹೈ... ಹಾಡನ್ನು ತೆಗೆದುಹಾಕಲು ಸೂಚಿಸಿ ಸೆನ್ಸಾರ್ ಮಂಡಳಿ ಆದೇಶ ನೀಡಿದ್ದೂ ರಾಮ್ ಗೋಪಾಲ್ ವರ್ಮಾರನ್ನು ಕೆರಳಿಸಿತ್ತು. ಈ ಪ್ರಕರಣವೂ ಕಾವೇರಿತ್ತು.

ಆದರೆ ಇಷ್ಟೆಲ್ಲ ವಿವಾದ, ಹತಾಶೆ, ಸೋಲುಗಳ ನಡುವೆಯೇ, ವರ್ಷಾರಂಭದಲ್ಲಿ ಸ್ಲಂ ಡಾಗ್ ಮಿಲಿಯನೇರ್ ಚಿತ್ರದ ಸಂಗೀತಕ್ಕಾಗಿ ಎ.ಆರ್.ರೆಹೆಮಾನ್ ಆಸ್ಕರ್ ಪ್ರಶಸ್ತಿ ಗೆದ್ದುದು ವಿಶ್ವವೇ ಬಾಲಿವುಡ್ಡಿನೆಡೆಗೆ ಮುಖ ತಿರುಗಿಸಿ ನೋಡುವಂತಾಯಿತು. ಸ್ಲಂ ಡಾಗ್ ಚಿತ್ರ ಭಾರತದ ನೆಗೆಟಿವ್ ಚಿತ್ರಣವನ್ನು ಲೋಕಕ್ಕೆ ಪರಿಚಯ ಮಾಡಿಸಿತೆಂಬ ಆರೋಪ ಹೊತ್ತರೂ, ಭಾರತದ ಸಂಕಲಕಾರರ ಕಡೆಗೆ, ಭಾರತೀಯ ಸಂಗೀತದೆಡೆಗೆ, ಭಾರತೀಯ ಚಿತ್ರಗಳೆಡೆಗೆ ಇತರರು ನೋಡುವಂತಾದ್ದು ಬಾಲಿವುಡ್ ಪಡೆದುಕೊಂಡ ಈ ವರ್ಷದ ಸಾಧನೆ.

ವೆಬ್ದುನಿಯಾವನ್ನು ಓದಿ