ಶೇಮ್-09: ಹೆಡ್ಲಿ-ರಾಣಾ ಜೋಡಿ, ಟೈಗರ್ ವುಡ್, ಅಗಾಸ್ಸಿ

2009ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವು ಹೆಸರುಗಳು ಕುಖ್ಯಾತಿಯನ್ನು ಪಡೆದು ಹೊಸ ಅಧ್ಯಾಯ ಬರೆದವು. ಅವುಗಳಲ್ಲಿ ಪ್ರಮುಖವಾದವುಗಳತ್ತ ಒಂದು ಹಿನ್ನೋಟ:

ಹೆಡ್ಲಿ-ರಾಣಾ ಬಂಧನ ಮೂಡಿಸಿದ ಹೊಸ ಬೆಳಕು:
PTI
26/11 ಮುಂಬೈ ಬಾಂಬ್ ಸ್ಫೋಟದ ಹಿಂದಿರುವ ರೂವಾರಿಗಳು ಯಾರು, ಸೂತ್ರ ದಾರರು ಯಾರು ಎಂಬುದರ ಕುರಿತು ದೇಶ-ವಿದೇಶಗಳಲ್ಲಿ ಇನ್ನೂ ಶಂಕೆಗಳಿರುವಂತೆಯೇ, ಅಮೆರಿಕದ ಎಫ್‌ಬಿಐ, ಡೇವಿಡ್ ಹೆಡ್ಲೀ (ದಾವೂದ್ ಗಿಲಾನಿ) ಮತ್ತು ಸಹಚರ ತಹಾವ್ವುರ್ ಹುಸೇನ್ ರಾಣಾ ಎಂಬಿಬ್ಬರನ್ನು ಬಂಧಿಸಿ, ತನಿಖೆಯ ಗತಿಯನ್ನು ಬದಲಿಸಿತು. ಇವರಿಬ್ಬರೂ ಪಾಕಿಸ್ತಾನ ಮೂಲದವರೇ. ಮುಂಬೈ ದಾಳಿ ನಡೆಯುವ ಎರಡು ವರ್ಷಗಳ ಹಿಂದಿನಿಂದಲೇ ಇವರು ಭಾರತಕ್ಕೆ ಬಂದು ಸಮರ್ಪಕ ಯೋಜನೆ ರೂಪಿಸಿದ್ದರು. ಹೆಡ್ಲಿಗೆ ಪಾಕಿಸ್ತಾನದ ಲಷ್ಕರ್ ಇ ತೋಯ್ಬಾ ಉಗ್ರವಾದಿ ಸಂಘಟನೆಯ
PTI
ತರಬೇತಿಯೂ ದೊರೆತಿತ್ತು. ಅವರಿಬ್ಬರ ಬಂಧನವಾದ ಮೇಲೆ, ಆತ ಡಬಲ್ ಏಜೆಂಟ್ (ಅಮೆರಿಕದ ಸಿಐಎಯ ಏಜೆಂಟ್ ಕೂಡಾ ಆಗಿದ್ದ ಎಂಬ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ) ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಅಮೆರಿಕದ ಕುಯುಕ್ತಿಯ ಬಗೆಗೂ ಅನುಮಾನದಿಂದ ನೋಡುವಂತಾಗಿದೆ.


ಬಹುಪ್ರೇಯಸಿ ವಲ್ಲಭ - ಟೈಗರ್ ವುಡ್ಸ
ವಿಶ್ವವಿಖ್ಯಾತ ಗಾಲ್ಫರ್ ಟೈಗರ್ ವುಡ್ಸ್ ವೈಯಕ್ತಿಕ ಬದುಕು, ವರ್ಷಾಂತ್ಯದಲ್ಲಿ (ನ.27) ನಡೆದ ಅಪಘಾತವೊಂದರಿಂದ ಬಟಾ ಬಯಲಾಯಿತು. ಇದೊಂದು ಕೇವಲ ಅಪಘಾತ ಎಂದು ಟೈಗರ್ ವುಡ್ಸ್ ಸುಮ್ಮನಾಗಲು ಪ್ರಯತ್ನಿಸಿದರೂ, ಪೆಟ್ಟಿಗೆಯೊಳಗಿಂದ ಒಂದೊಂದೇ ರಹಸ್ಯಗಳು ಹೊರಬರಲಾರಂಭಿಸಿದವು. ನಿಧಾನವಾಗಿ ಅವರ ವೈವಾಹಿಕ ಬದುಕು ಸರಿಯಿಲ್ಲ ಮತ್ತು ಅವರಿಗೆ ಗಾಲ್ಫ್‌ನ ಹೊರಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರೇಯಸಿಯರ ಒಡನಾಟದ ವಿವರಗಳು ಕೂಡ ಹೊರಬಂದವು.
PTI
ಮೊದಲು ಇಲ್ಲ ಎಂದು ನಿರಾಕರಿಸಿದ ಟೈಗರ್, ಬಳಿಕ ಸಾಕ್ಷ್ಯಾಧಾರಗಳು ಹೊರಬಂದಾಗ ತಪ್ಪೊಪ್ಪಿಕೊಳ್ಳಲೇಬೇಕಾಯಿತು. ಭಾರೀ ಆಸ್ತಿಯ ಒಡೆಯನಾಗಿರುವ ಆತನ ಪ್ರೇಯಸಿಯರ ಸಂಖ್ಯೆ 14 ದಾಟಿತ್ತು. ಇದೀಗ ಪತ್ನಿ ಆತನನ್ನು ತೊರೆಯಲು ನಿರ್ಧರಿಸಿದ್ದಾಳೆ. ಕಾರ್ಪೊರೇಟ್ ಜಗತ್ತಿನಿಂದ ಪ್ರಾಯೋಜನೆಗಾಗಿ ಅತ್ಯಧಿಕ ಹಣ ಪಡೆಯುತ್ತಿದ್ದ ಟೈಗರ್ ಅವರ ಜಾಹೀರಾತು ಜಗತ್ತಿನ ಮೇಲೂ ಇದು ಪರಿಣಾಮ ಬೀರಿತು.


ಇಟಲಿ ಪ್ರಧಾನಿ ಬರ್ಲುಸ್ಕೋನಿ
ಇಟಲಿಯನ್ನು ಅತಿ ದೀರ್ಘಕಾಲ ಆಳಿದ ಪ್ರಧಾನಿ ಹೆಗ್ಗಳಿಕೆಯ ಸಿಲ್ವಿಯೋ ಬರ್ಲುಸ್ಕೋನಿ (73)ಗೆ ಈ ವರ್ಷವಂತೂ ತೀರಾ ದುಸ್ವಪ್ನವಾಗಿ ಪರಿಣಮಿಸಿತು. ಈ ಹಿಂದೆ ಭ್ರಷ್ಟಾಚಾರದ ಹಲವು ಪ್ರಕರಣಗಳು, ಆರೋಪಗಳಲ್ಲಿ ಅವರು ಪಾರಾಗಿದ್ದರೂ, ಈ ವರ್ಷ ಮಾತ್ರ ಪರಿಸ್ಥಿತಿ ತಿಳಿಗೊಳಿಸಲು ಅವರಿಗೆ ಕಷ್ಟವೇ ಆಯಿಚು. ತನ್ನ ಖಾಸಗಿ ನಿವಾಸದಲ್ಲಿ ವೇಶ್ಯೆಯರನ್ನು ಇರಿಸಿದ್ದ ಆರೋಪ ಈ ಬಾರಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. 9.4 ಶತಕೋಟಿ ಡಾಲರ್ ಒಡೆಯನಾಗಿರುವ ಬರ್ಲುಸ್ಕೋನಿ, ಇಟಲಿಯ ಅತ್ಯಂತ ಶ್ರೀಮಂತ ವ್ಯಕ್ತಿ. ರಾಜಕೀಯದಲ್ಲಿ ಮಾತ್ರವಲ್ಲದೆ, ಮಾಧ್ಯಮ, ಕಟ್ಟಡ ನಿರ್ಮಾಣ, ವಿಮೆ, ಜಾಹೀರಾತು ಉದ್ಯಮದಲ್ಲಿಯೂ ಪಳಗಿರುವ ಅವರು ಇಟಲಿಯ ಅತ್ಯಂತ ಯಶಸ್ವೀ ಫುಟ್ಬಾಲ್ ಕ್ಲಬ್ ಎಸಿ ಮಿಲಾನ್‌ನ ಒಡೆಯ. ಹಿಂದೆ ಹಲವಾರು ಭ್ರಷ್ಟಾಚಾರ ಆರೋಪಗಳಲ್ಲಿ ದೋಷಮುಕ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದ ಅವರ ಪದತ್ಯಾಗಕ್ಕೆ ಈ ವರ್ಷ ಜೋರಾಗಿಯೇ ಕೂಗು ಕೇಳಿಬಂದಿದೆ.

ಆಂದ್ರೆ ಅಗಾಸ್ಸಿ:
ಕ್ರೀಡಾ ಜಗತ್ತು ಈ ವರ್ಷ ಹೊಸದೊಂದು ಅಚ್ಚರಿಯನ್ನು ಹುಟ್ಟು ಹಾಕಿತು. ಪ್ರಖ್ಯಾತ ಟೆನಿಸ್ ಆಟಗಾರ ಆಂದ್ರೆ ಅಗಾಸಿ ಅವರು ತಮ್ಮ ಬದುಕಿನ ಹಿನ್ನೋಟ ಹರಿಸಿ ಬಾಯಿ ಬಿಟ್ಟಾಗ, ವಿಶ್ವವೇ ಬೆಚ್ಚಿ ಬಿತ್ತು. ಟೆನಿಸ್ ಪಂದ್ಯಗಳನ್ನು ಉದ್ದೇಶಪೂರ್ವಕವಾಗಿಯೇ ಸೋತಿದ್ದೆ ಮತ್ತು ಮಾದಕ ದ್ರವ್ಯ ಸೇವಿಸುತ್ತಿದ್ದೆ ಎಂದು ಹೇಳಿದಾಗ, ಹಲವು ಆಟಗಾರರು ಅವರ ತಪ್ಪೊಪ್ಪಿಗೆಯನ್ನು ಧನಾತ್ಮಕವಾಗಿ ಸ್ವೀಕರಿಸಿದರೆ, ಇನ್ನು ಕೆಲವರು ರೇಗಾಡಿದರು. ಅವರ ಅಭಿಮಾನಿಗಳು ಅವರನ್ನು ಕ್ಷಮಿಸಿದ್ದಾರೆ ಮತ್ತು ವೃತ್ತಿ ಜೀವನದಲ್ಲಿ ಅವರನ್ನು ಎದುರಿಸಿ ಗೆಲ್ಲಲಾಗದೆ ಚಡಪಡಿಸಿದವರು ಹಿಡಿಶಾಪ ಹಾಕುತ್ತಿದ್ದಾರೆ, ಆದರೆ ಅವರ ಈ ಜೀವನಚರಿತ್ರೆ ಪುಸ್ತಕವಂತೂ ಒಳ್ಳೆ ಪ್ರಚಾರ ಪಡೆಯಿತು.

ವೆಬ್ದುನಿಯಾವನ್ನು ಓದಿ