ಸಚಿನ್ ದಾಖಲೆ, ಧೋನಿ-ವೀರು ಭಿನ್ನಮತ ಮರೆಯಲಾದೀತೇ?

- ಭುವನ್ ಪುದುವೆಟ್ಟ

ಮೊತ್ತ ಮೊದಲ ಬಾರಿಗೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿದುದು, ಸಚಿನ್ ತೆಂಡೂಲ್ಕರ್, 30,000 ರನ್ನುಗಳ ಒಡೆಯನಾದುದು, ಧೋನಿ-ಸೆಹ್ವಾಗ್ ಭಿನ್ನಮತ, ಕೋಚ್ ಸೆಕ್ಸೀ ಸಲಹೆ, ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲಾದ ದಾಳಿ ಮುಂತಾದುವು 2009ರ ಕ್ರಿಕೆಟ್ ಜಗತ್ತು ಕಂಡ ಪ್ರಮುಖ ಏಳು-ಬೀಳುಗಳು.

ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಮ್ ಇಂಡಿಯಾಕ್ಕೆ 2008ರಂತಿರಲಿಲ್ಲ ಈ ವರ್ಷ. ಕಭೀ ಖುಷಿ, ಕಭೀ ಘಂ ಎಂಬಂತಾಗಿತ್ತು ಅವರ ಪರಿಸ್ಥಿತಿ. ಧೋನಿ ಪಡೆಗೆ ಮತ್ತಷ್ಟು ಖಾರವಾಗಿ ಪರಿಣಮಿಸಿದ್ದು ಈ ವರ್ಷ ಸೃಷ್ಟಿಯಾದ ಹಲವು ವಿವಾದಗಳು, ನಡೆದ ಆವಾಂತರಗಳು, ಪಡೆದ ಹಿರಿಮೆಗಳತ್ತ ಒಂದು ಸಂಕ್ಷಿಪ್ತ ಮೆಲುಕು ಇಲ್ಲಿದೆ.

ಟೆಸ್ಟ್‌ನಲ್ಲಿ ನಂಬರ್ ವನ್ ಪಟ್ಟ...
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಟೆಸ್ಟ್ ಕ್ರಿಕೆಟ್‌ನಲ್ಲಿ ರ‌್ಯಾಂಕಿಂಗ್ ಪದ್ಧತಿ ಆರಂಭಿಸಿದ ನಂತರ ಮೊತ್ತ ಮೊದಲ ಬಾರಿಗೆ ಅಗ್ರ ಪಟ್ಟವನ್ನೇರಿದ ಸಾಧನೆಯನ್ನು ಭಾರತ ಮಾಡಿದ್ದು ಈ ವರ್ಷ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು 2-0ಯಿಂದ ಗೆದ್ದುಕೊಳ್ಳುವ ಮೂಲಕ ಧೋನಿ ಪಾಳಯವು ದಕ್ಷಿಣ ಆಫ್ರಿಕಾವನ್ನು ಕೆಳಗಿಳಿಸಿ ನಂ.1 ಪಟ್ಟವನ್ನು ಪಡೆದುಕೊಂಡಿದ್ದು, ಈ ವರ್ಷಾಂತ್ಯವನ್ನು ಅಗ್ರ ಸ್ಥಾನದೊಂದಿಗೆ ಮುಗಿಸುತ್ತಿದೆ.

2001ರ ಮೇ ತಿಂಗಳಲ್ಲಿ ಐಸಿಸಿ ರ‌್ಯಾಂಕಿಂಗ್ ಪದ್ಧತಿಯನ್ನು ಆರಂಭಿಸಿದ ನಂತರ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಬಳಿಕ ನಂ.1 ಪಟ್ಟಕ್ಕೇರಿದ ಮೂರನೇ ತಂಡವೆಂಬ ಹೆಗ್ಗಳಿಕೆಯೂ ಮಹೀ ಬಳಗದ್ದು.

ಸ'ಚಿನ್ನ' ದಾಖಲೆಗಳ ಬೆನ್ನೇರಿ..
ಪ್ರತೀ ಬಾರಿ ಬ್ಯಾಟ್ ಹಿಡಿದು ಅಂಗಣಕ್ಕಿಳಿದಾಗಲೂ ದಾಖಲೆಗಳಿಗೆ ಕಾರಣರಾಗುತ್ತಿರುವ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30,000 ರನ್ ಪೂರೈಸಿದ ಮೊತ್ತ ಮೊದಲ ಆಟಗಾರ ಎಂಬ ಖ್ಯಾತಿಗೆ ಈ ವರ್ಷ ಪಾತ್ರರಾಗಿದ್ದಾರೆ.
PTI

ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ತನ್ನ 43ನೇ ಶತಕ ದಾಖಲಿಸುವ ಮೂಲಕ ಈ ಮೈಲುಗಲ್ಲನ್ನು ಮಾಸ್ಟರ್ ಬ್ಲಾಸ್ಟರ್ ನೆಟ್ಟಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 17,000 ರನ್ ದಾಖಲಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೂ ಅವರು ಈ ವರ್ಷ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಈ ದಾಖಲೆಯನ್ನು ಸಚಿನ್ ನಿರ್ಮಿಸಿದ್ದರು.

ದ್ರಾವಿಡ್‌ರಿಂದಲೂ ದಾಖಲೆ...
80 ಟೆಸ್ಟ್ ಶತಕಗಳ ಪಾಲುದಾರಿಕೆ ನೀಡಿದ ವಿಶ್ವದ ಮೊತ್ತ ಮೊದಲ ಆಟಗಾರ, 11 ಸಾವಿರಕ್ಕೂ ಹೆಚ್ಚು ರನ್ ಮಾಡಿದ ವಿಶ್ವದ ಐದನೇ ಹಾಗೂ ಭಾರತದ ಎರಡನೇ ಆಟಗಾರ ಎಂಬ ದಾಖಲೆಗಳನ್ನು ಈ ವರ್ಷ ದ್ರಾವಿಡ್ ನಿರ್ಮಿಸಿದ್ದಾರೆ.

ಅಲ್ಲದೆ ಮಾರ್ಕ್ ವಾ ಅವರ ಹೆಸರಿನಲ್ಲಿದ್ದ ಅತೀ ಹೆಚ್ಚು ಟೆಸ್ಟ್ ಕ್ಯಾಚ್ ದಾಖಲೆಯನ್ನು ಕೂಡ ದ್ರಾವಿಡ್ ಈ ವರ್ಷ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. 181 ಕ್ಯಾಚ್ ಪಡೆದಿದ್ದ ವಾ ಅವರ ದಾಖಲೆ ಮುರಿದ ದ್ರಾವಿಡ್ ಹೆಸರಿನಲ್ಲಿ 184 ಕ್ಯಾಚುಗಳಿವೆ.
PTI


ಇಷ್ಟೆಲ್ಲ ಸಂತಸಗಳ ನಡುವೆಯೂ ದ್ರಾವಿಡ್‌ಗೆ ಭ್ರಮನಿರಸನ ಹುಟ್ಟಿಸಿದ್ದು ಏಕದಿನ ಪ್ರಕಾರ. ಈ ಬಾರಿ ಲಂಕಾ ತ್ರಿಕೋನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ಎರಡು ವರ್ಷಗಳ ಬಿಡುವಿನ ಬಳಿಕ ಮರಳಿದ ಅವರನ್ನು ಯಾವುದೇ ಕಾರಣ ನೀಡದೆ ಆಯ್ಕೆಗಾರರು ಕೈ ಬಿಟ್ಟದ್ದು ತೀವ್ರ ಟೀಕೆಗೂ ಗುರಿಯಾಗಿತ್ತು.

ಸೆಹ್ವಾಗ್-ಧೋನಿ ಭಿನ್ನಮತ...
ಟ್ವೆಂಟಿ-20 ವಿಶ್ವಕಪ್ ಸಂದರ್ಭದಲ್ಲಿ ಇಂತದ್ದೊಂದು ನಡೆಯಬಾರದ ಸಂಗತಿ ನಡೆದು ಹೋಗಿತ್ತು. ಸ್ಫೋಟಕ ದಾಂಡಿಗ ವೀರೇಂದ್ರ ಸೆಹ್ವಾಗ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಗುಮಾನಿ ಎದ್ದಿತ್ತು. ಇದಕ್ಕೆ ತುಪ್ಪ ಸುರಿದದ್ದು ಕೆಲವು ಆಂಗ್ಲ ಪತ್ರಿಕೆಗಳು.

ಐಪಿಎಲ್ ಸಂದರ್ಭದಲ್ಲಿ ಗಾಯಗೊಂಡಿದ್ದ ಸೆಹ್ವಾಗ್ ಅದನ್ನು ಮುಚ್ಚಿಟ್ಟಿದ್ದರು ಎಂಬ ಆರೋಪ ಅವರ ಮೇಲಿತ್ತು. ನಾಯಕನಂತೂ ತನಗೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳುವ ಮೂಲಕ, ಮಾಧ್ಯಮಗಳ ಮೇಲೂ ಎಗರಾಡಿ 'ಕೂಲ್ ಕ್ಯಾಪ್ಟನ್' ಎಂಬ ಗರಿಗೆ ಮಣ್ಣು ಮೆತ್ತಿಕೊಂಡಿದ್ದರು.

ಟ್ವೆಂಟಿ-20 ವಿಶ್ವಕಪ್ ಸೋಲಿಗೆ ಧೋನಿಯೇ ನೇರ ಕಾರಣ, ತಂಡದ ಆಂತರಿಕ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಯುವಂತೆ ಮಾಡಿದ್ದೇ ತಪ್ಪು. ವಿವಾದವನ್ನು ನಿಭಾಯಿಸಲು ಅವರು ವಿಫಲರಾದರು ಎಂದು ಅನೇಕ ಮಾಜಿ ಕ್ರಿಕೆಟಿಗರು ಈ ಸಂದರ್ಭದಲ್ಲಿ ದೂರಿದ್ದರು. ಐಪಿಎಲ್‌ನಿಂದಾಗಿ ಸೋಲುವಂತಾಯಿತು ಎಂದವರು ಹಲವರು.

ಕರ್ಸ್ಟನ್ 'ಸೆಕ್ಸೀ' ಸಲಹೆ..
ಯಾವ ಕಾರಣಕ್ಕೂ ಮೈಥುನವನ್ನು ತಪ್ಪಿಸಿಕೊಳ್ಳಬೇಡಿ, ನಿಮ್ಮನ್ನು ನೀವು ತೃಪ್ತಿಪಡಿಸಿಕೊಳ್ಳಿ. ಇಲ್ಲವಾದಲ್ಲಿ ಅಂಗಣದಲ್ಲಿ ಅತ್ಯುತ್ತಮ ನಿರ್ವಹಣೆ ನೀಡುವುದು ಅಸಾಧ್ಯವಾದೀತು ಎಂಬ ಸೆಕ್ಸೀ ಸಲಹೆಯನ್ನು ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಟೀಮ್ ಇಂಡಿಯಾಕ್ಕೆ ನೀಡಿದ್ದ ಕೋಚ್ ಗ್ಯಾರಿ ಕರ್ಸ್ಟನ್ ತೀವ್ರ ಟೀಕೆಗೆ ಗುರಿಯಾಗಿದ್ದರು.
PTI


ದೈಹಿಕ ದೃಷ್ಟಿಕೋನದಿಂದ ನೋಡಿದಲ್ಲಿ ಸೆಕ್ಸ್ ಮಾಡುವುದರಿಂದ ದೇಹದಲ್ಲಿನ ಟೆಸ್ಟೋಸ್ಟಿರೋನ್ ಹಾರ್ಮೋನ್ ಉತ್ಪಾದನೆ ಹೆಚ್ಚುತ್ತದೆ. ಪರಿಣಾಮ ಸಾಮರ್ಥ್ಯ, ಶಕ್ತಿ, ಆಕ್ರಮಣಶೀಲತೆ ಮತ್ತು ಸ್ಪರ್ಧಾತ್ಮಕತೆ ವೃದ್ಧಿಯಾಗುತ್ತದೆ ಎನ್ನುವ ಮೂಲಕ ಆಟಗಾರರಲ್ಲೂ ಮುಜುಗರ ಹುಟ್ಟಿಸಿದ್ದರು ಕರ್ಸ್ಟನ್.

ಮರಳಿದ ನೆಹ್ರಾ, ಶ್ರೀಶಾಂತ್....
ವೆಸ್ಟ್‌ಇಂಡೀಸ್ ಪ್ರವಾಸ ಆಶಿಶ್ ನೆಹ್ರಾರಿಗೆ ಮರು ಜೀವಕೊಟ್ಟರೆ, ಶ್ರೀಲಂಕಾದ ತಾಯ್ನೆಲ ಸರಣಿ ಶ್ರೀಶಾಂತ್‌ರನ್ನು ಎತ್ತಿ ಹಿಡಿಯಿತು.

ಇವರಿಬ್ಬರ ಮರು ಆಗಮನಕ್ಕೆ ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಕಾರಣರು. ಜಹೀರ್ ಗಾಯಾಳುವಾದ ಕಾರಣ ನೆಹ್ರಾ ಟೀಮ್ ಇಂಡಿಯಾದ ನೆನಪಿಗೆ ಬಂದಿದ್ದರೆ, ಇಶಾಂತ್ ಕಳಪೆ ಪ್ರದರ್ಶನದಿಂದ ಕೇರಳದ ವೇಗಿ ಸ್ಥಾನ ಗಿಟ್ಟಿಸಿಕೊಂಡಿದ್ದರು.

ನಾಲ್ಕು ವರ್ಷಗಳ ಅಂತರದ ನಂತರ ರಾಷ್ಟ್ರೀಯ ತಂಡ ಸೇರಿಕೊಂಡಿದ್ದ ನೆಹ್ರಾ ವಿಂಡೀಸ್ ಪ್ರವಾಸದ ಮೂರು ಪಂದ್ಯಗಳಲ್ಲಿ ಆರು ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಬಳಿಕ ಬಹುತೇಕ ತಂಡದ ಖಾಯಂ ಸದಸ್ಯರಾಗಿ ಅವರು ಅಂಟಿಕೊಂಡಿದ್ದಾರೆ.

ಶ್ರೀಶಾಂತ್ ಮರುಜೀವ ಪಡೆದುಕೊಂಡಿರುವಾಗಲೇ ಅವರಿಗೆ ಎಚ್1ಎನ್1 ತಗುಲಿದ್ದು ದುರದೃಷ್ಟಕರ. ಅವರು ಚೇತರಿಸಿಕೊಂಡಿದ್ದರೂ ಮುಂದಿನ ದಿನಗಳಲ್ಲಿ ಅವರ ಪ್ರದರ್ಶನದ ಮೇಲೆ ಕ್ರಿಕೆಟ್ ಭವಿಷ್ಯ ನಿಂತಿದೆ.

ಐಪಿಎಲ್ ಸ್ಥಳಾಂತರ...
2009ರ ಇಂಡಿಯನ್ ಪ್ರೀಮಿಯರ್ ಲೀಗ್ ದೇಶೀಯ ಟೂರ್ನಮೆಂಟ್ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ನಡೆಯುವಂತಾದದ್ದು ಕ್ರಿಕೆಟ್ ವಲಯದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಭಾರತದಲ್ಲಿ ಲೋಕಸಭಾ ಚುನಾವಣೆಗಳು ನಡೆಯುವ ಸಂದರ್ಭದಲ್ಲೇ ಐಪಿಎಲ್ ವೇಳಾಪಟ್ಟಿಯಿದ್ದ ಕಾರಣ ಭದ್ರತೆ ನೀಡುವುದು ಅಸಾಧ್ಯ ಎಂದು ಕೇಂದ್ರ ಸರಕಾರ ಕೈ ತೊಳೆದುಕೊಂಡಿತ್ತು. ದಾರಿ ಕಾಣದ ಬಿಸಿಸಿಐ ಹರಿಣಗಳ ನಾಡಿಗೆ ಟೂರ್ನಮೆಂಟನ್ನು ಸ್ಥಳಾಂತರಿಸಿತು.
PTI


ಇದೇ ವಿಚಾರದಲ್ಲಿ ಸರಕಾರ ಮತ್ತು ಬಿಸಿಸಿಐ ನಡುವೆ ಸಾಕಷ್ಟು ವಾಗ್ಯುದ್ಧಗಳೂ ನಡೆದು ಹೋದವು. ಜೂಜಿಗೆ ಬೆಂಬಲ ನೀಡುವ ಎಸ್ಎಂಎಸ್ ಗೇಮ್ ಆರಂಭಿಸಿದ ಐಪಿಎಲ್ ಆಯುಕ್ತ ಲಲಿತ್ ಮೋದಿ ವಿರುದ್ಧ ಕ್ರೀಡಾಸಚಿವ ಎಂ.ಎಸ್. ಗಿಲ್ ಸೇರಿದಂತೆ ಹಲವರು ಕಿಡಿ ಕಾರಿದ್ದನ್ನು ಕೂಡ ಸ್ಮರಿಸಬಹುದಾಗಿದೆ.

ಬುಚನಾನ್-ಗಂಗೂಲಿ ವಿವಾದ...
ಕೊಲ್ಕತ್ತಾ ನೈಟ್ ರೈಡರ್ಸ್ ತರಬೇತುದಾರ ಜಾನ್ ಬುಚನಾನ್ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕ ಗಂಗೂಲಿ ಈ ಬಾರಿ ಐಪಿಎಲ್‌ನಲ್ಲಿ ಅತೀ ಹೆಚ್ಚು ಪ್ರಚಾರ ಪಡೆದುಕೊಂಡವರು.

ಬುಚನಾನ್‌ರವರು ಗಂಗೂಲಿಯವರನ್ನು ನಾಯಕತ್ವದಿಂದ ಕೆಳಗಿಳಿಸಿ ಆಕ್ರೋಶಕ್ಕೆ ಗುರಿಯಾದರೆ, ಕಪ್ತಾನಗಿರಿ ಕಳೆದುಕೊಂಡ ಗಂಗೂಲಿ ಭಾರೀ ಬೆಂಬಲ ಪಡೆದುಕೊಂಡರು. ಅತ್ತ ಬಹುನಾಯಕತ್ವ ಕಲ್ಪನೆಯನ್ನು ಭಟ್ಟಿ ಇಳಿಸಲು ಯತ್ನಿಸಿ ಬುಚನಾನ್ ಟೂರ್ನಮೆಂಟ್‌ನಲ್ಲಿ ಮುಖಮೂತಿ ಜಜ್ಜಿಸಿಕೊಂಡರಲ್ಲದೆ ಫ್ರಾಂಚೈಸಿಯಿಂದಲೇ ವಜಾ ಶಿಕ್ಷೆಗೊಳಗಾದರು.

ವಾಡಾ ನಮಗೆ ಬೇಡ...
ಇತರ ಕ್ರೀಡೆಗಳಂತೆ ಕ್ರಿಕೆಟ್‌ನಲ್ಲೂ ಮೋಸವನ್ನು ತಡೆಯಲು ಐಸಿಸಿ ವಾಡಾ ನಿಯಮಗಳನ್ನು ಜಾರಿಗೆ ತರಲು ಯತ್ನಿಸಿದಾಗ ಭಾರತೀಯ ಕ್ರಿಕೆಟಿಗರಿಂದ ಭಾರೀ ಆಕ್ಷೇಪ ವ್ಯಕ್ತವಾದದ್ದು ದುರದೃಷ್ಟಕರ.

ಸಚಿನ್ ಸೇರಿದಂತೆ ಬಹುತೇಕ ಆಟಗಾರರು ವಾಡಾ ನಿಯಮಗಳಿಗೆ ವಿರೋಧ ವ್ಯಕ್ತಪಡಿಸಿದಾಗ ಬಿಸಿಸಿಐ ಬೆಂಬಲವಾಗಿ ನಿಂತು, ವಾಡಾ ನಿಯಮಗಳನ್ನೇ ಬದಲಾಯಿಸಿ ಎಂದು ಐಸಿಸಿ ಮೇಲೆ ಒತ್ತಡ ಹೇರಿತು. ಪರಿಣಾಮ ಐಸಿಸಿ ಅದಕ್ಕೊಂದು ವಿಶೇಷ ಸಮಿತಿಯನ್ನು ನೇಮಿಸಿ ವರದಿ ನೀಡುವಂತೆ ಹೇಳಿದೆ. ಸದ್ಯಕ್ಕಂತೂ ವಾಡಾ ನಿಯಮಗಳು ಧೂಳು ತಿನ್ನುತ್ತಿವೆ.

ವೆಸ್ಟ್‌ಇಂಡೀಸ್ ಕ್ರಿಕೆಟ್ ಆವಾಂತರ..
ಕೆರೆಬಿಯನ್ ಕ್ರಿಕೆಟ್ ಆಟಗಾರರು ಮತ್ತು ಅಲ್ಲಿನ ಕ್ರಿಕೆಟ್ ಮಂಡಳಿಯ ನಡುವಿನ ವಿವಾದದಿಂದಾಗಿ ವಿಂಡೀಸ್ ಕ್ರಿಕೆಟ್ ಈ ಬಾರಿ ತೀರಾ ಸೊರಗಿತ್ತು.

ವೇತನ ಮತ್ತಿತರ ಬೇಡಿಕೆಯೊಡ್ಡಿದ್ದ ಆಟಗಾರರನ್ನು ಧಿಕ್ಕರಿಸಿ ಎರಡನೇ ದರ್ಜೆಯ ತಂಡವನ್ನು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಕಳುಹಿಸಿ ತನ್ನ ಘನತೆಯನ್ನು ಮಣ್ಣುಪಾಲು ಮಾಡಿಕೊಂಡಿತ್ತು.

ವರ್ಷಾಂತ್ಯಕ್ಕೂ ಮೊದಲು ವಿವಾದಗಳು ಬಗೆಹರಿದು ಹಿರಿಯ ಆಟಗಾರರು ತಂಡಕ್ಕೆ ಸೇರಿಕೊಂಡಿದ್ದಾರೆ. ಕ್ರಿಸ್ ಗೇಲ್ ನಾಯಕತ್ವವನ್ನೂ ಮರಳಿ ಪಡೆದುಕೊಳ್ಳುವ ಮೂಲಕ ವಿಂಡೀಸ್ ಕ್ರಿಕೆಟ್ ಇತಿಹಾಸ ಸೇರಿ ಹೋಗುವ ಅಪಾಯವನ್ನೂ ತಪ್ಪಿಸಿದ್ದಾರೆ.
PTI

ಕ್ರೀಡೆಯನ್ನೂ ಬಿಡದ ಉಗ್ರರು...
ಜಗತ್ತೇ ಪಾಕಿಸ್ತಾನ ಪ್ರವಾಸಕ್ಕೆ ನಿರಾಕರಿಸಿದರೂ ಕೆಚ್ಚೆದೆ ಮೆರೆದ ಶ್ರೀಲಂಕಾಕ್ಕೆ ಪಾಕಿಸ್ತಾನದ ಉಗ್ರರು ದಯಪಾಲಿಸಿದ ಬಹುಮಾನ ಲಾಹೋರ್ ದಾಳಿ.

ಇದೇ ವರ್ಷದ ಮಾರ್ಚ್ ಮೂರರಂದು ಲಂಕಾ ಕ್ರಿಕೆಟಿಗರನ್ನು ಹೊಟೇಲಿನಿಂದ ಗಡಾಫಿ ಕ್ರೀಡಾಂಗಣದತ್ತ ಹೊತ್ತು ಸಾಗುತ್ತಿದ್ದ ಬಸ್ಸಿನ ಮೇಲೆ ಉಗ್ರರು ಗುಂಡಿನ ಮಳೆಗರೆದಿದ್ದರು. ಅದೃಷ್ಟವಶಾತ್ ಕೆಲವೇ ಆಟಗಾರರು ಅಲ್ಪ ಗಾಯಗೊಂಡು ಪಾರಾಗಿದ್ದರು. ಘಟನೆ ಬಗ್ಗೆ ವಿಶ್ವದಾದ್ಯಂತ ಭಾರೀ ಖಂಡನೆ ವ್ಯಕ್ತವಾಯಿತಲ್ಲದೆ, 1972ರ ಮುನಿಚ್ ದುರಂತಕ್ಕೆ ಹೋಲಿಸಲಾಯಿತು.

ಭಯೋತ್ಪಾದಕರು ಕ್ರೀಡೆಯನ್ನೂ ಗುರಿಯಾಗಿಸಿಕೊಂಡಿದ್ದಾರೆ ಎಂಬುದು ಇದರೊಂದಿಗೆ ರುಜುವಾತಾಗುವುದರೊಂದಿಗೆ ಭಾರತೀಯ ಉಪಖಂಡಕ್ಕೆ ವಿದೇಶಿ ತಂಡಗಳು ತಮ್ಮ ಆಟಗಾರರನ್ನು ಕಳುಹಿಸಲು ಹಿಂದೆ-ಮುಂದೆ ನೋಡತೊಡಗಿದವು. 2008ರ ಮುಂಬೈ ಉಗ್ರರ ದಾಳಿಯ ನಂತರ ಹುಟ್ಟಿಕೊಂಡಿದ್ದ ಭೀತಿಗೆ ಇದು ತುಪ್ಪ ಸುರಿದಂತಾಗಿತ್ತು.

ಪಾಕಿಸ್ತಾನ ಸರಕಾರವು ಕ್ರೀಡಾಪಟುಗಳಿಗೆ ನೀಡಿದ್ದ ಭದ್ರತೆ ಮತ್ತು ಭದ್ರತಾ ಲೋಪಗಳ ಬಗ್ಗೆ ಸಾಕಷ್ಟು ಗುಲ್ಲುಗಳೆದ್ದಿದ್ದರೂ, ಆರೋಪವನ್ನು ಒಮ್ಮೆ ಭಾರತದ ಮೇಲೆ, ಮಗದೊಮ್ಮೆ ಶ್ರೀಲಂಕಾದ ಎಲ್‌ಟಿಟಿಇ ಮೇಲೆ ಹೀಗೆ ಅಲ್ಲಿನ ಸರಕಾರದ ಚಂಚಲಚಿತ್ತ ಜಗಜ್ಜಾಹೀರಾಯಿತು.

ಮುಗಿಯದ ಪಾಕ್ ಬಾಧೆ...
ಪಾಕಿಸ್ತಾನ ಕ್ರಿಕೆಟ್ ಈ ವರ್ಷ ಸಾಕಷ್ಟು ಏರಿಳಿತಗಳಿಗೆ ಸಾಕ್ಷಿಯಾಯಿತು. ನಾಯಕತ್ವ ಪಡೆದುಕೊಂಡ ಹಿರಿಯ ಆಟಗಾರ ಯೂನಿಸ್ ಖಾನ್ ಟ್ವೆಂಟಿ-20 ವಿಶ್ವಕಪ್ ಗೆಲ್ಲಲು ಸಹಕರಿಸಿದ ಹೊರತಾಗಿಯೂ ತಂಡದೊಳಗೆ ಭಿನ್ನಮತಕ್ಕೆ ಕಾರಣಗಳು ಸಿಕ್ಕಿದ್ದವು.

ಶಾಹಿದ್ ಆಫ್ರಿದಿ, ಶೋಯಿಬ್ ಮಲಿಕ್ ಸೇರಿದಂತೆ ಹಲವು ಆಟಗಾರರು ಅವರ ವಿರುದ್ಧವೇ ತಿರುಗಿ ಬಿದ್ದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಭಯದಿಂದಾಗಿ ನಾಯಕತ್ವವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ತಂಡದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಬಂದದ್ದು ಪಾಕ್ ತಂಡಕ್ಕೆರಗಿದ ಮತ್ತೊಂದು ಆಘಾತ. ಆರೋಪ-ಪ್ರತ್ಯಾರೋಪಗಳ ಬಳಿಕ ಸಾಕ್ಷಿಗಳಿಲ್ಲ ಎಂಬ ನೆಲೆಯಲ್ಲಿ ಪ್ರಕರಣ ಮೂಲೆ ಸೇರಿತಾದರೂ ಕಳಂಕ ತಟ್ಟಿದ್ದು ಅಹುದಹುದೆನ್ನುವಂತಿತ್ತು.

ವಿಶ್ವಕಪ್ ಪಾಕ್ ಪಂದ್ಯಗಳು ಸ್ಥಳಾಂತರ...
ಪಾಕಿಸ್ತಾನ ಕ್ರಿಕೆಟ್‌ಗಿದು ಮಹತ್ತರವಾದ ಹಿನ್ನಡೆ. ಮೊದಲೇ ಭಯೋತ್ಪಾದನಾ ದಾಳಿಗಳಿಂದ ನಲುಗುತ್ತಿದ್ದ ಪಾಕಿಸ್ತಾನದಲ್ಲಿ ಈ ಬಾರಿ ಶ್ರೀಲಂಕಾ ಆಟಗಾರರ ಮೇಲಿನ ದಾಳಿಯಿಂದಾಗಿ ಯಾವುದೇ ಕಾರಣಕ್ಕೂ ವಿಶ್ವಕಪ್ ನಡೆಸಲಾಗದು ಎಂದು ಐಸಿಸಿ ಖಡಾಖಂಡಿತವಾಗಿ ಹೇಳಿ ಬಿಟ್ಟಿತು.

ಪಾಕ್ ಸಾಕಷ್ಟು ಕಸರತ್ತು ನಡೆಸಿದರೂ ವಿಶ್ವಕಪ್ ಪಂದ್ಯಗಳನ್ನು ನಡೆಸದಿರುವ ನಿರ್ಧಾರವನ್ನು ಐಸಿಸಿ ಬದಲಾಯಿಸಲಿಲ್ಲ. ಅಲ್ಲಿ ನಡೆಯಲಿದ್ದ ಪಂದ್ಯಗಳನ್ನು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗೆ ಹಂಚಿ ಬಿಟ್ಟಿದೆ ಐಸಿಸಿ.

2010ರ ವಿಶ್ವ ಕ್ರಿಕೆಟ್ ಹಬ್ಬದ ಪ್ರಮುಖ ಪಾಲುದಾರ ಭಾರತವಾಗಿರುವುದರಿಂದ ನಿರೀಕ್ಷೆಗಳು ಹೆಚ್ಚಿರುತ್ತವೆ. ಅದಕ್ಕಿಂತಲೂ ಹೆಚ್ಚು ಸುರಕ್ಷಿತವಾಗಿ ವಿಶ್ವಕಪ್ ನಡೆಯಬೇಕೆಂಬ ಆಶಯ. ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ