ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಉತ್ತಮ ಕೌಶಲ್ಯ ಮತ್ತು ಟೀಮ್ ವರ್ಕ್ ತೋರಿದ್ದಾರೆ. ಅವರ ಸಾಧನೆಯಿಂದ ಭಾರತವು ನಂಬಲಾಗದಷ್ಟು ಸಂತೋಷವಾಗಿದೆ ಎಂದು ಮೋದಿ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ಭಾರತಕ್ಕೆ ಈ ಒಲಿಂಪಿಕ್ಸ್‌ನಲ್ಲಿ ದೊರೆತ ಮೊದಲ ಪದಕವಾಗಿದೆ. ಈ ಮೊದಲು ಮಹಿಳೆಯರ 10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಮನು ಭಾಕರ್, ಇದೀಗ ಮಿಶ್ರ ತಂಡ ವಿಭಾಗದಲ್ಲೂ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ನಂತರದ ಒಲಿಂಪಿಕ್ಸ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಎನ್ನುವ ಹಿರಿಮೆಗೆ ಮನು ಭಾಕರ್ ಪಾತ್ರರಾಗಿದ್ದಾರೆ.
ಮೊದಲ ಸುತ್ತಿನಲ್ಲಿ ಕೊರಿಯಾ ಜೋಡಿ 2-0 ಮುನ್ನಡೆ ಸಾಧಿಸಿತು. ಇದಾದ ಬಳಿಕ ಸತತ 4 ಸುತ್ತುಗಳಲ್ಲಿ ಭಾರತದ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ ಮುನ್ನಡೆ ಸಾಧಿಸುವ ಮೂಲಕ 8-2 ಮುನ್ನಡೆಗಳಿಸಿತು. ಆ ಬಳಿಕ ಮತ್ತೆ ಕೊರಿಯಾ ಜೋಡಿ ಕಮ್‌ಬ್ಯಾಕ್ ಮಾಡುವ ಪ್ರಯತ್ನ ನಡೆಸಿತಾದರೂ, ಭಾರತದ ಜೋಡಿ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಲೇ ಸಾಗುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿತ್ತು. ಅಂತಿಮವಾಗಿ ಭಾರತದ ಜೋಡಿ 16-10 ಅಂಕಗಳ ಅಂತರದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿತು.