ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಟೆನ್ನಿಸ್ ಸಿಂಗಲ್ಸ್ನಲ್ಲಿ ಸ್ಪರ್ಧಿಸಿದ್ದ ಸುಮಿತ್ ನಗಾಲ್ ಹಾಗೂ ಪುರುಷರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಮೊದಲ ಪಂದ್ಯಗಳಲ್ಲೇ ಮುಗ್ಗರಿಸಿದ್ದಾರೆ. ಹೀಗಾಗಿ, ಭಾರತದ ಟೆನ್ನಿಸ್ ತಂಡದ ಅಭಿಯಾನ ಅಂತ್ಯಗೊಂಡಿದೆ.
ಸುಮಿತ್ ನಗಾಲ್ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ತಮ್ಮ ಕೈಚಳಕ ಪ್ರದರ್ಶಿಸುವಲ್ಲಿ ವಿಫಲರಾದರು. ಭಾನುವಾರ ನಡೆದ ಈ ಪಂದ್ಯದಲ್ಲಿ ಸುಮಿತ್ ಫ್ರೆಂಚ್ ಆಟಗಾರ ಕೊರೆಂಟಿನ್ ಮೌಟೆಟ್ 6-2, 2-6, 7-5 ಸೆಟ್ಗಳಿಂದ ಸೋಲನುಭವಿಸಿದರು. ಇದರೊಂದಿಗೆ ನಗಾಲ್ ಪ್ಯಾರಿಸ್ ಒಲಿಂಪಿಕ್ಸ್ನಿಂದ ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಅವರು ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎರಡನೇ ಸುತ್ತು ತಲುಪಿದ್ದರು.
ಪುರುಷರ ಡಬಲ್ಸ್ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ಧ ಕನ್ನಡಿಗ ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಕೂಡ ಆರಂಭಿಕ ಸುತ್ತಿನಲ್ಲೇ ಆಘಾತ ಅನುಭವಿಸಿದರು. ರೋಲ್ಯಾಂಡ್ ಗ್ಯಾರೋಸ್ನ ಕ್ಲೇ ಕೋರ್ಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಫ್ರೆಂಚ್ ಜೋಡಿ ಗೇಲ್ ಮೊನ್‌ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ವಿರುದ್ಧ ಮುಗ್ಗರಿಸಿದ್ದಾರೆ.
ಫ್ರೆಂಚ್ ಜೋಡಿಯ ಪರಾಕ್ರಮದ ಮುಂದೆ ಮಂಕಾದಂತೆ ಕಂಡು ಬಂದ ಆನುಭವಿ ಆಟಗಾರ ರೋಹನ್ ಬೋಪಣ್ಣ ಹಾಗೂ ಶ್ರೀರಾಮ್ ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಳಿಸಿದ್ದಾರೆ. ವಿಶೇಷ ಎಂದರೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ ಪಂದ್ಯದ ವೇಳೆ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಕೂಡ ಕಾಣಿಸಿಕೊಂಡಿದ್ದರು.
ರೋಹನ್ ಬೋಪಣ್ಣ ಅವರಿಗೆ ಇದು ಮೂರನೇ ಒಲಿಂಪಿಕ್ಸ್ ಆಗಿತ್ತು. ಈ ಹಿಂದೆ 2012 ಮತ್ತು 2016ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2016ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ಸ್ಪರ್ಧಿಸಿ ನಾಲ್ಕನೇ ಸ್ಥಾನ ಪಡೆದಿದ್ದರು. ಈ ಮೂಲಕ ವೃತ್ತಿಜೀವನದಲ್ಲಿ ಒಲಿಂಪಿಕ್ಸ್ ಪದಕ ಗೆಲ್ಲುವ ಕೊನೆಯ ಅವಕಾಶ ಕಮರಿದೆ.