ಏಕದಿನ ಪಂದ್ಯದಲ್ಲಿ ನೂತನ ವಿಶ್ವ ದಾಖಲೆ ಬರೆದ ಇಂಗ್ಲೆಂಡ್

ಬುಧವಾರ, 31 ಆಗಸ್ಟ್ 2016 (09:30 IST)
ಏಕದಿನ ಕ್ರಿಕೆಟ್‌ನಲ್ಲಿ 444ರನ್ ಪೇರಿಸುವ ಮೂಲಕ ಶ್ರೀಲಂಕಾದ ದಾಖಲೆಯನ್ನು ಮುರಿದ ಇಂಗ್ಲೆಂಡ್ ಮಂಗಳವಾರ ನೂತನ ವಿಶ್ವದಾಖಲೆಯನ್ನು ಬರೆದಿದೆ. 10 ವರ್ಷಗಳ ಹಿಂದೆ ನೆದರ್ಲೆಂಡ್ ವಿರುದ್ಧ ಶ್ರೀಲಂಕಾ 443/9 ರನ್ ಪೇರಿಸಿದ್ದು ಈವರೆಗಿನ ವಿಶ್ವ ದಾಖಲೆಯಾಗಿತ್ತು. 

ಇಂಗ್ಲೆಂಡ್ ಪೇರಿಸಿದ ಈ ಮಹಾಗಜ ಮೊತ್ತವನ್ನು ಬೆನ್ನಟ್ಟಿ ಹೊರಟ ಪಾಕಿಸ್ತಾನ 42.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 275 ಮೊತ್ತಕ್ಕೆ ಶರಣಾಯಿತು. 169ರನ್‌ಗಳ ಬೃಹತ್ ಅಂತರದಿಂದ ಪಾಕಿಸ್ತಾನವನ್ನು ಬಗ್ಗು ಬಡಿದ ಇಂಗ್ಲೆಂಡ್  5 ಪಂದ್ಯಗಳ ಏಕದಿನ ಸರಣಿಯನ್ನು 3-0 ಇಂದ ಕೈವಶ ಮಾಡಿಕೊಂಡಿದೆ. 
 
ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ಎ.ಡಿ. ಹೇಲ್ಸ್ ಅವರ 171 ರನ್‌ಗಳ ಸಹಾಯದಿಂದ ಕೇವಲ 3 ವಿಕೆಟ್ ನಷ್ಟಕ್ಕೆ 444 ರನ್ ಪೇರಿಸಿತು. 300 ಬಾಲ್‌ಗಳಲ್ಲಿ ಬರೊಬ್ಬರಿ 16 ಸಿಕ್ಸರ್, 43 ಬೌಂಡರಿ, 26 ಎಕ್ಸ್‌ಟ್ರಾ ರನ್‌ಗಳಿದ್ದವು. 
 
ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಓಪನರ್ ಆಗಿ ಬ್ಯಾಟಿಂಗ್‌ಗಿಳಿದ ಎ.ಡಿ.ಹೇಲ್ಸ್ ಜತೆಗೆ ಬ್ಯಾಟಿಂಗ್‌ಗಿಳಿದ ಜೆ.ಜೆ.ರಾಯ್ 5 ನೇ ಓವರ್‌ನಲ್ಲಿ ಕೇವಲ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. 
 
ಬಳಿಕ ಸೃಷ್ಟಿಯಾದದ್ದು ಮಾತ್ರ ಇತಿಹಾಸ. ರೂಟ್ ಹೇಲ್ಸ್ ಜತೆಗೂಡಿ ಆರ್ಭಟಿಸಲು ಪ್ರಾರಂಭಿಸಿದ ಹೇಲ್ಸ್ ಪಾಕ್ ಬೌಲಿಂಗ್‌ನ್ನು ಮನಬಂದಂತೆ ಚಚ್ಚಿ ಹಾಕಿದರು. ಅವರ ಆಟದ ತೀವೃತೆ ಎಷ್ಟಿತ್ತೆಂದರೆ 5 ಓವರ್ ಅಂತ್ಯಕ್ಕೆ 33 ರನ್ ಗಳಿಸಿದ್ದ ಇಂಗ್ಲೆಂಡ್ 37ನೇ ಓವರ್‌ನಲ್ಲಿ ಹೇಲ್ಸ್ 171 ರನ್ ಗಳಿಸಿ ದ್ವಿಶತಕದ ಹತ್ತಿರ ಬಂದು ಔಟಾದಾಗ 282 ರನ್ ಗಳಿಸಿ ಬಿಟ್ಟಿತ್ತು. ಅದರಲ್ಲಿ ಹೆಚ್ಚಿನ ಪಾಲು ಹೇಲ್ಸ್ ಅವರದೇ ಆಗಿತ್ತು. 122 ಎಸೆತಗಳನ್ನು ಎದುರಿಸಿದ್ದ ಅವರ ಈ ಭರ್ಜರಿ ಶತಕದಲ್ಲಿ 22 ಬೌಂಡರಿ, 4 ಸಿಕ್ಸರ್‌ಗಳಿದ್ದವು. 
 
ಹೇಲ್ಸ್ ಬಳಿಕ ಮೈದಾನಕ್ಕಿಳಿದ ಬಟ್ಲರ್ ತಂಡದ ಮೊತ್ತಕ್ಕೆ ಮತ್ತೆರಡು ರನ್ ಸೇರಿಸುವಷ್ಟರಲ್ಲಿ ಶತಕದಂಚಿಗೆ ಬಂದಿದ್ದ ರೂಟ್ (85) ವಿಕೆಟ್ ಕೈ ಚೆಲ್ಲಿ ನಿರಾಶೆಯಿಂದ ಮರಳಿದರು. 
 
ಬಳಿಕ ಬಂದ ನಾಯಕ ಮಾರ್ಗನ್-ಬಟ್ಲರ್ ಜತೆ ಸೇರಿ ಹೊಡಿ-ಬಡಿ ಆಟಕ್ಕಿಳಿದರು. ಇವರಿಬ್ಬರು ಸುರಿಸಿದ ರನ್ ಮಳೆಯಿಂದಾಗಿ 38ನೇ ಓವರ್‌ನಲ್ಲಿ 283 ರನ್ ಇದ್ದ ಇಂಗ್ಲೆಂಡ್ ಮೊತ್ತ 50 ಓವರ್ ಅಂತ್ಯಕ್ಕೆ 444ರನ್ ತಲುಪಿತು. ಅಂದರೆ ಇಂಗ್ಲೆಂಡ್ ಕೇವಲ 12 ಓವರ್‌ಗಳಲ್ಲಿ 161 ರನ್ ಪೇರಿಸಿದಂತಾಯಿತು. ಬಟ್ಲರ್ 7 ಬೌಂಡರಿ, 7 ಸಿಕ್ಸರ್‌ಗಳನ್ನು ಬಾರಿಸಿ 90 ರನ್ ಗಳಿಸಿದರೆ ಮಾರ್ಗನ್ 3 ಬೌಂಡರಿ 5 ಸಿಕ್ಸರ್ ಸಹಾಯದಿಂದ 57ರನ್ ಗಳಿಸಿ ಅಜೇಯರಾಗುಳಿದರು. 
 
ಇಂಗ್ಲೆಂಡ್ ಸುರಿಸುತ್ತಿದ್ದ ರನ್ ಮಹಾಮಳೆಯನ್ನು ನಿಯಂತ್ರಿಸಲು ಪಾಕ್ 7 ಬೌಲರ್‌ಗಳನ್ನು ಪ್ರಯೋಗಿಸಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪಾಕಿಸ್ತಾನದ ಪರವಾಗಿ ವಹಾಬ್ ರಿಯಾಜ್ 10 ಓವರ್‌ನಲ್ಲಿ 110 ರನ್ ನೀಡಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. 
 
ಪಾಕಿಸ್ತಾನದ ಪರವಾಗಿ ಬ್ಯಾಟಿಂಗ್‌ಗಿಳಿದ ಶರ್ಜಿಲ್ ಖಾನ್ (59) ಮತ್ತು ಮೊಹಮ್ಮದ್ ಅಮೀರ್ (58) ಮಾತ್ರ ಸ್ವಲ್ಪ ಮಟ್ಟಿನ ಪ್ರತಿರೋಧನ್ನು ತೋರಿದರಾದರೂ ಪರ್ವತದಂತಹ ರನ್ ಗಡಿಯ ಮುಂದೆ ಅವರೇನು ಮಾಡದಾದರು.  ಸರ್ಫರಾಜ್ ಅಹಮದ್ (38) ಮತ್ತು ಮೊಹಮ್ಮದ್ ನವಾಜ್ (34)  ಸಹ ತಂಡಕ್ಕೆ ಅಲ್ಪ ಕಾಣಿಕೆಯನ್ನು ನೀಡಿದರು. 
 
ಇಂಗ್ಲೆಂಡ್ ಪರವಾಗಿ ಕ್ರಿಸ್ ವೋಕ್ಸ್ 4 ವಿಕೆಟ್ ಕಬಳಿಸಿ ಗಮನ ಸೆಳೆದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ