Doha Diamond League: ಜಾವೆಲಿನ್‌ ಥ್ರೋನಲ್ಲಿ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ: ಹಳೆಯ ದಾಖಲೆಗಳು ಉಡೀಸ್‌

Sampriya

ಶನಿವಾರ, 17 ಮೇ 2025 (00:12 IST)
Photo Courtesy X
ನವದೆಹಲಿ: ಭಾರತದ ಜಾವೆಲಿನ್‌ ತಾರೆ ನೀರಜ್ ಚೋಪ್ರಾ ಅವರು ಶುಕ್ರವಾರ ನಡೆದ ದೋಹಾ ಡೈಮಂಡ್ ಲೀಗ್‌ ಕೂಟದಲ್ಲಿ 90.23 ಮೀಟರ್ ಜಾವೆಲಿನ್ ಎಸೆದು ಹೊಸ ಇತಿಹಾಸ ಬರೆದಿದ್ದಾರೆ.

ನೀರಜ್‌ ಇದೇ ಮೊದಲ ಬಾರಿ 90 ಮೀಟರ್‌ ಮೈಲಿಗಲ್ಲು ದಾಟಿದರು. ಈ ಸಾಧನೆ ಮಾಡಿದ ವಿಶ್ವದ 25ನೇ ಮತ್ತು ಏಷ್ಯಾದ ಮೂರನೇ ಜಾವೆಲಿನ್‌ ಥ್ರೋಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಕತಾರ್‌ನ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಸರಣಿಯ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅದ್ಭುತ ಪ್ರದರ್ಶನ ನೀಡಿದ್ದಾರೆ. 90 ಮೀಟರ್ ಗಡಿ ದಾಟುವ ಮೂಲಕ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ತನ್ನ ಹಳೆ ದಾಖಲೆಯನ್ನೇ ಮುರಿದಿದ್ದಾರೆ. ಇದು ರಾಷ್ಟ್ರೀಯ ದಾಖಲೆಯೂ ಹೌದು.

ಜರ್ಮನಿಯ ಜೂಲಿಯನ್ ವೆಬರ್ ತಮ್ಮ ಅಂತಿಮ ಪ್ರಯತ್ನದಲ್ಲಿ 91.06 ಮೀಟರ್ ಎಸೆಯುವ ಮೂಲಕ ಮೊದಲ ಸ್ಥಾನ ಪಡೆದರು. ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿ 88.44 ಮೀಟರ್ ಜಾವೆಲಿನ್ ಎಸೆದು ಆರಂಭಿಕ ಮುನ್ನಡೆ ಸಾಧಿಸಿದರು. ನೀರಜ್ ಚೋಪ್ರಾ ಮೂರನೇ ಎಸೆತದಲ್ಲಿ 90.23 ಮೀಟರ್ ದೂರಕ್ಕೆ ಎಸೆದು ದೋಹಾ ಡೈಮಂಡ್ ಲೀಗ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.  

ಎರಡು ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ  ಗ್ರೆನೆಡಾದ ಆಂಡರ್ಸನ್ ಪೀಟರ್ಸ್ (85.64 ಮೀ.) ಮೂರನೇ ಸ್ಥಾನ ಪಡೆದರು. ಭಾರತದ ಕಿಶೋರ್‌ ಜೇನಾ (78.60 ಮೀ) ಎಂಟನೇ ಸ್ಥಾನ ಗಳಿಸಿದರು.‌‌



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ