54 ನಿಮಿಷದಲ್ಲಿ 7 ವಿಕೆಟ್ ಪತನ: 554 ಟೆಸ್ಟ್ ಗಳಲ್ಲೇ ಕಳಪೆ ದಾಖಲೆ ಬರೆದ ಕೊಹ್ಲಿ ಪಡೆ

ಶನಿವಾರ, 28 ಆಗಸ್ಟ್ 2021 (18:59 IST)
ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ 78 ರನ್ ಗಳಿಗೆ ಆಲೌಟಾಗಿತ್ತು. ಅದರಲ್ಲೂ 56 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ಕೊನೆಯ 7 ವಿಕೆಟ್ ಅನ್ನು 78 ರನ್ ಆಗುವಷ್ಟರಲ್ಲಿ ಕಳೆದುಕೊಂಡಿತ್ತು. ಅದು ಕೂಡ ಭೋಜನ ವಿರಾಮದ ಸ್ವಲ್ಪ ಸಮಯದಲ್ಲೇ ತಂಡ ಆಲೌಟಾಗಿತ್ತು.
354 ರನ್ ಗಳ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಭಾರತ ಒಂದು ಹಂತದಲ್ಲಿ 237 ರನ್ ಗೆ 3 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಸೋಲಿನ ಭೀತಿಯಿಂದ ಪಾರಾಗುವ ಭರವಸೆ ಮೂಡಿಸಿತ್ತು. ಆದರೆ ಶನಿವಾರ ಆಟ ಆರಂಭವಾಗುತ್ತಿದ್ದಂತೆ ಭಾರತ 63 ರನ್ ಗಳ ಅಂತರದಲ್ಲಿ 7 ವಿಕೆಟ್ ಕಳೆದುಕೊಂಡಿದ್ದು, ತಂಡದ ಹೀನಾಯ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಇದು ಭಾರತ 554 ಟೆಸ್ಟ್ ಪಂದ್ಯಗಳಲ್ಲೇ ಮೊದಲ ಬಾರಿ ಈ ರೀತಿ ಕಳಪೆ ಮೊತ್ತಕ್ಕೆ ಕೊನೆಯ 7 ವಿಕೆಟ್ ಕಳೆದುಕೊಂಡ ಕುಖ್ಯಾತಿಗೆ ಪಾತ್ರವಾಯಿತು.
ರನ್ ಬರ ಎದುರಿಸುತ್ತಿದ್ದ ಚೇತೇಶ್ವರ್ ಪೂಜಾರ ಮತ್ತು ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಈ ವೈಫಲ್ಯ ಅನುಭವಿಸಿರುವುದು ತಂಡದ ಆತಂಕ ಹೆಚ್ಚಿಸಿದೆ. ಪೂಜಾರ ಶನಿವಾರ ಒಂದೂ ರನ್ ಸೇರಿಸದೇ ನಿನ್ನೆಯ 91 ರನ್ ಮೊತ್ತಕ್ಕೆ ಔಟಾದರೆ, ಕೊಹ್ಲಿ ಅರ್ಧಶತಕ ಬಾರಿಸಿ ನಿರ್ಗಮಿಸಿದರು. ಇವರಿಬ್ಬರು ಔಟಾಗುತ್ತಿದ್ದಂತೆ ಉಳಿದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ಆರಂಭಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ