ನವದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದಾರೆ. ಆದರೆ, ಅವರು ಭಾರತದ ಕೋಟ್ಯಂತರ ಜನರ ಹೃದಯವನ್ನು ಗೆದ್ದಿದ್ದಾರೆ.
ಹಲವು ತಿಂಗಳುಗಳಿಂದ ಪ್ರಶಸ್ತಿಯ ಬರವನ್ನು ಎದುರಿಸುತ್ತಿದ್ದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಕಳೆದ ತಿಂಗಳು ಸೈಯದ್ ಮೋದಿ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಅವರು ಉದ್ಯಮಿ ವೆಂಕಟ ದತ್ತಾಸಾಯಿ ಅವರನ್ನು ಡಿಸೆಂಬರ್ 22ರಂದು ರಾಜಸ್ಥಾನದ ಉದಯಪುರದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ಹಸೆಮಣೆಯೇರಿದ್ದರು.
ಮದುವೆ ಬೆನ್ನಲ್ಲೇ ನಡೆದ ಮಲೇಷ್ಯಾ ಓಪನ್ ಟೂರ್ನಿಯಿಂದ ದೂರ ಉಳಿದಿದ್ದ 29 ವರ್ಷದ ಸಿಂಧು ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್‌ನಲ್ಲಿ ಕಣಕ್ಕೆ ಇಳಿದಿದ್ದರು. ಆದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ತವರಿನ ಕೊನೆಯ ಭರವಸೆಯಾಗಿದ್ದ ಸಿಂಧು, ಇಂದು ಪರಾಭವಗೊಂಡರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಇಂಡೋನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರಿಗೆ ಶರಣಾದರು.
ಸಿಂಧು ಅವರು ಆಟದ ಜೊತೆಗೆ ಅವರು ಧರಿಸಿಕೊಂಡಿದ್ದ ಆಭರಣಗಳಿಂದ ಭಾರತೀಯರ ಗಮನ ಸೆಳೆದರು. ಈ ಹಿಂದಿನ ಟೂರ್ನಿಗಳಲ್ಲಿ ಚಿನ್ನದ ಚೈನ್ ಧರಿಸಿ ಆಡುತ್ತಿದ್ದ ಸಿಂಧು ಈ ಬಾರಿ ಕರಿಮಣಿ ಸರವನ್ನು ಧರಿಸಿ ಅಂಕಣಕ್ಕೆ ಇಳಿದರು. ಮಾತ್ರವಲ್ಲ, ಕೈಬೆರಳಿಗೆ ಒಡ್ಡು ಉಂಗುರವನ್ನು ಧರಿಸಿದ್ದರು. ಮದುವೆಯಾದ ಹೆಣ್ಣುಮಕ್ಕಳು ಕರಿಮಣಿ ಸರ ಮತ್ತು ಒಡ್ಡು ಉಂಗುರ ಧರಿಸುವುದು ಹಿಂದೂ ಸಂಪ್ರದಾಯ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಬಾನೆತ್ತರದ ಸಾಧನೆ ಮಾಡಿದರೂ ಸಂಸ್ಕೃತಿಯನ್ನು ಪಾಲಿಸಿ ಜನರ ಹೃದಯವನ್ನು ಗೆದ್ದಿದ್ದಾರೆ.