ರಜತ್ ಚೊಚ್ಚಲ ಶತಕ: ಲಕ್ನೋಗೆ ಆರ್ ಸಿಬಿ 208 ರನ್ ಗುರಿ

ಬುಧವಾರ, 25 ಮೇ 2022 (22:10 IST)

ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದರ್ ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಲಕ್ನೋ ಸೂಪರ್ ಗೈಂಟ್ಸ್ ತಂಡಕ್ಕೆ ಪೈಪೋಟಿಯ ಮೊತ್ತ ಗುರಿ ಒಡ್ಡಿದೆ.

ಕೋಲ್ಕತಾದಲ್ಲಿ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿತು.

ಆರ್ ಸಿಬಿ ತಂಡ ಆರಂಭದಲ್ಲೇ ನಾಯಕ ಫಾಫ್ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಫಾರ್ಮ್ ಗೆ ಮರಳಿದ್ದ ವಿರಾಟ್ ಕೊಹ್ಲಿ ಮತ್ತು ರಜತ್ ಪಟಿದರ್ 66 ರನ್ ಜೊತೆಯಾಟ ನಿಭಾಯಿಸಿದರು.

ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 2 ಬೌಂಡರಿ ಸೇರಿದ 25 ರನ್ ಬಾರಿಸಿ ಔಟಾದ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ ವೆಲ್ (9) ಮತ್ತು ಮಹಿಪಾಲ್ ಲೊಮ್ರೊರ್ (14) ಬೇಗನೆ ನಿರ್ಗಮಿಸಿದ್ದರಿಂದ ತಂಡ ಮತ್ತೊಮ್ಮೆ ಒತ್ತಡಕ್ಕೆ ಒಳಗಾಯಿತು.

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ ರಜತ್ ಪಟಿದರ್ 49 ಎಸೆತಗಳಲ್ಲಿ 11 ಬೌಂಡರಿ 6 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದರು. ಅಲ್ಲದೇ ರವಿ ಬಿಶ್ನೋಯಿ ಅವರ ಒಂದೇ ಓವರ್ ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ 26 ರನ್ ಕೊಳ್ಳೆ ಹೊಡೆದರು.

ರಜತ್ ಅಂತಿಮವಾಗಿ 54 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 112 ರನ್ ಬಾರಿಸಿ ಔಟಾಗದೇ ಉಳಿದರೆ, ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್ ಗೆ 6.5 ಓವರ್ ಗಳಲ್ಲಿ 92 ರನ್ ಜೊತೆಯಾಟ ನಿಭಾಯಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ