ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಕಾಕಾ ವಿದಾಯ

ರಾಮಕೃಷ್ಣ ಪುರಾಣಿಕ

ಮಂಗಳವಾರ, 19 ಡಿಸೆಂಬರ್ 2017 (17:38 IST)
ವಿಶ್ವ ಕಂಡ ಅತ್ಯುತ್ತಮ ಫುಟ್‌ಬಾಲ್ ಆಟಗಾರ, 2002 ರ ಫಿಫಾ ವಿಶ್ವಕಪ್‌ ಗೆದ್ದ ಬ್ರೆಜಿಲ್‌ ತಂಡದಲ್ಲಿದ್ದ ಹಾಗೂ 2007 ರ ವರ್ಷದ ಶ್ರೇಷ್ಠ ಆಟಗಾರ ಬ್ಯಾಲನ್ ಡಿ' ಓರ್ ಪ್ರಶಸ್ತಿ ವಿಜೇತ ಗೌರವಕ್ಕೆ ಭಾಜನರಾಗಿದ್ದ 35 ರ ಹರೆಯದ ರಿಕಾರ್ಡೊ ಕಾಕಾ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಭಾನುವಾರ ವಿದಾಯ ಹೇಳಿದ್ದಾರೆ.
ಅತ್ಯಂತ ಆಕ್ರಣಕಾರಿ ಮಿಡ್‌ಫೀಲ್ಡರ್ ಆದ ರಿಕಾರ್ಡೊ ಕಾಕಾ ಬ್ರೆಜಿಲ್ ಪರ 92 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 29 ಗೋಲುಗಳನ್ನು ಗಳಿಸಿದ್ದಾರೆ. ಸಾವೊ ಪಾಲೊ, ಮಿಲನ್, ರಿಯಲ್ ಮ್ಯಾಡ್ರಿಡ್ ಹಾಗೂ ಒರ್ಲ್ಯಾಂಡೊ ಸಿಟಿ ಕ್ಲಬ್‌ಗಳ ಪರ ಒಟ್ಟಾರೆಯಾಗಿ 654 ಪಂದ್ಯಗಳಿಂದ 208 ಗೋಲುಗಳನ್ನು ಹೊಡೆದಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
 
"ಆಟಗಾರ ಅಥವಾ ಅಥ್ಲೀಟ್ ಆಗಿ ಇಂದಿಗೆ ನನ್ನ ವೃತ್ತಿಪರ ಫುಟ್‌ಬಾಲ್ ಆಟವನ್ನು ಮುಕ್ತಾಯಗೊಳಿಸಲು ನಾನು ನಿರ್ಧರಿಸಿದ್ದೇನೆ. ನನ್ನ ಮುಂದಿನ ಜೀವನವನ್ನು ಒಂದು ತಂಡದ ಮ್ಯಾನೇಜರ್ ಅಥವಾ ಕ್ರೀಡಾ ನಿರ್ದೇಶಕನಾಗಿ ಕೆಲಸ ಮಾಡುತ್ತೇನೆ" ಎಂದು ತಮ್ಮ ಇಂಗಿತವನ್ನು ಕಾಕಾ ವ್ಯಕ್ತಪಡಿಸಿದ್ದಾರೆ.
 
"ತಂದೆ ಯೇಸುವೇ, ನಾನು ಅಪೇಕ್ಷೆ ಪಟ್ಟಿರುವುದಕ್ಕಿಂತ ಹೆಚ್ಚಿನದೇ ಸಿಕ್ಕಿದೆ, ನಿಮಗೆ ಧನ್ಯವಾದಗಳು! ನಿಮ್ಮ ಹೆಸರಿನಲ್ಲಿ ನನ್ನ ಮುಂದಿನ ಜೀವನದ ಪಯಣವನ್ನು ನಡೆಸುವುದಕ್ಕೆ ಸಿದ್ಧನಾಗಿದ್ದೇನೆ. ಆಮೆನ್." ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಕಾಕಾ ಅವರು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ