ಭಾರತಕ್ಕೆ ಗೆಲ್ಲಲು 339 ರನ್ ಗಳ ಬೃಹತ್ ಟಾರ್ಗೆಟ್ ನೀಡಿದ ಪಾಕ್

ಭಾನುವಾರ, 18 ಜೂನ್ 2017 (21:16 IST)
ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ಸ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 338 ರನ್ ಗಳನ್ನು ಗಳಿಸಿದ್ದು, ಭಾರತಕ್ಕೆ ಗೆಲ್ಲಲು 339 ರನ್ ಗಳ ಬೃಹತ್ ಟಾರ್ಗೆಟ್ ನೀಡಿದೆ. 
 
ಫಖರ್ ಝಮಾನ್ (114) ಸ್ಫೋಟಕ ಆಟದ ನೆರವಿನಿಂದ ಪಾಕಿಸ್ತಾನ 338 ರನ್ ಗಳನ್ನು ಗಳಿಸಲು ಸಾಧ್ಯವಾಗಿದ್ದು, 3 ನೇ ಓವರ್ ನ 4 ನೇ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಅಜರ್ ಅಲಿ ವಿಕೆಟ್ ಪಡೆದಿದ್ದರಾದರೂ ನೋ ಬಾಲ್ ಆಗಿದ್ದರಿಂದ ಜೀವದಾನ ದೊರೆತು ಪಾಕ್ ಬ್ಯಾಟ್ಸ್ ಮನ್ ಗಳು ಹೆಚ್ಚು ಮೊತ್ತ ಗಳಿಸಲು ಕಾರಣವಾಯಿತು.  
 
ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಫಖಾರ್‌ ಖಾನ್‌ ಕೇವಲ 92 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಶತಕದ ಬಳಿಕ ಮತ್ತಷ್ಟು ಬಿರುಸಿನ ಆಟಕ್ಕೆ ಮೊರೆ ಹೋದ ಫಖಾರ್‌ ಹಾರ್ಧಿಕ್‌ ಪಾಂಡ್ಯಾ ಓವರ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಜಡೇಜಾಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಈ ವೇಳೆ ಫಖಾರ್‌ ಎದುರಿಸಿದ 106 ಎಸೆತಗಳಲ್ಲಿ 12ಬೌಂಡರಿ, ಮೂರು ಸಿಕ್ಸರ್‌ ಮೂಲಕ 114ರನ್‌ ಗಳಿಸಿದರು.
 
ಪ್ರಾರಂಭದಲ್ಲಿ ಭಾರತದ ಬೌಲರ್ ಗಳು ಪಾಕ್ ಬ್ಯಾಟ್ಸ್ ಮನ್ ಗಳ ಮೇಲೆ ನಿಯಂತ್ರಣ ಸಾಧಿಸಿದರಾದರೂ 4 ನೇ ಓವರ್ ನಂತರ ಭಾರತೀಯ ಬೌಲರ್ ಗಳು ಪಾಕ್ ಆಟಗಾರರನ್ನು ಹೆಚ್ಚು ರನ್ ಗಳಿಸದಂತೆ ತಂತ್ರ ಹೆಣೆಯುವಲ್ಲಿ ವಿಫಲರಾದರು.
 

ವೆಬ್ದುನಿಯಾವನ್ನು ಓದಿ