ಪ್ಯಾರಿಸ್: ಚಿನ್ನ ಗೆಲ್ಲುವ ಕನಸು ಭಗ್ನವಾದ ಬೆನ್ನಲ್ಲೇ ಪ್ಯಾರಿಸ್ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಇಂದು ಭಾರತದ ಲಕ್ಷ್ಯ ಸೇನ್ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ ವಿಶ್ವದ ಅಗ್ರ ಶ್ರೇಯಾಂಕಿತ ಡೆನ್ಮಾರ್ಕ್ ನ ವಿಕ್ಟರ್ ಅಕ್ಸಲ್ಸೆನ್ ವಿರುದ್ಧ ಸೋಲು ಅನುಭವಿಸಿದ್ದರು. ಇದರಿಂದಾಗಿ ಲಕ್ಷ್ಯ ಸೇನ್ ಫೈನಲ್ ಕನಸು ಭಗ್ನವಾಗಿತ್ತು. ಆದರೆ ಇದೀಗ ಅವರು ಕಂಚಿನ ಪದಕಕ್ಕಾಗಿ ಇನ್ನೊಂದು ಸೆಮಿಫೈನಲ್ ನಲ್ಲಿ ಸೋತಿದ್ದ ಮಲೇಷ್ಯಾ ಲೀ ಜೀ ವಿರುದ್ಧ ಸೆಣಸಲಾಡಲಿದ್ದಾರೆ.
ಈ ಪಂದ್ಯ ಸಂಜೆ 6 ಗಂಟೆಗೆ ನಡೆಯಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆದ್ದರೆ ಅದು ಇತಿಹಾಸವಾಗಲಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತ ಇದುವರೆಗೆ ಒಲಿಂಪಿಕ್ಸ್ ಪದಕ ಗೆದ್ದಿರಲಿಲ್ಲ. ಮಹಿಳೆಯರ ವಿಭಾಗದಲ್ಲಿ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಈ ಸಾಧನೆ ಮಾಡಿದ್ದರು.
ಆದರೆ ಇಂದು ಲಕ್ಷ್ಯ ಸೇನ್ ಗೆದ್ದರೆ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ತಾರೆ ಎಂಬ ದಾಖಲೆ ಮಾಡಲಿದ್ದಾರೆ. ಒಂದು ವೇಳೆ ಅವರು ಫೈನಲ್ ಗೇರಿದ್ದರೆ ಅದು ಮತ್ತೊಂದು ಇತಿಹಾಸವಾಗುತ್ತಿತ್ತು. ಆದರೆ ಸೆಮಿಫೈನಲ್ ನಲ್ಲಿ ಒಬ್ಬ ಪ್ರಬಲ ಎದುರಾಳಿ ವಿರುದ್ಧವೇ ಲಕ್ಷ್ಯ ಸೋತಿದ್ದರು. ಲಕ್ಷ್ಯರನ್ನು ಸೋಲಿಸಿದ ಬಳಿಕ ಸ್ವತಃ ವಿಕ್ಟರ್, ಮುಂದಿನ ಒಲಿಂಪಿಕ್ಸ್ ನಲ್ಲಿ ಖಂಡಿತಾ ಲಕ್ಷ್ಯ ಚಿನ್ನ ಗೆಲ್ಲಬಹುದು. ಅವರಲ್ಲಿ ಆ ಸಾಮರ್ಥ್ಯವಿದೆ. ಅವರೊಬ್ಬ ಕಠಿಣ ಎದುರಾಳಿಯಾಗಿದ್ದರು ಎಂದು ಹಾಡಿ ಹೊಗಳಿದ್ದರು. ಇದು ಲಕ್ಷ್ಯ ಸಾಮರ್ಥ್ಯಕ್ಕೆ ಸಿಕ್ಕ ಹೆಗ್ಗಳಿಕೆಯಾಗಿದೆ.