ನವದೆಹಲಿ: ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಈಗ ಮದುವೆ ಆಮಂತ್ರಣ ಪತ್ರಿಕೆ ವಿತರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಸಿಂಧು ಮತ್ತು ಅವರ ಭಾವೀ ಪತಿ ವೆಂಕಟದತ್ತ ಸಾಯಿ ವಿವಾಹಕ್ಕೆ ಆಮಂತ್ರಿಸಿದ್ದಾರೆ.
ಪ್ರಧಾನಿ ನಿವಾಸದಲ್ಲಿ ಮೋದಿಯವರನ್ನು ಭೇಟಿ ಮಾಡಿ ಸಿಂಧು ಮದುವೆಗೆ ಆಹ್ವಾನಿಸಿದ್ದಾರೆ. ಈ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ. ಜೊತೆಗೆ ಮೋದಿಯವರ ಬಗ್ಗೆ ವಿಶೇಷವಾಗಿ ಹೊಗಳಿದ್ದಾರೆ. ಅವರ ಈ ಒಂದು ಕಲೆಗೆ ಮಾರು ಹೋಗಿರುವುದಾಗಿ ಹೇಳಿದ್ದಾರೆ.
ನನ್ನ ಜೊತೆ ಬ್ಯಾಡ್ಮಿಂಟನ್ ಬಗ್ಗೆ, ದತ್ತ ಜೊತೆ ಡಾಟಾ ಬಗ್ಗೆ ಹೇಗೆ ಇಷ್ಟು ಸುಲಲಿತವಾಗಿ ಮಾತನಾಡಲು ನಿಮಗೆ ಸಾಧ್ಯವಾಗುತ್ತದೆ? ನಿಜಕ್ಕೂ ನೀವು ಅದ್ಭುತ ವ್ಯಕ್ತಿ ಎಂದು ಸಿಂಧು ಹೊಗಳಿದ್ದಾರೆ. ಸಿಂಧು ಈ ಹಿಂದೆ ಒಲಿಂಪಿಕ್ಸ್ ಗೆ ತೆರಳುವಾಗ ಸಂವಾದ ನಡೆಸಿದ್ದ ಮೋದಿ ಪದಕ ಗೆದ್ದು ಬಂದರೆ ಜೊತೆಗೇ ಐಸ್ ಕ್ರೀಂ ತಿನ್ನುವುದಾಗಿ ಆಹ್ವಾನ ನೀಡಿದ್ದರು. ಅದರಂತೆ ಸಿಂಧು ಮತ್ತು ಇತರೆ ಎಲ್ಲಾ ಕ್ರೀಡಾಳುಗಳ ಜೊತೆ ಐಸ್ ಕ್ರೀಂ ಸವಿದು ಅಭಿನಂದಿಸಿದ್ದರು.
ಡಿಸೆಂಬರ್ 22 ರಿಂದ 24 ರವರೆಗೆ ಸಿಂಧು ವಿವಾಹ ಸಮಾರಂಭ ಹೈದರಾಬಾದ್ ನಲ್ಲಿ ನಡೆಯಲಿದೆ. ಉದ್ಯಮಿ ವೆಂಕಟ ದತ್ತ ಸಾಯಿ ಜೊತೆ ಸಿಂಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಮದುವೆಗೆ ಈಗಾಗಲೇ ಸಿಂಧು ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಸಚಿವ ಕಿರಣ್ ರಿಜಿಜು ಸೇರಿದಂತೆ ಗಣ್ಯಾತಿಗಣ್ಯರನ್ನು ಖುದ್ದಾಗಿ ಹೋಗಿ ಆಹ್ವಾನಿಸಿದ್ದಾರೆ.