ಅಂಬೇಡ್ಕರ್ ಗೆ ನಿಜವಾದ ಗೌರವ ಸಲ್ಲಿಸಿದ್ದು ಮೋದಿಜೀ, ಕಾಂಗ್ರೆಸ್ ಮಸಿ ಬಳಿದಿತ್ತು: ವಿಜಯೇಂದ್ರ

Krishnaveni K

ಶುಕ್ರವಾರ, 6 ಡಿಸೆಂಬರ್ 2024 (14:38 IST)
ಬೆಂಗಳೂರು: ಸಂವಿಧಾನ ಶಿಲ್ಪಿ, ಸಮ ಸಮಾಜದ ನಿರ್ಮಾಣದ ಕನಸು ಕಂಡಿದ್ದ ಡಾ.ಅಂಬೇಡ್ಕರ್ ಅವರ ಚಿಂತನೆಗಳನ್ನು ನನಸು ಮಾಡುವ ಏಕೈಕ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಬಾಬಾಸಾಹೇಬ ಅವರ ಭಾವಚಿತ್ರಕ್ಕೆಪುಷ್ಪಾರ್ಚನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಬಾಬಾಸಾಹೇಬರಿಗೆ ನೈಜ ಗೌರವ ಸಲ್ಲಿಸಲು ದೇಶ ಯಾವ ದಿಕ್ಕಿನಲ್ಲಿ ಸಾಗಬೇಕೋ ಆ ನಿಟ್ಟಿನಲ್ಲಿ ದೇಶವನ್ನು ಒಯ್ಯುವ ಕೆಲಸ ಮೋದಿಜೀ ಅವರಿಂದ 10 ವರ್ಷಗಳಿಂದ ಆಗುತ್ತಿದೆ. ನರೇಂದ್ರ ಮೋದಿಜೀ ಅವರು ಬಾಬಾಸಾಹೇಬರ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ 5 ಸ್ಥಳಗಳನ್ನು ಪಂಚತೀರ್ಥವನ್ನಾಗಿ ಅಭಿವೃದ್ಧಿಗೊಳಿಸಿದ್ದಾರೆ ಎಂದು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನು ಜನರ ಮಧ್ಯೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಕಳಕಳಿ ಇರುವುದು ಬಿಜೆಪಿಗೆ ಮಾತ್ರ. ನರೇಂದ್ರ ಮೋದಿಜೀ ಅವರು ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಮಹಾನ್ ಚೇತನ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವುದರ ಜೊತೆಜೊತೆಗೆ ಅವರ ಧ್ಯೇಯ, ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಅಂಬೇಡ್ಕರರ ಆಶಯಕ್ಕೆ ಮಸಿ ಬಳಿದವರು ಕಾಂಗ್ರೆಸ್ಸಿಗರು
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಅಂಬೇಡ್ಕರರ ಆಶಯಕ್ಕೆ ಮಸಿ ಬಳಿದವರು ಕಾಂಗ್ರೆಸ್ಸಿಗರು ಎಂದು ಟೀಕಿಸಿದರು. ಅವರಿದ್ದ ಕಾಲದಲ್ಲಿ ಅಂಬೇಡ್ಕರರನ್ನು ಸಹಿಸಿಕೊಳ್ಳದ ಕಾಂಗ್ರೆಸ್, ಇವತ್ತು ಅವರ ಫೋಟೊ ಇಟ್ಟು ಭಾಷಣ ಮಾಡುತ್ತದೆ; ತಾವೇ ಸಂವಿಧಾನ ರಕ್ಷಕರೆಂದು ಹೇಳುತ್ತದೆ ಎಂದು ಆಕ್ಷೇಪಿಸಿದರು.

ಜಮ್ಮು ಕಾಶ್ಮೀರದಲ್ಲಿ ಸಂವಿಧಾನಕ್ಕೆ ಬೆಲೆ ಕೊಟ್ಟಿದ್ದೀರಾ? ಎಂದ ಅವರು, ಅಂಬೇಡ್ಕರರ ಆಶಯಕ್ಕೆ ವಿರುದ್ಧವಾಗಿದ್ದ ಹಾಗೂ ಬೆಂಕಿಯಂತೆ ಸುಡುತ್ತಿದ್ದ 370 ಆರ್ಟಿಕಲ್ ಅನ್ನು ರದ್ದು ಮಾಡಿದ ಕೀರ್ತಿ ಬಿಜೆಪಿ ಮತ್ತು ಮೋದಿಜೀ ಅವರ ನೇತೃತ್ವಕ್ಕೆ ಸಲ್ಲುತ್ತದೆ ಎಂದು ವಿವರಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ