ಮೊದಲಬಾರಿ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡ ಮುಗುರುಜಾ

ಭಾನುವಾರ, 16 ಜುಲೈ 2017 (08:29 IST)
ಲಂಡನ್:ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ಮೊದಲ ಬಾರಿ ವಿಂಬಲ್ಡನ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಮೆರಿಕದ ವೀನಸ್ ವಿಲಿಯಮ್ಸ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಮುಗುರುಜಾ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.
 
ಇಂಗ್ಲೆಂಡ್ ನ ಸೆಂಟರ್‌ ಕೋರ್ಟ್‌ನಲ್ಲಿ ನಡೆದ ಕೂಟದುದ್ದಕ್ಕೂ ಆಕರ್ಷಕ ಆಟವಾಡಿದ ಮುಗುರುಜಾ 7-5, 6-0 ನೇರ ಸೆಟ್‌ಗಳಿಂದ ಜಯಭೇರಿ ಬಾರಿಸಿ ವಿಂಬಲ್ಡನ್‌ ಪ್ರಶಸ್ತಿ ತಮ್ಮದಾಗಿಸಿ ಕೊಂಡರು. 23ರ ಹರೆಯದ ಮುಗುರುಜಾ ಎರಡು ವರ್ಷಗಳ ಹಿಂದೆ ಚೊಚ್ಚಲ ಬಾರಿ ವಿಂಬಲ್ಡನ್‌ ಫೈನಲಿಗೇರಿದ ವೇಳೆ ಸೆರೆನಾಗೆ ಶರಣಾಗಿದ್ದರು.
 
ವಿಂಬಲ್ಡನ್‌ ಪ್ರಶಸ್ತಿ ಗೆದ್ದ ಸ್ಪೇನ್‌ನ ಎರಡನೇ ಆಟಗಾರ್ತಿ ಎಂಬ ಗೌರವಕ್ಕೆ ಮುಗುರುಜಾ ಪಾತ್ರರಾಗಿದ್ದಾರೆ. 23 ವರ್ಷದ ಮುಗುರುಜಾ ಮತ್ತು 37 ವರ್ಷದ ವೀನಸ್ ನಡುವಿನ ಪಂದ್ಯ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿತ್ತು. ಒಂದು ತಾಸು 17 ನಿಮಿಷ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಸಮಬಲದ ಹೋರಾಟ ಕಂಡು ಬಂದರೂ ಎರಡನೇ ಸೆಟ್‌ನಲ್ಲಿ ಮುಗುರುಜಾ ಏಕಪಕ್ಷೀಯ ಜಯ ಸಾಧಿಸಿದರು. ಈ ಮೂಲಕ 2015ರ ಫೈನಲ್‌ನಲ್ಲಿ ವೀನಸ್‌ ಅವರ ಸಹೋದರಿ ಸೆರೆನಾ ವಿಲಿಯಮ್ಸ್ ಎದುರು ಅನುಭವಿಸಿದ ಸೋಲಿನ ನಿರಾಸೆಯನ್ನು ಮರೆತರು.
 

ವೆಬ್ದುನಿಯಾವನ್ನು ಓದಿ