ಲೈಂಗಿಕ ಶೋಷಣೆ ಆರೋಪ ಮಾಡಿದ ಮಾಜಿ ಫುಟ್ಬಾಲ್ ನಾಯಕಿ ಸೋನಾ ಚೌಧರಿ

ಗುರುವಾರ, 12 ಮೇ 2016 (18:12 IST)
ಭಾರತದ ಮಹಿಳಾ ಫುಟ್ಬಾಲ್ ತಂಡದ ಮಾಜಿ ನಾಯಕಿ ಸೋನಾ ಚೌಧರಿ ತನ್ನ ''ಗೇಮ್ ಇನ್ ಗೇಮ್'' ಶೀರ್ಷಿಕೆಯ ಇತ್ತೀಚಿನ ಪುಸ್ತಕದಲ್ಲಿ ಮಹಿಳಾ ಫುಟ್ಬಾಲ್ ಆಟಗಾರರಿಗೆ ಲೈಂಗಿಕ ಶೋಷಣೆಯ ಆಘಾತಕಾರಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ.  ತಂಡದ ಆಡಳಿತಮಂಡಳಿ, ಕೋಚ್ ಮತ್ತು ಕಾರ್ಯದರ್ಶಿ ತಂಡದ ಮಹಿಳಾ ಆಟಗಾರರಿಗೆ ಹೇಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರೆಂದು ಬರೆದಿದ್ದಾರೆ.
 
ವಾರಾಣಸಿಯಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾದ ಪುಸ್ತಕದಲ್ಲಿ, ಸೋನಾ ಸಕ್ರಿಯ ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿಯಾಗಿದ್ದಾಗ ಆಟಗಾರರಿಗೆ ಉಂಟಾದ ನಾಚಿಕೆಗೇಡಿನ ಘಟನೆಗಳನ್ನು ಬರೆದಿದ್ದಾರೆ. 
 
ತಂಡದ ಮ್ಯಾನೇಜ್‌ಮೆಂಟ್ ಸಿಬ್ಬಂದಿ ತಂಡದಲ್ಲಿ ಆಟಗಾರರಿಗೆ ಸ್ಥಾನ ಸಿಗುವುದಕ್ಕೆ ತಮ್ಮ ಜತೆ ಲೈಂಗಿಕ ಸಂಬಂಧ ಹೊಂದುವಂತೆ ಬಲವಂತ ಮಾಡುತ್ತಿದ್ದರು. ಕೆಲವು ಆಟಗಾರ್ತಿಯರು ಶೋಷಣೆ ಮತ್ತು ಕಿರುಕುಳದಿಂದ ದೂರವಾಗಲು ಪರಸ್ಪರ ಸಲಿಂಗ ಕಾಮಿಗಳಂತೆ ವರ್ತಿಸುತ್ತಿದ್ದರು ಎಂದು ಬಹಿರಂಗ ಮಾಡಿದ್ದಾರೆ. 
 
ರಾಜ್ಯ ತಂಡದಲ್ಲಾಗಲಿ ಅಥವಾ ರಾಷ್ಟ್ರೀಯ ತಂಡದಲ್ಲಾಗಲೀ, ಆಟಗಾರರು ಮಾನಸಿಕ ಕಿರುಕುಳ ಎದುರಿಸುತ್ತಿದ್ದರು ಮತ್ತು ಕೆಲವು ರಾಜಿಗಳಿಗೆ ಹೊಂದಾಣಿಕೆ ಆಗಬೇಕಿತ್ತು. ದೂರದ  ಪ್ರವಾಸದಲ್ಲಿದ್ದಾಗ ಕೋಚ್‌ಗಳು ಮತ್ತು ಇತರೆ ಸಿಬ್ಬಂದಿ ಹಾಸಿಗೆಗಳನ್ನು ಆಟಗಾರ್ತಿಯರ ಕೋಣೆಗಳಲ್ಲಿ ಇರಿಸುತ್ತಿದ್ದರು. ಈ ಕುರಿತು ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. 
 
1998ರ ಏಷ್ಯಾಕಪ್‌ನಲ್ಲಿ ಸೋನಾ ಮಂಡಿ ಮತ್ತು ಬೆನ್ನುಮೂಳೆಗೆ ಗಾಯವಾಗಿ ವೃತ್ತಿಜೀವನಕ್ಕೆ ತೆರೆಬಿತ್ತು. ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಅಕಾಲಿಕ ನಿವೃತ್ತಿ ಪಡೆದು ವಾರಾಣಸಿಯಲ್ಲಿ ನೆಲೆಸಿದರು.ಈ ಕುರಿತು ಕ್ರೀಡಾ ಸಚಿವ ಸರ್ಬಾಂದಾ ಸೊನೊವಾಲ್ ಪ್ರತಿಕ್ರಿಯಿಸಿ, ಲಿಖಿತ ದೂರನ್ನು ಸಲ್ಲಿಸಿದರೆ ಸಚಿವಾಲಯವು ಈ ಕುರಿತು ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
 

ವೆಬ್ದುನಿಯಾವನ್ನು ಓದಿ