ರಿಯೊ ಒಲಿಂಪಿಕ್ಸ್‌ನಿಂದ ರಷ್ಯಾ ನಿಷೇಧಕ್ಕೆ ಒಂದು ವಾರದಲ್ಲಿ ತೀರ್ಮಾನ

ಬುಧವಾರ, 20 ಜುಲೈ 2016 (20:45 IST)
ರಿಯೊ ಒಲಿಂಪಿಕ್ಸ್‌ನಿಂದ ರಷ್ಯಾವನ್ನು ನಿಷೇಧಿಸುವ ಕುರಿತು ನಿರ್ಧರಿಸಲು ಇನ್ನೂ ಒಂದು ವಾರ ಬೇಕಾಗಿದೆ ಎಂದು ಐಒಸಿ ಹೇಳಿದೆ. ಅತೀ ದೊಡ್ಡ ಉದ್ದೀಪನ ಮದ್ದು ಸೇವನೆ ಹಗರಣವನ್ನು ನಿಭಾಯಿಸುವುದು ಐಒಸಿಗೆ ತುಂಬಾ ಯಾತನಾಮಯವಾಗಿ ಪರಿಣಮಿಸಿದ್ದು, ಆಗಸ್ಟ್ 5ರಂದು ರಿಯೊ ಉದ್ಘಾಟನಾ ಸಮಾರಂಭಕ್ಕೆ 10 ದಿನಗಳಿಂದ ಕಡಿಮೆ ಅವಧಿಯಲ್ಲಿ  ಅಂತಿಮ ತೀರ್ಪನ್ನು ನೀಡಬೇಕಾಗಿದೆ. 
 
 ರಷ್ಯಾ ಸ್ಪರ್ಧಿಗಳಿಗೆ ಸಂಪೂರ್ಣ ನಿಷೇಧ ಹೇರುವ ಮುಂಚೆ ಕ್ರೀಡಾ ಪಂಚಾಯಿತಿ ಕೋರ್ಟ್ ತೀರ್ಪಿನವರೆಗೆ ಕಾಯಲು ಐಒಸಿ ಎಕ್ಸಿಕ್ಯೂಟಿವ್ ನಿರ್ಧರಿಸಿದೆ. ಎಲ್ಲಾ ಕಾನೂನಿನ ಆಯ್ಕೆಗಳನ್ನು ಪರಿಶೀಲಿಸಿ ಒಲಿಂಪಿಕ್ ಇತಿಹಾಸದಲ್ಲೇ ಮುಖ್ಯವಾದ ನಿರ್ಧಾರವನ್ನು ಕೈಗೊಳ್ಳುವ ಇಂಗಿತವನ್ನು ಐಒಸಿ ನೀಡಿದೆ. 
 
ಐಒಸಿ ಈಗಾಗಲೇ ರಷ್ಯಾದ ಕ್ರೀಡಾಸಚಿವ ವಿಟಾಲಿ ಮುಟ್ಕೊ ಮತ್ತು ಸಚಿವಾಲಯದ ಎಲ್ಲಾ ಅಧಿಕಾರಿಗಳಿಗೆ ರಿಯೊ ಒಲಿಂಪಿಕ್ಸ್‌ನಿಂದ ನಿಷೇಧ ವಿಧಿಸಿದೆ. ಕೆನಡಾ ವಕೀಲ ರಿಚರ್ಡ್ ಮೆಕ್‌ಲ್ಯಾರೆನ್ ಬಹಿರಂಗ ಮಾಡಿದ ವರದಿಯಲ್ಲಿ ರಷ್ಯಾದಲ್ಲಿ ಉದ್ದೀಪನ ಮದ್ದುಸೇವನೆ ವಂಚನೆಯ  ರಾಷ್ಟ್ರ ನಿರ್ದೇಶಿತ ಫೇಲ್ ಸೇಫ್ ವ್ಯವಸ್ಥೆಯಿತ್ತು ಎಂದು ಹೇಳಲಾಗಿದೆ. ರಷ್ಯಾ ಕ್ರಮಗಳು ಆಘಾತಕಾರಿಯಾಗಿದ್ದು, ಕ್ರೀಡೆಯ ಪ್ರಾಮಾಣಿಕ ನಡೆಯನ್ನು ವಿದ್ವಂಸಗೊಳಿಸಿದೆ ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ