ಚೆನ್ನೈ: ಬ್ರೆಜಿಲ್‌ನ ಲೆಜೆಂಡ್ ಫುಟ್ಬಾಲ್ ದೈತ್ಯ ಪ್ರತಿಭೆ ರೊನಾಲ್ಡಿನೊ ಐದು ಗೋಲುಗಳನ್ನು ಸ್ಕೋರ್ ಮಾಡಿ ತಮ್ಮ ತಂಡ ಗೋವಾ ಫೈವ್ಸ್ ಪ್ರೀಮಿಯರ್ ಫುಟ್ಸಾಲ್ ಪಂದ್ಯದಲ್ಲಿ ಬೆಂಗಳೂರು ಫೈವ್ಸ್ ವಿರುದ್ಧ 7-2ರಿಂದ ಜಯಗಳಿಸಲು ನೆರವಾದರು. ಮೊದಲ ಪಂದ್ಯದಲ್ಲಿ ವೇಗವನ್ನು ಕಾಯ್ದುಕೊಳ್ಳಲು ತಿಣುಕಾಡಿದ್ದ ಬ್ರೆಜಿಲ್ ಆಟಗಾರ, ಈ ಪಂದ್ಯದಲ್ಲಿ ಆರಂಭದಲ್ಲೇ ಉತ್ತಮ ಆಟವಾಡಿದರು.
ಬಾರ್ಸೆಲೋನಾ ಲೆಜೆಂಡ್ 6ನೇ ನಿಮಿಷದಲ್ಲಿ ಮನೋಜ್ಞ ಗೋಲು ಬಾರಿಸಿದಾಗ ಪ್ರೇಕ್ಷಕರು ಹರ್ಷೋದ್ಗಾರ ಮಾಡಿದರು. ಬೆಂಗಳೂರಿನ ಕಡೆ ಮ್ಯಾಕ್ಸಿಮಿಲಿಯಾನೊ ಗೋಲಿಯನ್ನು ದಾಟಿ ಗೋಲನ್ನು ಗಳಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಬೆಂಗಳೂರಿನ ಜೊನಾಥನ್ ಪಯರ್ಸ್ ಪಾಸ್ ಸ್ವೀಕರಿಸಿ ಎಡಗಾಲಿನಿಂದ ಗೋಲುಪೆಟ್ಟಿಗೆಯೊಳಕ್ಕೆ ಚೆಂಡನ್ನು ಹಾಕುವ ಮೂಲಕ ಬೆಂಗಳೂರಿಗೆ 2-1 ಮುನ್ನಡೆ ಸಿಕ್ಕಿತು. ಆದರೆ ಬೆಂಗಳೂರು ತಂಡದ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ರೊನಾಲ್ಡಿನೊ ಇಬ್ಬರು ಗೋಲುರಕ್ಷಕರು ಮತ್ತು ಗೋಲ್ ಕೀಪರ್ ಅವರನ್ನು ವಂಚಿಸಿ ಕರಾರುವಾಕ್ ಶಾಟ್ ಹೊಡೆದು ಗೋಲಾಗಿಸಿದರು.