ದೀಪಾ ಕರ್ಮಾಕರ್ ವಿರುದ್ಧ ಪ್ರಚೋದಿಸಲು ಯತ್ನಿಸಿದ ಅಭಿಮಾನಿಗೆ ಬಿಂದ್ರಾ ಕೊಟ್ಟ ಉತ್ತರ ಓದಿ

ಶುಕ್ರವಾರ, 2 ಸೆಪ್ಟಂಬರ್ 2016 (18:15 IST)
ಒಟ್ಟಾರೆ ನಿರಾಶಾದಾಯಕ ಪ್ರವಾಸವಾಗಿದ್ದರೂ ಸಹ ರಿಯೋ ಓಲಂಪಿಕ್ಸ್‌ನಲ್ಲಿ  ಭಾರತದ ಕಡೆಯಿಂದ ಕೆಲವು ಗಮನಾರ್ಹ ಪ್ರದರ್ಶನಗಳು ಸಹ ಕಂಡು ಬಂದವು. 

ಈ ಬಾರಿಯ ಓಲಂಪಿಕ್ಸ್‌ನಲ್ಲಿ ಭಾರತಕ್ಕೆ ಕೀರ್ತಿ ತಂದವರಲ್ಲಿ ಪಿ.ಪಿ.ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅಷ್ಟೇ ಅಲ್ಲದೇ ಶೂಟರ್ ಅಭಿನವ್ ಬಿಂದ್ರಾ, ಲಲಿತಾ ಬಾಬರ್ ಮತ್ತು ದತ್ತು ಭೋಕನಾಲ್ ತಮ್ಮ ಅತ್ಯುತ್ತಮ ಹೋರಾಟದಿಂದ ಗಮನ ಸೆಳೆದರು. 
 
ಆದರೆ ಕ್ರೀಡಾಪಟುಗಳು ದೇಶಕ್ಕೆ ಹಿಂತಿರುಗುತ್ತಿದ್ದಂತೆ ಎಲ್ಲರೂ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದು ಸಿಂಧು, ಸಾಕ್ಷಿ ಮತ್ತು ದೀಪಾ ಅವರ ಮೇಲೆ. ಸರ್ಕಾರದ ಕಡೆಯಿಂದ ಪ್ರಶಸ್ತಿ, ಬಹುಮಾನಗಳು, ಹಣದ ಹೊಳೆ ಇವರಿಗೆ ಹರಿದು ಬಂತು. ಪ್ರತಿದಿನ ಅವರು ಸುದ್ದಿಯ ಮುಖ್ಯ ಪುಟದಲ್ಲಿದ್ದರು. 
 
ಈ ಮೂವರಿಗೆ ಮಾತ್ರ ಪ್ರಾಧಾನ್ಯತೆ ನೀಡಿದ್ದು 2008 ಬೀಜಿಂಗ್ ಓಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಬಿಂದ್ರಾ ಅಭಿಮಾನಿಯೊಬ್ಬನಿಗೆ ಅಸಮಾಧಾನ ತರಿಸಿರಬೇಕು. 
 
"ಸಹೋದರ ದೆಹಲಿಯಲ್ಲಿ ನಡೆಯುತ್ತಿರುವ ಸನ್ಮಾನ ಕಾರ್ಯಕ್ರಮಗಳಲ್ಲಿ ನೀವ್ಯಾಕೆ ಕಾಣುತ್ತಿಲ್ಲ? ದೀಪಾ ಅವರಿಗೆ ಈ ಪರಿಯಲ್ಲಿ ಸ್ವಾಗತ ಸಿಗುತ್ತಿರಬೇಕಾದರೆ ನಿಮಗ್ಯಾಕೆ ಸಿಗುತ್ತಿಲ್ಲ", ಎಂದಾತ ಟ್ವೀಟ್ ಮಾಡಿದ್ದಾನೆ.
 
ಈ ಟ್ವೀಟ್‌ನಿಂದ ಪ್ರಚೋದನೆಗೆ ಒಳಪಡದ ಅಭಿನವ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಬಹುಶಃ ಈ ಉತ್ತರವನ್ನು ಅವರಿಂದ ಮಾತ್ರ ನಾವು ನಿರೀಕ್ಷಿಸಲು ಸಾಧ್ಯ, 
 
"@ಜಸ್ದೀಪ್2014 ದೀಪಾ ಜಿಮ್ನಾಸ್ಟಿಕ್‌ನಲ್ಲಿ ಪಥ್ ಬ್ರೇಕರ್. ಆಕೆ ಇಷ್ಟೆಲ್ಲಾ ಗೌರವಕ್ಕೆ ಪಾತ್ರಳಾಗುತ್ತಿರುವುದು ನನಗೆ ಸಂತೋಷದ ವಿಷಯ. ನನಗೆ ಸಿಗಬೇಕಿದ್ದು 2008ರಲ್ಲಿ ಸಿಕ್ಕಿಯಾಗಿದೆ", ಎಂದು ಅವರು ವಿನಯವಾಗಿ ಉತ್ತರಿಸಿದ್ದಾರೆ. 
 
ಬಿಂದ್ರಾ ಅವರ ಈ ಉತ್ತರಕ್ಕೆ ಅವರ ಟ್ವಿಟರ್ ಅನುಯಾಯಿಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಕೇವಲ್ ಚಾಂಪಿಯನ್ ಮಾತ್ರ ಇಂತಹ ಉತ್ತರವನ್ನು ನೀಡಲು ಸಾಧ್ಯ, ನೀವು ಕೂಡ ನಮಗೆ ಚಾಂಪಿಯನ್ ಎಂದು ಪ್ರತಿ ಟ್ವೀಟ್‌ಗಳು ಬಂದಿವೆ. 

ವೆಬ್ದುನಿಯಾವನ್ನು ಓದಿ