ರಿಯೋ ಒಲಿಂಪಿಕ್ಸ್‌ನಿಂದ ರಷ್ಯಾದ 8 ಮಂದಿ ವೇಟ್‌ಲಿಫ್ಟಿಂಗ್ ತಂಡಕ್ಕೆ ನಿಷೇಧ

ಶನಿವಾರ, 30 ಜುಲೈ 2016 (16:42 IST)
ರಷ್ಯಾ ವೇಟ್ ಲಿಫ್ಟಿಂಗ್ ತಂಡದ ಬಲಿಷ್ಟ 8 ಮಂದಿಯ ತಂಡವನ್ನು ರಿಯೋ ಕ್ರೀಡಾಕೂಟದಿಂದ ಉದ್ದೀಪನಾ ಮದ್ದು ಸೇವನೆಗೆ ಸಂಬಂಧಿಸಿದಂತೆ ನಿಷೇಧಿಸುವ ಮೂಲಕ ರಷ್ಯಾಗೆ ಭಾರೀ ಪೆಟ್ಟು ಬಿದ್ದಿದೆ. ವೇಟ್‌ಲಿಫ್ಟಿಂಗ್ ಕ್ರೀಡೆಯ ಪ್ರಾಮಾಣಿಕತೆಗೆ ಅನೇಕ ಬಾರಿ ಗಂಭೀರ ಧಕ್ಕೆಯಾಗಿದ್ದು,  ಕ್ರೀಡೆಯ ಸ್ಥಿತಿಗತಿ ರಕ್ಷಣೆಗೆ ಸೂಕ್ತ ದಿಗ್ಬಂಧನವನ್ನು ಹೇರಲಾಗಿದೆ ಎಂದು  ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಒಕ್ಕೂಟ ನೀಡಿದ ಹೇಳಿಕೆಯಲ್ಲಿ  ತಿಳಿಸಿದೆ.
 
ಇದರಿಂದಾಗಿ ರಿಯೊ ಕ್ರೀಡಾಕೂಟದಿಂದ 117 ರಷ್ಯಾ ಸ್ಪರ್ಧಿಗಳನ್ನು ನಿಷೇಧಿಸಿದಂತಾಗಿದ್ದು, ಇವರ ಪೈಕಿ 67 ಟ್ರಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳೂ ಸೇರಿದ್ದಾರೆ. ನಿಷೇಧಿತ ವೇಟ್ ಲಿಫ್ಟಿಂಗ್ ತಂಡದಲ್ಲಿದ್ದ ಒಕುಲೋವ್ ವಿಶ್ವಚಾಂಪಿಯನ್ನರಾಗಿದ್ದು, ಆಲ್ಬೆಗೋವ್ ಕಂಚಿನ ಪದಕ ಗೆದ್ದಿದ್ದರು ಮತ್ತು ಕಾಶಿರಿನಾ ರಜತ ಪದಕ ಗೆದ್ದಿದ್ದರು.
 
ಸ್ಫೋಟಕ ಮೆಕ್‌ಲಾರೆನ್ ವರದಿಯಲ್ಲಿ ಇನ್ನೂ ನಾಲ್ವರನ್ನು ಪಟ್ಟಿ ಮಾಡಲಾಗಿದ್ದು, ರಷ್ಯಾದಲ್ಲಿ ವ್ಯಾಪಕ ರಾಷ್ಟ್ರ ಪ್ರಾಯೋಜಿತ ಉದ್ದೀಪನ ಮದ್ದು ಸೇವನೆ ಹಗರಣ ಬಯಲಾಗಿತ್ತು. ಈ ವರದಿಯ ಬಳಿಕ ಐಒಸಿಗೆ ರಷ್ಯಾವನ್ನು ಒಲಿಂಪಿಕ್ಸ್‌ನಿಂದ ಸಂಪೂರ್ಣವಾಗಿ ನಿಷೇಧಿಸಬೇಕೆಂಬ ಭಾರೀ ಒತ್ತಡ ಹೇರಲಾಗಿತ್ತು. ಆದರೆ ಐಒಸಿ ಯಾರನ್ನು ನಿಷೇಧಿಸಬೇಕೆಂಬ ಬಗ್ಗೆ ವೈಯಕ್ತಿಕ ಒಕ್ಕೂಟಗಳ ತೀರ್ಮಾನಕ್ಕೆ ಬಿಟ್ಟಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ