ಓಲಂಪಿಕ್ ವಿಜೇತೆ ಸಾಕ್ಷಿ ವಿರುದ್ಧ ಹಣದಾಹದ ಆರೋಪ

ಶನಿವಾರ, 3 ಸೆಪ್ಟಂಬರ್ 2016 (12:56 IST)
ರಿಯೋ ಓಲಂಪಿಕ್ಸ್‌ನಲ್ಲಿ ದೇಶಕ್ಕೆ ಕಂಚಿನ ಪದಕದ ಗೌರವವನ್ನು ತಂದುಕೊಟ್ಟ ಕುಸ್ತಿ ಪಟು ಸಾಕ್ಷಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾದರೂ ಅವರು 5 ಲಕ್ಷ ರೂಪಾಯಿಯನ್ನು ಡಿಮ್ಯಾಂಡ್ ಮಾಡುತ್ತಾರೆ ಎಂದು ಆರೋಪಿಸಲಾಗುತ್ತಿದೆ. 

ಹರಿಯಾಣ ಹಿಂದೂ ಮಹಾಸಭಾ ಈ ಆರೋಪ ಮಾಡಿದ್ದು ತಾವು ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸುವಂತೆ ಕೇಳಿ ಫೋನ್ ಕರೆ ಮಾಡಿದಾಗ ಅದನ್ನು ಸ್ವೀಕರಿಸಿದ  ಸಾಕ್ಷಿ ತಾಯಿ 5 ಲಕ್ಷ ರೂಪಾಯಿ ನೀಡಿದರೆ ಮಾತ್ರ ಸಾಕ್ಷಿ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾಳೆ ಎಂದು ಹೇಳಿದರು ಎಂದು ಹಿಂದೂ ಮಹಾಸಭಾ ದೂರಿದೆ. ಅಷ್ಟೇ ಅಲ್ಲದೇ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್‌ನ್ನು ಸಹ ಬಿಡುಗಡೆ ಮಾಡಿದೆ.
 
ಹಿಂದೂ ಮಹಾಸಭಾ ಖೇಲ್ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಬೇಕೆಂದು ಸಮಯ ಕೇಳಿದಾಗ ಪೋನ್‌ನಲ್ಲಿ ಮಾತನ್ನಾಡಿದ ಸಾಕ್ಷಿ ತಾಯಿ, ಸನ್ಮಾನ ಸಮಾರಂಭದಲ್ಲಿ ನಗದು ಬಹುಮಾನ ಎಷ್ಟಿರುತ್ತದೆ ಎಂದು ಕೇಳಿದರು. ಸನ್ಮಾನ ಕೇವಲ ಸನ್ಮಾನವಾಗಿರುತ್ತದೆ. ನಗದು ಮೊತ್ತ ಎಷ್ಟು ಬೇಕಾದರೂ ಆಗಿರಬಹುದು ಎಂದು ನಾವು ಉತ್ತರಿಸಿದೆವು. ಅದಕ್ಕವರು ಕನಿಷ್ಠ 5 ಲಕ್ಷ ರೂಪಾಯಿಯನ್ನು ನೀಡುತ್ತೇವೆ ಎಂದಾದರೆ ಮಾತ್ರ ನಾವು ಸಮಯವನ್ನು ನೀಡಬಹುದೆಂದರು ಎಂದು ಹಿಂದೂ ಮಹಾಸಭಾ ಆರೋಪಿಸಿದೆ. 
 
ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಾಕ್ಷಿ ತಾಯಿ, ಮಗಳು ಸೆಲೆಬ್ರಿಟಿ ಆದ ಬಳಿಕ ಅವರ ಪ್ರಾಯೋಜಕತ್ವವನ್ನು ಜೆಎಸ್‌ಡಬ್ಲ್ಯೂ ಪಡೆದುಕೊಂಡಿದೆ. ಆಕೆ ಭಾಗವಹಿಸುವ ಕಾರ್ಯಕ್ರಮಗಳ ನಿರ್ಧಾರವೂ ಅವರದ್ದೇ ಎಂದು ಹೇಳಿದ್ದಾರೆ.   
 
ಆದರೆ ಈ ಆಡಿಯೋ ಕ್ಲಿಪ್ ಎಷ್ಟರ ಮಟ್ಟಿಗೆ ಅಸಲಿ ಎಂಬುದಿನ್ನು ಖಚಿತವಾಗಿಲ್ಲ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ