ರಿಯೋ ಒಲಿಂಪಿಕ್ಸ್‌ನಲ್ಲಿ ಪಾಳ್ಗೊಳ್ಳುತ್ತಿರುವ ಸಿರಿಯಾದ ನಿರಾಶ್ರಿತೆ ಮಾರ್ಡಿನಿ

ಮಂಗಳವಾರ, 2 ಆಗಸ್ಟ್ 2016 (14:18 IST)
ನವದೆಹಲಿ: ಕಳೆದ ವರ್ಷ ಸಿರಿಯಾದ ನಿರಾಶ್ರಿತೆ ಯುಸ್ರಾ ಮಾರ್ಡಿನಿ ಯುರೋಪ್‌ಗೆ ತೆರಳುವಾಗ ದೋಣಿ ಮುಳುಗಿದ್ದರಿಂದ ಸಮುದ್ರದಲ್ಲಿ ಈಜಿ ಜೀವಸಹಿತ ಪಾರಾಗಿದ್ದಳು. ಈ ತಿಂಗಳು ರಿಯೋ ಒಲಿಂಪಿಕ್ಸ್‌ನಲ್ಲಿ ಹದಿಹರೆಯದ ಬಾಲಕಿ ಸ್ಪರ್ಧಾಳುವಾಗಿ ಈಜುತ್ತಿದ್ದಾಳೆ. ಒಲಿಂಪಿಕ್ ನಿರಾಶ್ರಿತ ತಂಡದ ಪ್ರಪ್ರಥಮ ಸದಸ್ಯೆಯಾಗಿರುವ ಯೂಸ್ರಾ ಮತ್ತು ಸಹೋದರಿ ಸಾರಾ ಮೆಡಿಟರೇನಿಯನ್ ಸಮುದ್ರದಲ್ಲಿ ಗ್ರೀಸ್‌ಗೆ ತೆರಳುವಾಗ ದೋಣಿ ಮುಳುಗುವ ಹಂತದಲ್ಲಿತ್ತು.

 ಯೂಸ್ರಾ ಇನ್ನೊಬ್ಬ ನಿರಾಶ್ರಿತರ ಜತೆ ಸಮುದ್ರಕ್ಕೆ ಹಾರಿ ದೋಣಿಯನ್ನು ನೀರಿನಲ್ಲಿ ಮೂರು ಗಂಟೆಗಳ ಕಾಲ ಎಳೆದು 19 ಜನರ ಪ್ರಾಣ ಉಳಿಸಿದ್ದರು. ರಿಯೋದಲ್ಲಿ 100 ಮೀಟರ್ ಫ್ರೀಸ್ಟೈಲ್‌ನಲ್ಲಿ ಭಾಗವಹಿಸುತ್ತಿರುವ ಮಾರ್ಡಿನಿ , ಒಲಿಂಪಿಕ್ ಉದ್ಘಾಟನೆ ಸಮಾರಂಭದಲ್ಲಿ ಒಲಿಂಪಿಕ್ ಧ್ವಜದ ಹಿಂದೆ ಪಥಸಂಚಲನ ನಡೆಸುವ ನಿರಾಶ್ರಿತ ತಂಡದ 10 ಅಥ್ಲೀಟ್‌ಗಳ ಪೈಕಿ ಒಬ್ಬಳಾಗಿದ್ದಾಳೆ.
 
ಟರ್ಕಿಯಿಂದ ಮೆಡಿಟರೇನಿಯನ್ ದಾಟುವಾಗ ನೂರಾರು ನಿರಾಶ್ರಿತರು ಪ್ರಾಣ ಕಳೆದುಕೊಂಡಿದ್ದರು. ಮಾರ್ಗಮಧ್ಯೆ ದೋಣಿ ಮುಳುಗಿದರೆ ಎಲ್ಲರಿಗೂ ನೆರವು ನೀಡುವುದು ಅಸಾಧ್ಯವಾದ್ದರಿಂದ ನಾವು ಪ್ರಾಣ ಉಳಿಸಿಕೊಳ್ಳೋಣ ಎಂದು ಸಾರಾ ಸೋದರಿಗೆ ತಿಳಿಸಿದ್ದಳು. ಆದರೆ ಎಂಜಿನ್ ನಿಂತು ದೋಣಿ ಮುಳುಗತೊಡಗಿದಾಗ ಉಳಿದವರು ಮುಳುಗದಂತೆ ಕಾಪಾಡಲು ಅವರಿಬ್ಬರ ಹೃದಯ ತುಡಿಯಿತು. ತಾವು ನೀರಿಗಿಳಿದು ದೋಣಿಯನ್ನು ಎಳೆದುಕೊಂಡು ಹೋಗಿ 19 ಜನರನ್ನು ಜೀವಸಹಿತ ಪಾರುಮಾಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ