ಗೌರಿಕಾ ಸಿಂಗ್ 13ರ ಅತೀ ಕಿರಿಯ ಪ್ರಾಯದಲ್ಲಿ ರಿಯೋ ಒಲಿಂಪಿಕ್ ಈಜುಪಟು

ಮಂಗಳವಾರ, 2 ಆಗಸ್ಟ್ 2016 (13:35 IST)
ನೇಪಾಳಿ ಈಜುಪಟು ಗೌರಿಕಾ ಸಿಂಗ್ 13 ವರ್ಷ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಸ್ಪರ್ಧಿಯಾಗಿದ್ದಳು. ಈಗ ರಿಯೋದಲ್ಲಿ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾಗವಹಿಸುತ್ತಿರುವ ಅತೀ ಕಿರಿಯ ವಯಸ್ಸಿನ ಸ್ಪರ್ಧಿ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದಾಳೆ. ಲಂಡನ್ ಮೂಲದ ಶಾಲಾಬಾಲಕಿ ಇಂಗ್ಲೀಷ್ ಕ್ಲಬ್ ಬಾರ್ನೆಟ್ ಕಾಪ್ತಾಲ್‌‌ ಈಜುಪಟುವಾಗಿದ್ದು, ತಾನು ಎದುರಿಸಲಿರುವ ಸಾಹಸಕ್ಕೆ ಹೆದರಿಕೊಂಡಿಲ್ಲ. 

ಈಗಾಗಲೇ ಸುಮಾರು 9000 ಜನರ ಜೀವ ತೆಗೆದುಕೊಂಡ ನೇಪಾಳದ ವಿನಾಶಕಾರಿ ಭೂಕಂಪದ ಕರಾಳತೆಯಿಂದ ಅವಳು ಬದುಕಿಬಂದಿದ್ದಳು.  ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ತನ್ನ ತಾಯಿ ಗಾರಿಮಾ, ಕಿರಿಯ ಸೋದರ ಸೌರೆನ್ ಜತೆ ತೆರಳಿದ್ದಾಗ ಅವಳಿಗೆ ಈ ಭಯಾನಕ ಅನುಭವವಾಗಿತ್ತು.
 
ಕಾಠ್ಮಂಡುವಿನ ಐದನೇ ಮಹಡಿ ಕಟ್ಟಡದಲ್ಲಿದ್ದ ಕುಟುಂಬ ಭೂಕಂಪಕ್ಕೆ ಕಟ್ಟಡ ಅದುರುತ್ತಿದ್ದಂತೆ ಮೇಜಿನ ಕೆಳಗೆ ಆಶ್ರಯ ಪಡೆದು ಲಘು ಕಂಪನಗಳು ನಿಂತ ಮೇಲೆ ಕೆಳಕ್ಕೆ ಹೋಗಿದ್ದರು. ಅದೃಷ್ಟವಶಾತ್ ಇದು ಹೊಸ ಕಟ್ಟಡವಾದ್ದರಿಂದ ಇತರೆ ಕಟ್ಟಡಗಳ ರೀತಿ ಕುಸಿಯಲಿಲ್ಲ ಎಂದು ಹೇಳುತ್ತಾಳೆ.
 
ಗೌರಿಕಾ ರಷ್ಯಾ ಕಜನ್ ವಿಶ್ವಚಾಂಪಿಯನ್‌ಷಿಪ್‌ನಲ್ಲಿ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಭಾಗವಹಿಸಿದ್ದಳು. ಭಾರತದಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮೂರು ಕಂಚು ಮತ್ತು ಒಂದು ಬೆಳ್ಳಿ ಪದಕ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದಳು.

ಗೌರಿಕಾ ಅತೀ ಕಿರಿಯ ಒಲಿಂಪಿಯನ್ ಆಗಿರುವುದು ನಂಬಲಾಗದ ಸಂಗತಿಯಾಗಿದ್ದು,ಅವಳು ಹೇಗೆ ಒತ್ತಡ ನಿಭಾಯಿಸುತ್ತಾಳೆಂಬುದು ಅಚ್ಚರಿಯಾಗಿದೆ ಎಂದು ಅವಳ ತಂದೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ